ನವದೆಹಲಿ: ಹೆಚ್ಚು ಕಡಿಮೆ 7 ದಶಕಗಳ ವಿರಾಮದ ಬಳಿಕ ಚೀತಾಗಳ(Cheetah) ಮಿಂಚಿನ ವೇಗ ನಮ್ಮ ದೇಶದಲ್ಲಿ ನೋಡುವ ಸೌಭಾಗ್ಯ ನಾಳೆಯಿಂದ ಲಭ್ಯ ಆಗಲಿದೆ. ಅಳಿವಿನಂಚಿನಲ್ಲಿರುವ ವನ್ಯಜೀವಿಗಳನ್ನು(wildlife) ಸಂರಕ್ಷಣೆ ಮಾಡುವ ಯೋಜನೆಯಡಿ ನಮೀಬಿಯಾದಿಂದ(Namibia) ಭಾರತಕ್ಕೆ(India) 8 ಚೀತಾಗಳನ್ನು ತರಲಾಗುತ್ತಿದೆ.
ಪ್ರಧಾನಿ ನರೇಂದ್ರ ಮೋದಿ(Narendra Modi) ಜನ್ಮದಿನವಾದ ನಾಳೆ ಮಧ್ಯಪ್ರದೇಶದ ಕುನ್ಹೋ-ಪಾಲ್‌ಪುರ್ ವನ್ಯಜೀವಿ ಸಂರಕ್ಷಣಾ ಕೇಂದ್ರಕ್ಕೆ ಈ ಚೀತಾಗಳನ್ನು ಬಿಡಲಾಗುತ್ತದೆ. 2 ರಿಂದ 6 ವರ್ಷ ವಯಸ್ಸಿನ 3 ಗಂಡು ಹಾಗೂ 5 ಹೆಣ್ಣು ಚೀತಾಗಳನ್ನು ನಮೀಬಿಯಾದಿಂದ ವಿಶೇಷ ವಿಮಾನದಲ್ಲಿ ತರಲಾಗುತ್ತಿದೆ.
ಈಗಾಗಲೇ ಚೀತಾಗಳನ್ನು ಹೊತ್ತ 717 ಜಂಬೋಜೆಟ್ ವಿಮಾನ ಟೇಕ್ ಆಫ್ ಆಗಿದ್ದು, ನಾಳೆ ಬೆಳಗ್ಗೆ ಮಧ್ಯಪ್ರದೇಶದ ಗ್ವಾಲಿಯಾರ್ ನಗರವನ್ನು ತಲುಪಲಿದೆ. ಈ ವಿಮಾನ ಪ್ರಯಾಣ ವೇಳೆ ಚೀತಾಗಳಿಗೆ ಯಾವುದೇ ಸಮಸ್ಯೆ ಆಗದಂತೆ ಎಚ್ಚರಿಕೆ ವಹಿಸಲಾಗಿದೆ. ಈ ಜಂಬೋ ಜೆಟ್ ವಿಮಾನ ಹಲವು ವಿಶೇಷತೆಗಳನ್ನು ಒಳಗೊಂಡಿದೆ. ಗ್ವಾಲಿಯಾರ್‌ನಿಂದ ಹೆಲಿಕಾಪ್ಟರ್ ಮೂಲಕ ಚೀತಾಗಳನ್ನು ಮಧ್ಯಪ್ರದೇಶದ ಕುನ್ಹೋ ನ್ಯಾಷನಲ್ ಪಾರ್ಕ್ಗೆ ತರಲಾಗುತ್ತದೆ. ಬೆಳಗ್ಗೆ 10:45ಕ್ಕೆ ಪ್ರಧಾನಿ ಮೋದಿ ಖುದ್ದಾಗಿ ಇವುಗಳನ್ನು ರಿಲೀಸ್ ಮಾಡಲಿದ್ದಾರೆ.
