LatestLeading NewsMain PostNational

ಇಂದಿರಾ ಗಾಂಧಿ ಪುಣ್ಯಸ್ಮರಣೆ – ಅನ್ನಸಂತರ್ಪಣೆ ವೇಳೆ ಕಾಂಗ್ರೆಸ್‌ ಕಾರ್ಯಕರ್ತರ ಮೇಲೆ ಬಿಜೆಪಿ ಬೆಂಬಲಿಗರಿಂದ ಹಲ್ಲೆ

ಅಗರ್ತಲಾ: ಇಲ್ಲಿನ ಜಿಬಿ ಬಜಾರ್‌ನಲ್ಲಿ ಮಾಜಿ ಪ್ರಧಾನಿ ಇಂದಿರಾ ಗಾಂಧಿ (Indira Gandhi) ಅವರ ಪುಣ್ಯಸ್ಮರಣೆ ಅಂಗವಾಗಿ ಆಯೋಜಿಸಿದ್ದ ಅನ್ನಸಂತರ್ಪಣೆ ಕಾರ್ಯಕ್ರಮದ ವೇಳೆ ಬಿಜೆಪಿ ಕಾರ್ಯಕರ್ತರು (BJP) ನಡೆಸಿದ ದಾಳಿಯಲ್ಲಿ ಕನಿಷ್ಠ 8 ಕಾಂಗ್ರೆಸ್ (Congress) ಬೆಂಬಲಿಗರು ಗಾಯಗೊಂಡಿದ್ದಾರೆ.

ಸ್ಥಳೀಯ ಜನರಿಗೆ ವಿತರಿಸಲು ಸಿದ್ಧಪಡಿಸಲಾಗಿದ್ದ ಆಹಾರವನ್ನು ಚರಂಡಿಗೆ ಎಸೆಯಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಘಟನೆ ಸಂಬಂಧ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಲಾಗಿದೆ. ಆದರೆ ಈವರೆಗೆ ಯಾರನ್ನೂ ಬಂಧಿಸಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: ಜಾರ್ಖಂಡ್ ಸಿಎಂ ಹೇಮಂತ್ ಸೊರೆನ್‌ಗೆ ಇಡಿ ಸಂಕಷ್ಟ- ವಿಚಾರಣೆಗೆ ಹಾಜರಾಗುವಂತೆ ಸಮನ್ಸ್

ಅನ್ನ ಸಂತರ್ಪಣೆ ಹಿನ್ನೆಲೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜನರು ಸರತಿ ಸಾಲಿನಲ್ಲಿ ನಿಂತಿದ್ದರು. ಈ ವೇಳೆ ಪೋಲೀಸರ ಸಮ್ಮುಖದಲ್ಲಿ ಮಾಸ್ಕ್ ಧರಿಸಿ ಮೋಟಾರು ಬೈಕ್‌ನಲ್ಲಿ ಬಂದ ಬಿಜೆಪಿ ಕಾರ್ಯಕರ್ತರು ದಾಳಿ ನಡೆಸಿದ್ದಾರೆ ಎಂದು ಕಾಂಗ್ರೆಸ್ ಮುಖಂಡ ಶ್ಯಾಮಲ್ ಪಾಲ್ ಆರೋಪಿಸಿದ್ದಾರೆ.

ಸ್ಥಳಕ್ಕೆ ನುಗ್ಗಿದ ದುಷ್ಕರ್ಮಿಗಳು ಕಾಂಗ್ರೆಸ್ ಮುಖಂಡರು ಹಾಗೂ ಕಾರ್ಯಕರ್ತರ ಮೇಲೆ ದೊಣ್ಣೆ ಹಾಗೂ ಹರಿತವಾದ ಆಯುಧಗಳಿಂದ ಹಲ್ಲೆ ನಡೆಸಿದ್ದಾರೆ. ಇದರಿಂದ ಗಾಬರಿಗೊಂಡ ಜನರು ಸ್ಥಳದಿಂದ ಓಡಿಹೋಗಿದ್ದಾರೆ. ದಾಳಿಯಲ್ಲಿ ಮೂವರು ಮಹಿಳೆಯರು ಸೇರಿದಂತೆ ಕನಿಷ್ಠ ಎಂಟು ಜನರು ಗಾಯಗೊಂಡಿದ್ದಾರೆ. ಇದೇ ವೇಳೆ ದಾಳಿಕೋರರು ಇಂದ್ರಾನಗರದಲ್ಲಿರುವ ಕಾಂಗ್ರೆಸ್ ಪಕ್ಷದ ಕಚೇರಿಯನ್ನು ಧ್ವಂಸಗೊಳಿಸಿದ್ದಾರೆ. ಕಾಂಗ್ರೆಸ್ ಬೆಂಬಲಿತ ಹಿರಿಯ ನಾಗರಿಕರೊಬ್ಬರ ಮೇಲೂ ರಸ್ತೆಯಲ್ಲಿ ಹಲ್ಲೆ ನಡೆಸಲಾಗಿದೆ. ಅಪರಾಧಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಸ್ಥಳೀಯರು ಸಂಜೆಯವರೆಗೂ ರಸ್ತೆ ತಡೆ ನಡೆಸಿದಾಗ, ಮುಸುಕುಧಾರಿಗಳು ಅಲ್ಲಿಂದ ತೆರಳಿದ್ದಾರೆ. ಇದನ್ನೂ ಓದಿ: ತಮಿಳುನಾಡಿನಲ್ಲಿ ಭೀಕರ ಮಳೆಗೆ ಇಬ್ಬರು ಬಲಿ- 7 ಜಿಲ್ಲೆಯ ಶಾಲಾ, ಕಾಲೇಜಿಗೆ ರಜೆ

ಕೇಂದ್ರ ಸಚಿವೆ ಪ್ರತಿಮಾ ಭೌಮಿಕ್ ನಡೆಸುತ್ತಿರುವ ಗ್ಯಾಂಗ್ ಈ ಪ್ರದೇಶದಲ್ಲಿ ತಮ್ಮ ನೆಲೆಯನ್ನು ಕಳೆದುಕೊಂಡ ನಂತರ ಈ ದಾಳಿ ನಡೆಸಿದೆ ಎಂದು ಕಾಂಗ್ರೆಸ್ ನಾಯಕ ಆಶಿಸ್ ಸಹಾ ಆರೋಪಿಸಿದ್ದಾರೆ. ಅದೇ ರೀತಿ ಬದರ್‌ಘಾಟ್‌ನ ಬಿಜೆಪಿ ಶಾಸಕ ಮಿಮಿ ಮಜುಂದಾರ್ ಅವರು ಸೋಮವಾರ ಕಾಂಗ್ರೆಸ್ ಕಾರ್ಯಕರ್ತನ ಮನೆಯಿಂದ ಆಹಾರ ಪದಾರ್ಥಗಳನ್ನು ಲೂಟಿ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ.

Live Tv

Leave a Reply

Your email address will not be published. Required fields are marked *

Back to top button