ಟೆಹರಾನ್: ಇರಾನಿನಲ್ಲಿ ಕೊರೊನಾ ಪೀಡಿತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಅದರಲ್ಲೂ ಇರಾನಿನ ಸಂಸತ್ತಿನ ಶೇ.7 ರಷ್ಟು ಸದಸ್ಯರು ಕೊರೊನಾ ಪೀಡಿತರಾಗಿದ್ದಾರೆ.
ಇರಾನ್ ದೇಶದಲ್ಲಿ ಇಲ್ಲಿಯವರೆಗೆ 2,336 ಮಂದಿಗೆ ಕೊರೊನಾ ಬಾಧಿಸಿದೆ. ಆದರೆ ಈ ಸಂಖ್ಯೆ ಅಧಿಕೃತವಲ್ಲ. ಸಂಖ್ಯೆ ಮತ್ತಷ್ಟು ಹೆಚ್ಚಿರುವ ಸಾಧ್ಯತೆಯಿದೆ ಎಂದು ವರದಿಯಾಗಿದೆ. ಈಗಾಗಲೇ ಒಟ್ಟು 77 ಮಂದಿ ಮೃತಪಟ್ಟಿದ್ದಾರೆ. ಚೀನಾ ಬಿಟ್ಟರೆ ವಿಶ್ವದಲ್ಲಿ ಅತಿ ಹೆಚ್ಚಿ ಸಂಖ್ಯೆಯ ಸಾವು ಇರಾನಿನಲ್ಲಿ ದಾಖಲಾಗಿದೆ.
ಒಟ್ಟು ಸಂಸತ್ ಸದಸ್ಯರ ಪೈಕಿ ಶೇ.7 ರಷ್ಟು ಸದಸ್ಯರ ರಕ್ತದ ಮಾದರಿ ಪರೀಕ್ಷೆಯಲ್ಲಿ ಪಾಸಿಟಿವ್ ಬಂದಿದೆ. ಇರಾನಿನ ತುರ್ತು ವೈದ್ಯಕೀಯ ಸೇವೆಯ ಮುಖ್ಯಸ್ಥರೇ ಕೊರೊನಾಗೆ ತುತ್ತಾಗಿದ್ದಾರೆ ಎಂದು ಸಂಸತ್ತಿನ ಉಪ ಸ್ಪೀಕರ್ ಹೇಳಿದ್ದಾರೆ. ಒಟ್ಟು 290 ಸದಸ್ಯರ ಪೈಕಿ 23 ಮಂದಿಗೆ ಕೊರೊನಾ ಭಾದಿಸಿದ್ದು ರೋಗ ನಿಯಂತ್ರಣ ಮಾಡಲು ಹರಸಾಹಸ ಪಡುತ್ತಿದೆ.
ವ್ಯಾಪಕವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ 54 ಸಾವಿರ ಕೈದಿಗಳನ್ನು ಜೈಲಿನಿಂದ ಬಿಡುಗಡೆ ಮಾಡಲಾಗುತ್ತಿದೆ ಎಂದು ಇರಾನ್ ನ್ಯಾಯಾಂಗ ಇಲಾಖೆಯ ವಕ್ತಾರರು ತಿಳಿಸಿದ್ದಾರೆ. ಪರೀಕ್ಷೆಯ ವೇಳೆ ನೆಗೆಟಿವ್ ಬಂದವರನ್ನು ಜಾಮೀನಿನ ಮೇಲೆ ತಾತ್ಕಾಲಿಕವಾಗಿ ಬಿಡುಗಡೆ ಮಾಡಲಾಗುತ್ತಿದೆ. ಗಂಭೀರ ಪ್ರಕರಣದಲ್ಲಿ ಜೈಲು ಪಾಲಾಗಿರುವ ಕೈದಿಗಳನ್ನು ಬಿಡುಗಡೆ ಮಾಡುವುದಿಲ್ಲ. ಕೈದಿಗಳು ಸಹ ಮನುಷ್ಯರೇ. ಮಾನವೀಯ ಆಧಾರದ ಹಿನ್ನೆಲೆಯಲ್ಲಿ ಇವರನ್ನು ತಾತ್ಕಾಲಿಕವಾಗಿ ಬಿಡುಗಡೆ ಮಾಡಲಾಗುತ್ತಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.