ಮಂಡ್ಯ: ಆ ಶಾಲೆ ಕಳೆದ ಇಪ್ಪತ್ತು ವರ್ಷಗಳ ಹಿಂದೆ ಇಡೀ ಜಿಲ್ಲೆಗೆ ಅತೀ ಹೆಚ್ಚು ವಿದ್ಯಾರ್ಥಿಗಳು ಇದ್ದ ಶಾಲೆ. ಆ ಶಾಲೆಯಲ್ಲಿ ಸಿಎಂ ಯಡಿಯೂರಪ್ಪನವರು ಸಹ ವ್ಯಾಸಂಗ ಮಾಡಿದ್ದರು. ಸದ್ಯ ಈ ಶಾಲೆಯಲ್ಲಿ ಇರುವುದು 8 ವಿದ್ಯಾರ್ಥಿಗಳು, ಅವರಿಗೆ 4 ಮಂದಿ ಶಿಕ್ಷಕರಿದ್ದಾರೆ.
ಮಂಡ್ಯ ನಗರದ ಆನೆಕೆರೆ ಬೀದಿಯಲ್ಲಿರುವ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಸಿಎಂ ಬಿ.ಎಸ್.ಯಡಿಯೂರಪ್ಪನವರು ವ್ಯಾಸಂಗ ಮಾಡಿದ್ದಾರೆ. ಇಲ್ಲಿ ಬಿ.ಎಸ್.ಯಡಿಯೂರಪ್ಪ ಅವರು 1954-55ರಲ್ಲಿ ಮೂರನೇ ತರಗತಿ ದಾಖಲಾಗಿ ವ್ಯಾಸಂಗ ಮಾಡಿದ್ದಾರೆ. ಸದ್ಯ ಈ ಶಾಲೆ ಮುಚ್ಚುವ ಹಂತಕ್ಕೆ ಬಂದು ತಲುಪಿದೆ.
Advertisement
Advertisement
ಅಂದು ಬಿಎಸ್‍ವೈ ಓದಿದ್ದ ಈ ಶಾಲೆ ಇಂದು ದುಸ್ಥಿತಿಗೆ ತಲುಪಿದೆ. ಒಂದು ಕಡೆ ಕಟ್ಟಡ ಸರಿಯಾದ ನಿರ್ವಹಣೆ ಇಲ್ಲದೆ ಶಾಲೆ ಶಿಥಿಲವಾಗಿದ್ದರೆ, ಮತ್ತೊಂದು ಕಡೆ ಶಾಲೆಗೆ ಓದಲು ಮಕ್ಕಳಿಲ್ಲದ ಪರಿಸ್ಥಿತಿ ಎದುರಾಗಿದೆ. ಸದ್ಯ ಈ ಶಾಲೆಯಲ್ಲಿ ಕೇವಲ 8 ಜನ ಮಕ್ಕಳಿದ್ದು, 4 ಜನ ಶಿಕ್ಷಕರಿದ್ದಾರೆ. ಈ ಹಿಂದೆ 800 ರಿಂದ 900 ಮಕ್ಕಳು ಈ ಶಾಲೆಯಲ್ಲಿ ಕಲಿಯುತ್ತಿದ್ದರು. ಆದರೆ ಇದೀಗ ಬೆರಳೆಣಿಕೆಯಷ್ಟು ಮಕ್ಕಳು ಓದುತ್ತಿದ್ದಾರೆ.
Advertisement
Advertisement
ಈ ಬಗ್ಗೆ ಶಿಕ್ಷಣ ಇಲಾಖೆಯ ಅಧಿಕಾರಿಗಳನ್ನು ಈ ಶಾಲೆಯಲ್ಲಿ ಮಕ್ಕಳ ಸಂಖ್ಯೆ ಏಕೆ ಕಡಿಮೆಯಾಗಿದೆ ಎಂದು ಕೇಳಿದರೆ, ಸದ್ಯ ಈ ಶಾಲೆ ಇರುವ ಪ್ರದೇಶ ವಾಣಿಜ್ಯ ವಹಿವಾಟು ನಡೆಯುವ ಕೇಂದ್ರವಾಗಿದೆ. ಹೀಗಾಗಿ ಇಲ್ಲಿಗೆ ಮಕ್ಕಳು ಬರುತ್ತಿಲ್ಲ. ಮುಂದಿನ ದಿನಗಳಲ್ಲಿ ಈ ಶಾಲೆಗೆ ಹೆಚ್ಚು ಮಕ್ಕಳು ಬರುವಂತೆ ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದಾಗಿ ಹೇಳಿದ್ದಾರೆ.
ಶಾಲೆಯ ಅಭಿವೃದ್ಧಿಯ ಬಗ್ಗೆ ಕೇಳಿದರೆ, ಹೀಗಾಗಲೇ ನಾವು 6 ಲಕ್ಷ ರೂಪಾಯಿಯನ್ನು ಶಾಲೆಯ ಅಭಿವೃದ್ಧಿಗೆ ನೀಡಿದ್ದು, ನಿರ್ಮಿತಿ ಕೇಂದ್ರದ ಮೂಲಕ ಅಭಿವೃದ್ಧಿ ಪಡಿಸಲಾಗುತ್ತಿದೆ. ಕೆಲವೇ ದಿನಗಳಲ್ಲಿ ಶಾಲೆಯ ಕಟ್ಟಡವನ್ನು ದುರಸ್ಥಿಗೊಳಿಸಿ, ಹೆಚ್ಚು ಮಕ್ಕಳು ಈ ಶಾಲೆ ಕಡೆ ಬರುವಂತಹ ವಾತಾವರಣವನ್ನು ಸೃಷ್ಟಿ ಮಾಡುತ್ತೇವೆ ಎನ್ನುತ್ತಾರೆ. ಸಿಎಂ ಯಡಿಯೂರಪ್ಪ ನವರು ಓದಿದ ಈ ಶಾಲೆ ಶತಮಾನದ ಶಾಲೆಯಾಗಿದೆ. ಆದರೆ ಶತಮಾನದಲ್ಲಿ ಇದ್ದ ಘನತೆ ಮಾತ್ರ ಈಗ ಶಾಲೆಗೆ ಇಲ್ಲ.