– ಪುಂಡರಿಂದ ಪರಾದ ಆಟೋ ಚಾಲಕನ ಮಗ
ಬೆಂಗಳೂರು: ನಗರದ ಡಿ.ಜೆ ಹಳ್ಳಿ ಹಾಗೂ ಕೆ.ಜೆ ಹಳ್ಳಿಯಲ್ಲಿ ದುಷ್ಕರ್ಮಿಗಳ ಕೃತ್ಯಕ್ಕೆ ಅಪಾರ ಆಸ್ತಿ-ಪಾಸ್ತಿಗಳು ಹಾನಿಯಾಗಿ ನಷ್ಟ ಸಂಭವಿಸಿದೆ. ಅಂತೆಯೇ ಇದೀಗ ಆಟೋ ರಿಕ್ಷಾ ಓಡಿಸಿ ಬದುಕಿನ ಬಂಡಿ ಸಾಗಿಸುತ್ತಿದ್ದ ಚಾಲಕರೊಬ್ಬರು ಕಣ್ಣೀರು ಹಾಕಿದ್ದಾರೆ.
ಹೌದು. 26 ವರ್ಷದ ಗಜೇಂದ್ರ ಅವರು ಪ್ರತಿ ದಿನ ಮುಂಜಾನೆ ಎದ್ದು ಮಾಂಸ ಸಾಗಾಟ ಮಾಡುತ್ತಿದ್ದರು. ಆದರೆ ಬುಧವಾರ ಮಾತ್ರ ಅವರಿಗೆ ತಮ್ಮ ಕೆಲಸಕ್ಕೆ ಹೋಗಲು ಸಾಧ್ಯವಾಗಲಿಲ್ಲ. ಪರಿಣಾಮ ಹಿಂದಿನ ರಾತ್ರಿ ಸುಮಾರು 80 ಮಂದಿ ಪುಂಡರ ಗುಂಪು ಗಜೇಂದ್ರ ಅವರ ವಾಹನವನ್ನು ಧ್ವಂಸಗೊಳಿಸಿತ್ತು.
ಗಜೇಂದ್ರ ಅವರು ಕಾವಲ್ ಬೈರಸಂದ್ರದ ಮುನಿನಂಜಪ್ಪ ಗಾರ್ಡನ್ ನ 1ನೇ ಮುಖ್ಯರಸ್ತೆ, 1ನೇ ಕ್ರಾಸ್ ನಿವಾಸಿಯಾಗಿದ್ದಾರೆ. ಇಲ್ಲಿ ನಾವು ಕಳೆದ 40 ವರ್ಷಗಳಿಂದ ವಾಸಿಸುತ್ತಿದ್ದೇವೆ. ಇಷ್ಟು ವರ್ಷದಲ್ಲಿ ಮೊದಲ ಬಾರಿಗೆ ಇಂತದ್ದೊಂದು ಭಯಾನಕ ಘಟನೆ ಎದುರಿಸಿದೆವು. ದುಷ್ಕರ್ಮಿಗಳು ಬಂದು ಮನೆ ಮುಂದಿದ್ದ ಆಟೋ ರಿಕ್ಷಾ ಹಾಗೂ ನನ್ನ ಮಗನ ಬೈಕ್ ಧ್ವಂಸಗೊಳಿಸಿದರು. ಅಲ್ಲದೆ ಮನೆಯ ಕಿಟಕಿ ಹಾಗೂ ಬಾಗಿಲಿಗೆ ಹಾನಿ ಮಾಡದ್ದಾರೆ ಎಂದು ಕಣ್ಣೀರು ಹಾಕಿದ್ದಾರೆ.
ಗಜೇಂದ್ರ ಅವರ ಪುತ್ರ ಜಯರಾಜ್ ಖಾಸಗಿ ಕಾಲೇಜಿನ ಸಿಬ್ಬಂದಿಯಾಗಿದ್ದು, ಘಟನೆಯ ಬಗ್ಗೆ ವಿವರಿಸಿದ್ದಾರೆ. ಕೈಯಲ್ಲಿ ಕಲ್ಲು ಹಾಗೂ ಮಾರಕಾಸ್ತ್ರಗಳನ್ನು ಹಿಡಿದುಕೊಂಡು ಬಂದು ಮನೆಗಳಿಗೆ ಹಾನಿಗೊಳಿಸುವುದನ್ನು ನಾನು ನೋಡಿದೆ. ಈ ವೇಳೆ ನಾನು ನಮ್ಮ ಆಟೋದ ಬಳಿ ಹೋಗಿ ನಿಲ್ಲುವ ಮೂಲಕ ಅದನ್ನು ಪುಂಡರಿಂದ ರಕ್ಷಿಸಲು ಪ್ರಯತ್ನಿಸಿದೆ. ಆದರೆ ಅವರು ನನ್ನ ಮೇಲೆ ಹಲ್ಲೆ ಮಾಡಿದರು. ಈ ವೇಳೆ ನಾನು ಅವರ ಕೈಯಿಂದ ತಪ್ಪಿಸಿಕೊಂಡು ಪಾರಾದೆ. ಬಳಿಕ ದುಷ್ಕರ್ಮಿಗಳು ನಮ್ಮ ಆಟೋಗೆ ಬೆಂಕಿ ಹಚ್ಚಿದರು. ನನ್ನ ತಂದೆ ಹಾಗೂ ನಾನು ಒದ್ದೆಯಾದ ಚೀಲಗಳನ್ನು ಅದರ ಮೇಲೆ ಹಾಕಿ ಬೆಂಕಿ ನಂದಿಸಿದೆವು ಎಂದು ತಿಳಿಸಿದರು.