ಈ ಚೀತಾಗಳನ್ನು ವಿಮಾನಕ್ಕೆ ಹತ್ತಿಸುವ ಮುನ್ನ ತಿಂಗಳು ಕ್ವಾರಂಟೈನ್‌ನಲ್ಲಿ ಇರಿಸಲಾಗಿತ್ತು. ಯಾವುದೇ ಸೋಂಕಿಗೆ ತುತ್ತಾಗದಂತೆ, ಸೋಂಕು ಹಬ್ಬದಂತೆ ಚೀತಾಗಳಿಗೆ ಲಸಿಕೆ ನೀಡಲಾಗಿದೆ. ಈ ಚೀತಾಗಳು ಭಾರತದ ವಾತಾವರಣಕ್ಕೆ ಹೊಂದಿಕೊಳ್ಳಲು ಕೆಲ ಸಮಯ ಹಿಡಿಯುವ ಕಾರಣ, ಅವುಗಳಿಗೆ ಮುಕ್ತವಾಗಿ ವಿಹರಿಸಲು ಅವಕಾಶ ನೀಡಲಾಗುತ್ತದೆ. ಇನ್ನು, ಮೋದಿ ಜನ್ಮದಿನ ಪ್ರಯುಕ್ತ ಬಿಜೆಪಿ ನಾಳೆಯಿಂದ ಅಕ್ಟೋಬರ್ 2ರವರೆಗೂ ವಿಶೇಷ ಸೇವಾ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ಇದನ್ನೂ ಓದಿ: ಮೋದಿ ಹುಟ್ಟುಹಬ್ಬ – ನಾಳೆ ಹುಟ್ಟುವ ಮಕ್ಕಳಿಗೆ ಚಿನ್ನದುಂಗುರ ನೀಡಲಿದೆ ಬಿಜೆಪಿ
`ಚೀತಾ’ ವಿಮಾನದಲ್ಲಿ ಏನೆಲ್ಲಾ ತಯಾರಿ?
ಚೀತಾಗಳನ್ನು ತರಲಾಗುತ್ತಿರುವ ಬೋಯಿಂಗ್ ವಿಮಾನಕ್ಕೆ ಚೀತಾ ಚಿತ್ರದ ಪೇಂಟಿಂಗ್ ಮಾಡಲಾಗಿದೆ. ಈ ಕಾರ್ಗೋ ವಿಮಾನ ನಮೀಬಿಯಾದಲ್ಲಿ ಹಾರಾಟ ಪ್ರಾರಂಭಿಸಿದರೆ, ನೇರವಾಗಿ ಭಾರತದಲ್ಲಿಯೇ ಲ್ಯಾಂಡಿಂಗ್ ಮಾಡಲಿದೆ. ಮಾರ್ಗದ ಮಧ್ಯೆ ಎಲ್ಲಿಯೂ ಇಂಧನ ತುಂಬಿಸಿಕೊಳ್ಳಲು ಇಳಿಯುವುದಿಲ್ಲ. ವಿಮಾನದಲ್ಲಿ ಚೀತಾಗಳನ್ನು ಇರಿಸಲು ವಿಶೇಷ ಬೋನನ್ನು ಇರಿಸಲಾಗಿದ್ದು, ಪ್ರಯಾಣದ ವೇಳೆ ಅವುಗಳಿಗೆ ಯಾವುದೇ ಆಹಾರ ನೀಡಲಾಗುವುದಿಲ್ಲ. ಚೀತಾಗಳ ನಿಗಾ ವಹಿಸಲು ಮೂವರು ಸಿಬ್ಬಂದಿಯನ್ನು ಇರಿಸಲಾಗಿದ್ದು, ಅದರೊಂದಿಗೆ ಅರಣ್ಯಾಧಿಕಾರಿಗಳು ಹಾಗೂ ಪಶು ವೈದ್ಯಾಧಿಕಾರಿಗಳು ಸಾಥ್ ನೀಡಿದ್ದಾರೆ.
ಮಚ್ಚೆ ಚೀತಾ ವಿಶೇಷತೆಯೇನು?
