ರಾಯಚೂರು: ಜಿಲ್ಲೆಯ ದೇವದುರ್ಗ ತಾಲೂಕಿನ ಜಾಗಟಗಲ್ ಗ್ರಾಮದಲ್ಲಿ ವಿದ್ಯುತ್ ತಂತಿ ಸ್ಪರ್ಶಿಸಿ 8 ಗುಡಿಸಲು ಹಾಗೂ ಹತ್ತಿ ಬೆಳೆ ಭಸ್ಮವಾಗಿದ್ದು, ಕೋಟ್ಯಂತರ ರೂಪಾಯಿ ಹಾನಿ ಸಂಭವಿಸಿದೆ. ಅಂದಾಜು 1 ಸಾವಿರ ಕ್ವಿಂಟಾಲ್ ಹತ್ತಿ, 30 ಲಕ್ಷ ನಗದು, ಚಿನ್ನಾಭರಣ ಅಗ್ನಿಗಾಹುತಿಯಾಗಿದೆ.
ಆಂಧ್ರಪ್ರದೇಶ (Andra Pradesh) ಮೂಲದ ನಾಗೇಶ್ವರರಾವ್, ರಾಮಕೃಷ್ಣ, ಶೇಷಯ್ಯ ಎಂಬುವವರಿಗೆ ಸೇರಿದ ಗುಡಿಸಲುಗಳಿಗೆ ಬೆಂಕಿ ತಗುಲಿದ್ದು, ಗುಡಿಸಲುಗಳಲ್ಲಿದ್ದ ದವಸ ಧಾನ್ಯ ಸೇರಿ ವಸ್ತುಗಳೆಲ್ಲ ಸುಟ್ಟು ಕರಕಲಾಗಿವೆ. ಎರಡು ಬೈಕ್‌ಗಳು ಸಂಪೂರ್ಣ ಸುಟ್ಟಿವೆ, ಅಡುಗೆ ಅನಿಲದ ಸಿಲಿಂಡರ್ ಸ್ಫೋಟಿಸಿವೆ. ಒಂದು ಕೋಟಿ ರೂ.ಗೂ ಅಧಿಕ ಮೌಲ್ಯದ ವಸ್ತುಗಳು ಬೆಂಕಿಗಾಹುತಿಯಾಗಿವೆ. ಮೆಣಸಿನಕಾಯಿ ಬೆಳೆ ಮಾರಾಟ ಮಾಡಿದ್ದ ಲಕ್ಷಾಂತರ ರೂ. ನಗದು ಸಹ ಅಗ್ನಿ ಪಾಲಾಗಿದೆ. ಇದನ್ನೂ ಓದಿ: ಕಾಲೇಜು ಪ್ರಿನ್ಸಿಪಾಲ್‍ಗೇ ಬೆಂಕಿ ಇಟ್ಟ ವಿದ್ಯಾರ್ಥಿ – ಚಿಕಿತ್ಸೆ ಫಲಿಸದೇ ಸಾವು
ವಿದ್ಯುತ್ ತಂತಿ ತುಂಡಾಗಿ ಗುಡಿಸಲುಗಳ ಮೇಲೆ ಬಿದ್ದ ಹಿನ್ನೆಲೆಯಲ್ಲಿ ಬೆಂಕಿ ಹೊತ್ತಿಕೊಂಡು ಅವಘಡ ನಡೆದಿದೆ. ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಅಗ್ನಿಶಾಮಕ ದಳ ಸಿಬ್ಬಂದಿ ಬೆಂಕಿ ನಂದಿಸಿದ್ದಾರೆ. ಗಬ್ಬೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ದೇವದುರ್ಗ ತಹಶಿಲ್ದಾರ ಶ್ರೀನಿವಾಸ ಚಾಪಲ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಇದನ್ನೂ ಓದಿ: ಸ್ವಾಮೀಜಿಗಳು ವಿಧಾನಸೌಧಕ್ಕೆ ಬರುವಂತಾಗಬಾರದು: ಬಸವರಾಜ ಹೊರಟ್ಟಿ