ಹಾಸನ: ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಬಸ್ ತಡೆಗೋಡೆಗೆ ಡಿಕ್ಕಿ ಹೊಡೆದ ಪರಿಣಾಮ ಎಂಟು ಮಂದಿ ಸ್ಥಳದಲ್ಲಿಯೇ ಸಾವನ್ನಪ್ಪಿದ್ದು, 10 ಮಂದಿ ಗಂಭೀರವಾಗಿ ಗಾಯಗೊಂಡಿರುವ ಘಟನೆ ಜಿಲ್ಲೆಯ ಶಾಂತಿಗ್ರಾಮ ಬಳಿ ನಡೆದಿದೆ.
ಚಾಲಕ ಲಕ್ಷ್ಮಣ್(38), ಕಂಡಕ್ಟರ್ ಶಿವಪ್ಪ ಛಲವಾದಿ(36), ವೈದ್ಯಕೀಯ ವಿದ್ಯಾರ್ಥಿನಿ ಡಯಾನ(20), ಬೆಂಗಳೂರು ನಿವಾಸಿ ಗಂಗಾಧರ್(58) ಸೇರಿದಂತೆ ಇಬ್ಬರು ಮಹಿಳೆಯರು ಮತ್ತು 4 ಪುರುಷರು ಮೃತ ದುರ್ದೈವಿಗಳು. ಇಂದು ಮುಂಜಾನೆ 3:30ರ ವೇಳೆಯಲ್ಲಿ ರಾಷ್ಟ್ರೀಯ ಹೆದ್ದಾರಿ 75 ದಲ್ಲಿರುವ ಕೃಷಿ ಕಾಲೇಜು ಬಳಿ ಈ ಭೀಕರ ಅಪಘಾತ ಸಂಭವಿಸಿದೆ.
Advertisement
Advertisement
ಐರವಾತ ಬಸ್ ಬೆಂಗಳೂರಿನಿಂದ ಧರ್ಮಸ್ಥಳದ ಕಡೆಗೆ ತೆರಳುತಿತ್ತು. ಈ ಸಂದರ್ಭದಲ್ಲಿ ನಿದ್ದೆ ಮಂಪರಿನಲ್ಲಿದ್ದ ಚಾಲಕನ ನಿಯಂತ್ರಣ ತಪ್ಪಿ ಬಸ್ ತಡೆಗೋಡೆಗೆ ಡಿಕ್ಕಿ ಹೊಡೆದು ಕಮರಿಗೆ ಉರುಳಿ ಬಿದ್ದಿದೆ. ಡಿಕ್ಕಿ ಹೊಡೆದ ರಭಸಕ್ಕೆ ಬಸ್ ನಜ್ಜುಗುಜ್ಜಾಗಿದೆ. ಇಬ್ಬರು ಚಾಲಕರು, ಗಂಗಾಧರ್ ಹಾಗೂ ವೈದ್ಯಕೀಯ ವಿದ್ಯಾರ್ಥಿನಿ ಡಯಾನಾ ಸೇರಿದಂತೆ 7 ಮಂದಿ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಮತ್ತೊಬ್ಬ ಗಾಯಾಳು ಖಾಸಗಿ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ.
Advertisement
ಅಪಘಾತದಲ್ಲಿ ಗಾಯಗೊಂಡ ಗಾಯಾಳುಗಳನ್ನು ಆಂಬುಲೆನ್ಸ್ ಮೂಲಕ ಹಾಸನ ಜಿಲ್ಲಾಸ್ಪತ್ರೆಗೆ ಮತ್ತು ಖಾಸಗಿ ಆಸ್ಪತ್ರೆಗೆ ರವಾನೆ ಮಾಡಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ. ಜಿಲ್ಲಾಸ್ಪತ್ರೆಗೆ ಎಸ್‍ಪಿ ರಾಹುಲ್ ಕುಮಾರ್ ಭೇಟಿ ನೀಡಿದ್ದಾರೆ.
Advertisement
ಘಟನೆ ನಡೆದ ಸ್ಥಳಕ್ಕೆ ಶಾಂತಿಗ್ರಾಮ ಪೊಲೀಸರು ಭೇಟಿ ನೀಡಿದ್ದು, ಕಮರಿಗೆ ಉರುಳಿ ಬಿದ್ದಿದ್ದ ಬಸ್ಸನ್ನು ಕ್ರೇನ್ ಮೂಲಕ ಪೊಲೀಸರು ಮೇಲಕ್ಕೆತ್ತಿಸಿದ್ದಾರೆ. ಈ ಸಂಬಂಧ ಶಾಂತಿಗ್ರಾಮ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.