ಮಚ್ಚೆ ಗುರುತಿನ ಚೀತಾಗಳ ಸಂತತಿ ಈಗಾಗಲೇ ಭಾರತದಲ್ಲಿ ನಾಶವಾಗಿದೆ. ಭಾರತದಲ್ಲಿದ್ದ ಕೊನೆಯ ಚೀತಾ 1947ರಲ್ಲಿ ಸಾವನ್ನಪ್ಪಿತ್ತು. 1952ರಲ್ಲಿ ಈ ಪ್ರಭೇದ ಭಾರತದಲ್ಲಿ ಇಲ್ಲ ಎಂದು ಘೋಷಣೆ ಮಾಡಲಾಗಿತ್ತು. 2009ರಲ್ಲಿ ಆಫ್ರಿಕನ್ ಚಿರತೆ ಯೋಜನೆ ಮಾಡಲಾಗಿದ್ದು, ಅದು ಕಾರಣಾಂತರಗಳಿಂದ ಅನುಷ್ಠಾನವಾಗಿರಲಿಲ್ಲ. ಇದೀಗ 75 ವರ್ಷಗಳ ಬಳಿಕ ಭಾರತಕ್ಕೆ ಚೀತಾಗಳು ಬರುತ್ತಿವೆ. ಈ ಚೀತಾಗಳಿಗೆ ಕುನ್ಹೋ ಉದ್ಯಾನವನ ಪರಿಸರ ಅನುಕೂಲಕರವಾಗಿದ್ದು, ಅಲ್ಲಿನ ಸುತ್ತಮುತ್ತಲ 24 ಗ್ರಾಮಗಳ ಜನರನ್ನು ಖಾಲಿ ಮಾಡಿಸಲಾಗಿದೆ. 8 ಚೀತಾಗಳ ಸ್ಥಳಾಂತರಕ್ಕೆ 75 ಕೋಟಿ ರೂ. ಖರ್ಚು ಮಾಡಲಾಗಿದೆ. ಇದನ್ನೂ ಓದಿ: ಗೌತಮ್ ಅದಾನಿ ಈಗ ವಿಶ್ವದ 2ನೇ ಅತ್ಯಂತ ಶ್ರೀಮಂತ ವ್ಯಕ್ತಿ
ಭಾರತದ ಚಿರತೆ, ನಮೀಬಿಯಾ ಚೀತಾ ವ್ಯತ್ಯಾಸ:
ಚೀತಾ ಗಳಿಗೆ ತೆಳು ಕಪ್ಪು ಬಣ್ಣದ ಮಚ್ಚೆ ಇದ್ದರೆ, ಚಿರತೆಗಳಿಗೆ ಕಡುಕಪ್ಪು ಬಣ್ಣದ ಗುಲಾಬಿ ಪಕಳೆ ಆಕಾರ ಇರುತ್ತದೆ. ಚಿರತೆ ಗಂಟೆಗೆ 58 ಕಿ.ಮೀ ಓಡಿದರೆ, ಚೀತಾ ಗಂಟೆಗೆ 120 ಕಿ.ಮೀ ಓಡಬಲ್ಲುದು. ಚಿರತೆ ಮರ ಹತ್ತುವುದಲ್ಲಿ ಎಕ್ಸ್‌ಪರ್ಟ್ ಆಗಿದ್ದರೆ, ಚೀತಾ ಬೇಟೆ ವೇಳೆ ಚುರುಕಾಗಿ ದಿಕ್ಕು ಬದಲು ಮಾಡಬಲ್ಲುದಾಗಿರುತ್ತವೆ. ಮಾತ್ರವಲ್ಲದೇ ಚೀತಾಗಳ ದೇಹದ ಭಾರ ಕಡಿಮೆಯಿದ್ದು, ಚಿರತೆಯ ದೇಹದ ಭಾರ ಸ್ವಲ್ಪ ಹೆಚ್ಚಾಗಿ ಇರುತ್ತದೆ.