ನವದೆಹಲಿ: ಲೋಕಸಭಾ ಸಮಿತಿ ಖಡಕ್ ವಾರ್ನಿಂಗ್ ನೀಡಿ, ನೀರು, ವಿದ್ಯುತ್ ಕಡಿತಗೊಳಿಸುವ ಬೆದರಿಕೆ ಒಡ್ಡಿದರೂ ಇನ್ನೂ 80ಕ್ಕೂ ಹೆಚ್ಚು ಮಾಜಿ ಸಂಸದರು ತಮ್ಮ ಅಧಿಕೃತ ಬಂಗಲೆಗಳನ್ನು ಖಾಲಿ ಮಾಡಿಲ್ಲ ಎಂದು ಮೂಲಗಳಿಂದ ತಿಳಿದು ಬಂದಿದೆ.
ಈಗ ಅನಧಿಕೃತವಾಗಿ ಸಾರ್ವಜನಿಕ ನಿವಾಸದಲ್ಲಿ ತಂಗಿರುವ ವ್ಯಕ್ತಿಗಳನ್ನು ಹೊರ ಹಾಕುವ ಕಾಯ್ದೆಯಡಿ ಬಲವಂತವಾಗಿ ಕ್ರಮ ಕೈಗೊಂಡು ಮಾಜಿ ಸಂಸದರನ್ನು ಬಂಗಲೆಗಳಿಂದ ಹೊರ ಹಾಕುವ ಕುರಿತು ಸರ್ಕಾರ ಚಿಂತನೆ ನಡೆಸಿದೆ ಎಂದು ತಿಳಿದುಬಂದಿದೆ.
Advertisement
ಆಗಸ್ಟ್ 19ರಂದು ಸಿ.ಆರ್.ಪಾಟೀಲ್ ನೇತೃತ್ವದ ಲೋಕಸಭಾ ವಸತಿ ಸಮಿತಿಯು ಬಂಗಲೆಗಳನ್ನು ಖಾಲಿ ಮಾಡದ ಸುಮಾರು 200 ಮಾಜಿ ಸಂಸದರಿಗೆ ಒಂದು ವಾರದೊಳಗೆ ಖಾಲಿ ಮಾಡುವಂತೆ ಸಮಯ ನಿಗದಿಪಡಿಸಿತ್ತು. ಖಾಲಿ ಮಾಡದಿದ್ದಲ್ಲಿ ಮೂರು ದಿನಗಳಲ್ಲಿ ಬಂಗಲೆಯ ವಿದ್ಯುತ್, ನೀರು ಹಾಗೂ ಗ್ಯಾಸ್ ಸಂಪರ್ಕ ಸೇರಿದಂತೆ ಎಲ್ಲ ಸೌಲಭ್ಯಗಳನ್ನು ಕಡಿತಗೊಳಿಸುವಂತೆ ಅದೇಶಿಸಿತ್ತು.
Advertisement
Advertisement
ಸಮಿತಿಯ ಆದೇಶದ ನಂತರ ಬಹುತೆಕ ಮಾಜಿ ಸಂಸದರು ಅದೀಕೃತ ನಿವಾಸಗಳನ್ನು ಖಾಲಿ ಮಾಡಿದ್ದಾರೆ. ಆದರೆ, ಇತ್ತೀಚಿನ ಪಟ್ಟಿಯ ಪ್ರಕಾರ ಇನ್ನೂ 82 ಮಾಜಿ ಸಂಸದರು ಬಂಗಲೆಗಳನ್ನು ಖಾಲಿ ಮಾಡಿಲ್ಲ ಎಂದು ತಿಳಿದು ಬಂದಿದೆ.
Advertisement
ಮಾಜಿ ಸಂಸದರು ತಮ್ಮ ಅಧಿಕೃತ ನಿವಾಸಗಳನ್ನು ಖಾಲಿ ಮಾಡುವಂತೆ ಕೇಳಿಕೊಳ್ಳುವುದು ಸಮಿತಿಯ ನಿರ್ಧಾರವಾಗಿತ್ತು. ಈಗ ಅದರಲ್ಲಿ ಕೆಲವರು ಸಮಿತಿಯ ಆದೇಶಕ್ಕೂ ಬೆಲೆ ನೀಡಿಲ್ಲ ಎಂದಾದರೆ, ಇದು ಸಹಿಸಿಕೊಳ್ಳುವಂತಹದ್ದಲ್ಲ. ಅವರ ವಿರುದ್ಧ ಕಠಿಣ ಕ್ರಮಕೈಗೊಳ್ಳಲಾಗುವುದು ಎಂದು ಲೋಕಸಭಾ ವಸತಿ ಸಮಿತಿಯ ಮೂಲಗಳು ತಿಳಿಸಿವೆ.
ಮೇ 25ರಂದು ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು 16ನೇ ಲೋಕಸಭೆಯನ್ನು ವಿಸರ್ಜನೆ ಮಾಡಿದ್ದರು. ಬಳಿಕ ಎರಡನೇ ಬಾರಿಗೆ ಮೋದಿ ಸರ್ಕಾರ ಅಧಿಕಾರಕ್ಕೆ ಬಂತು. ನಿಯಮದ ಪ್ರಕಾರ, ಲೋಕಸಭೆ ವಿಸರ್ಜನೆಗೊಂಡ 1 ತಿಂಗಳೊಳಗೆ ಮಾಜಿ ಸಂಸದರು ಸರ್ಕಾರಿ ನಿವಾಸಗಳನ್ನು ಖಾಲಿ ಮಾಡಬೇಕು. ಆದರೆ ಅವಧಿ ಮೀರಿ 3 ತಿಂಗಳು ಕಳೆಯುತ್ತಾ ಬಂದಿದ್ದರೂ 80 ಮಾಜಿ ಸಂಸದರು ಮಾತ್ರ ನಿವಾಸ ಖಾಲಿ ಮಾಡಿಲ್ಲ.
