ಚಾಮರಾಜನಗರ: ಜಿಲ್ಲೆಯ ಮಲೆಮಹದೇಶ್ವರ ಬೆಟ್ಟದಲ್ಲಿ ಮತ್ತೆ ಉಘೇ ಉಘೇ ಜಯಘೋಷ ಮೊಳಗಿದೆ. ಬರೋಬ್ಬರಿ 80 ದಿನಗಳ ನಂತರ ಇದೀಗ ಮಲೆಮಹದೇಶ್ವರ ಭಕ್ತರಿಗೆ ದರ್ಶನ ಭಾಗ್ಯ ದೊರೆತಿದೆ.
ಲಾಕ್‍ಡೌನ್ ಹಿನ್ನೆಲೆ ಮಾರ್ಚ್ 20ರಿಂದ ಬಂದ್ ಆಗಿದ್ದ ಮಹದೇಶ್ವರನ ದೇಗುಲ ಇಂದಿನಿಂದ ತೆರೆದಿದ್ದು, ಬೆಳಗ್ಗೆ 4ರಿಂದ ವಿಶೇಷ ಪೂಜೆ ರುದ್ರಾಭಿಷೇಕ ನಡೆದು ಬೆಳಿಗ್ಗೆ 7 ಗಂಟೆಯಿಂದ ಭಕ್ತರ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ. ಮೊದಲ ದಿನವೇ ನೂರಾರು ಭಕ್ತರು ಬೆಟ್ಟಕ್ಕೆ ಆಗಮಿಸಿದ್ದಾರೆ. ದೇಗುಲದ ಎಡಭಾಗದಲ್ಲಿರುವ ರಂಗಮಂದಿರದ ಆವರಣದಲ್ಲಿ ಭಕ್ತರು ಕುಳಿತುಕೊಳ್ಳಲು ನಾಲ್ಕು ವಿಭಾಗಗಳಲ್ಲಿ ಕುರ್ಚಿಗಳನ್ನು ಅತ್ಯಂತ ವ್ಯವಸ್ಥಿತ ವಾಗಿ ಹಾಕಲಾಗಿದೆ.
ಒಂದು ವಿಭಾಗದವರು ಸರತಿಯಲ್ಲಿ ನಿಂತು ದರ್ಶನ ಪಡೆದ ನಂತರ ಮತ್ತೊಂದು ವಿಭಾಗದವರಿಗೆ ಅವಕಾಶ ಮಾಡಿಕೊಡಲಾಗುತ್ತಿದೆ. ದೇಗುಲ ಪ್ರವೇಶಕ್ಕೂ ಮುನ್ನ ಪ್ರತಿಯೊಬ್ಬರಿಗೂ ಥರ್ಮಲ್ ಸ್ಕ್ರೀನಿಂಗ್ ಮಾಡಲಾಗುತ್ತಿದೆ. ಮಾಸ್ಕ್ ಕಡ್ಡಾಯ ಮಾಡಲಾಗಿದ್ದು, ಮಾಸ್ಕ್ ಇಲ್ಲದವರಿಗೆ ಮಲೆಮಹದೇಶ್ವರಬೆಟ್ಟ ಅಭಿವೃದ್ಧಿ ಪ್ರಾಧಿಕಾರದ ವತಿಯಿಂದಲೇ ಕಡಿಮೆ ದರದಲ್ಲಿ ಮಾಸ್ಕ್ ವಿತರಿಸಲಾಗುತ್ತಿದೆ.
ಸಾಲಿನಲ್ಲಿ ಸಾಮಾಜಿಕ ಅಂತರ ಕಾಪಾಡಿಕೊಂಡು ಭಕ್ತರು ಸ್ವಾಮಿಯ ದರ್ಶನ ಪಡೆಯುತ್ತಿದ್ದಾರೆ. ಬಹಳ ದಿನಗಳ ನಂತರ ಮಹದೇಶ್ವರನ ದರ್ಶನ ಪಡೆಯುತ್ತಿರುವುದಕ್ಕೆ ಭಕ್ತರು ಫುಲ್ ಖುಷ್ ಆಗಿದ್ದಾರೆ. ಮಾದಪ್ಪನ ದರ್ಶನದಿಂದ ಭಕ್ತರಲ್ಲಿ ಸಂತಸ ಮನೆಮಾಡಿದೆ.