ಲಕ್ನೋ: 8ರ ವರ್ಷದ ಬಾಲಕ ಬೈಕ್ ಸವಾರಿ ಮಾಡುವುದು ಆಶ್ಚರ್ಯಕರ ಸಂಗತಿ. ಆದರೆ ಉತ್ತರ ಪ್ರದೇಶದ ಎಂಟರ ಪೋರನೊಬ್ಬ ಬೈಕ್ ಸವಾರಿ ಮಾಡಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ.
ಲಕ್ನೋದ ಬಾಲಕ ಬೈಕ್ ಸವಾರಿ ಮಾಡಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದಂತೆ ಪೊಲೀಸರು ಬಾಲಕನ ಪತ್ತೆಗಾಗಿ ಶೋಧ ಕಾರ್ಯ ನಡೆಸಿದ್ದರು. ಇತ್ತ ಡಿಜಿಪಿ ಒ.ಪಿ. ಸಿಂಗ್ ಬಾಲಕನ ಪೋಷಕರ ವಿರುದ್ಧ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದ್ದಾರೆ. ವಿಡಿಯೋ ಮೂಲಕ ಬೈಕ್ ನಂಬರ್ ಪಡೆದ ಟ್ರಾಫಿಕ್ ಪೊಲೀಸರು, ಬಾಲಕನ ಪೋಷಕರ ಮಾಹಿತಿ ಕಲೆ ಹಾಕಿ, ದಂಡ ವಿಧಿಸಿದ್ದಾರೆ. ಇದನ್ನು ಓದಿ: ಒಂದೇ ದಿನಕ್ಕೆ 21.52 ಲಕ್ಷಕ್ಕೂ ಹೆಚ್ಚು ದಂಡ ಸಂಗ್ರಹಿಸಿದ ಬೆಂಗ್ಳೂರು ಟ್ರಾಫಿಕ್ ಪೊಲೀಸರು
ಕಾಕೋರಿಯ ಹಾಲಿನ ಉದ್ಯಮಿ ಹೆಸರಿನಲ್ಲಿ ಬೈಕ್ ನೋಂದಣಿಯಾಗಿದೆ. ಹೊಸ ಮೋಟಾರ್ ವಾಹನ ಕಾಯ್ದೆ ಅಡಿ, ಅಪ್ರಾಪ್ತ ವಯಸ್ಕರು ವಾಹನ ಚಲಾಯಿಸಿದರೆ ಪೋಷಕರು ಅಥವಾ ವಾಹನದ ಮಾಲೀಕರ ಮೇಲೆ ಕನಿಷ್ಠ 25 ಸಾವಿರ ರೂ. ದಂಡ ವಿಧಿಸಲಾಗುತ್ತದೆ. ಜೊತೆಗೆ ಮೂರು ತಿಂಗಳ ಶಿಕ್ಷೆಯನ್ನೂ ವಿಧಿಸಬಹುದು.
ಉತ್ತರ ಪ್ರದೇಶ ಸರ್ಕಾರವು ಟ್ರಾಫಿಕ್ ದಂಡದ ಪ್ರಮಾಣವನ್ನು ಕಡಿಮೆ ಮಾಡಿದೆ. ಹೀಗಾಗಿ ಬಾಲಕನ ತಂದೆಗೆ ಪೊಲೀಸರು 11,500 ರೂ. ಶುಲ್ಕವನ್ನು ವಿಧಿಸಿದ್ದಾರೆ. ಜೊತೆಗೆ ಬಾಲಕನಿಗೆ ಮತ್ತೆ ಬೈಕ್ ಸವಾರಿ ಮಾಡಲು ನೀಡದಂತೆ ಎಚ್ಚರಿಕೆ ನೀಡಿದ್ದಾರೆ ಎಂದು ವರದಿಯಾಗಿದೆ.