ಮಾಜಿ ಸಂಸದರು ಸರ್ಕಾರಿ ನಿವಾಸವನ್ನು ಖಾಲಿ ಮಾಡದ ಕಾರಣ ಹೊಸ ಸಂಸದರಿಗೆ ವಸತಿ ಕಲ್ಪಿಸುವುದು ಕಷ್ಟವಾಗಿದೆ. ಸದ್ಯ ನೂತನ ಸಂಸದರು ಉಳಿದುಕೊಳ್ಳಲು ತಾತ್ಕಾಲಿಕ ವ್ಯವಸ್ಥೆ ಮಾಡಲಾಗಿದೆ. ಈ ಹಿನ್ನೆಲೆಯಲ್ಲಿ ಸರ್ಕಾರ ಕಟ್ಟುನಿಟ್ಟಿನ ಕ್ರಮಕ್ಕೆ ಮುಂದಾಗಿದೆ.
ಅನಧಿಕೃತವಾಗಿ ಸಾರ್ವಜನಿಕ ನಿವಾಸದಲ್ಲಿ ತಂಗಿರುವ ವ್ಯಕ್ತಿಗಳನ್ನು ಹೊರ ಹಾಕುವ ತಿದ್ದುಪಡಿ ಮಸೂದೆ ಈ ಬಾರಿಯ ಸಂಸತ್ತಿನಲ್ಲಿ ಮಂಡನೆಯಾಗಿ ಎರಡು ಸದನದಲ್ಲಿ ಪಾಸ್ ಆಗಿತ್ತು.
ಈ ಕಾಯ್ದೆ ಅನ್ವಯ ಆರಂಭದಲ್ಲಿ ನೋಟಿಸ್ ನೀಡಲಾಗುತ್ತದೆ. ಬಳಿಕ ಶೋಕಾಸ್ ನೋಟಿಸ್ ನೀಡಿ ತನಿಖೆ ನಡೆಸಲಾಗುತ್ತದೆ. ಅಷ್ಟೇ ಅಲ್ಲದೇ ಎಸ್ಟೇಟ್ ಅಧಿಕಾರಿಗೆ ತೆರವುಗೊಳಿಸುವಂತೆ ಸೂಚಿಸಲಾಗುತ್ತದೆ. ಬಂಗಲೆಯಲ್ಲಿ 5 ತಿಂಗಳಿಗೂ ಹೆಚ್ಚು ದಿನಗಳ ಕಾಲ ವಾಸವಾಗಿದ್ದಲ್ಲಿ 10 ಲಕ್ಷ ರೂ. ದಂಡ ವಿಧಿಸುವ ಅಂಶ ಕಾಯ್ದೆಯಲ್ಲಿದೆ.
ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಅವರು ಕಳೆದ ವರ್ಷ ಲಕ್ನೋನಲ್ಲಿರುವ ಸರ್ಕಾರಿ ಬಂಗಲೆ ಖಾಲಿ ಮಾಡಲು 2 ವರ್ಷಗಳ ಕಾಲಾವಕಾಶವನ್ನು ಕೇಳಿ ಕೆಂಗಣ್ಣಿಗೆ ಗುರಿಯಾಗಿದ್ದರು. ಅಲ್ಲದೆ, ಬಿಎಸ್‍ಪಿ ಮುಖ್ಯಸ್ಥೆ ಮಾಯಾವತಿ ಅವರು ಉತ್ತರ ಪ್ರದೇಶದ ಮುಖ್ಯಮಂತ್ರಿಯಾಗಿದ್ದಾಗ ಅವರ ಅಧಿಕೃತ ನಿವಾಸವನ್ನು ಬಿಎಸ್‍ಪಿ ಸಂಸ್ಥಾಪಕ ಹಾಗೂ ಮಾರ್ಗದರ್ಶಕ ಕನ್ಶಿ ರಾಮ್ ಅವರ ಸ್ಮಾರಕವನ್ನಾಗಿ ಪರಿವರ್ತಿಸಲು ಯತ್ನಿಸಿ ಟೀಕೆ ಒಳಗಾಗಿದ್ದರು.
ಮಾಜಿ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರು ಜೂನ್ ತಿಂಗಳಿನಲ್ಲಿ ಟ್ವೀಟ್ ಮಾಡಿ ಸರ್ಕಾರ ನೀಡಿದ ನಿವಾಸವನ್ನು ಖಾಲಿ ಮಾಡುತ್ತೇನೆ ಎಂದು ತಿಳಿಸಿದ್ದರು. ನಾನೀಗ ನಂ.8 ಸಫ್ದಾರ್ಜಂಗ್ ರಸ್ತೆ, ನವದೆಹಲಿಯ ಸರ್ಕಾರಿ ಬಂಗಲೆಯನ್ನು ಖಾಲಿ ಮಾಡಿದ್ದೇನೆ. ಹೀಗಾಗಿ ನಾನು ಈ ವಿಳಾಸ ಹಾಗೂ ಸಂಪರ್ಕ ಸಂಖ್ಯೆಯಲ್ಲಿ ಲಭ್ಯವಿರುವುದಿಲ್ಲ ಎಂದು ತಿಳಿಸಿದ್ದರು. ಸುಷ್ಮಾ ಸ್ವರಾಜ್ ಅವರ ಈ ನಡೆ ಮೆಚ್ಚುಗೆಗೆ ಪಾತ್ರವಾಗಿತ್ತು.