ನವದೆಹಲಿ: ಉತ್ತರಪ್ರದೆಶದ ಕಾನ್ಪುರದಲ್ಲಿ 8 ಪೊಲೀಸರನ್ನು ಹತ್ಯೆಗೈದಿದ್ದ ರೌಡಿ ಶೀಟರ್ ವಿಕಾಸ್ ದುಬೆ ಆಪ್ತ ಇಂದು ಮುಂಜಾನೆ ಹಮೀರ್‍ಪುರ್ ಜಿಲ್ಲೆಯಲ್ಲಿ ಎನ್‍ಕೌಂಟರ್ ಗೆ ಬಲಿಯಾಗಿದ್ದಾನೆ.
ಮೃತ ಅಮರ್ ದುಬೆ, ವಿಕಾಸ್ ದುಬೆ ಆಪ್ತನಾಗಿದ್ದನು. ಈತನ ಹೆಸರು ಕೂಡ ಎಫ್‍ಐಆರ್ ನಲ್ಲಿ ಉಲ್ಲೇಖವಾಗಿದ್ದು, ಪೊಲೀಸರಿಗೆ ಬೇಕಾಗಿದ್ದನು. ಇಂದು ಮುಂಜಾನೆ ವಿಶೇಷ ಕಾರ್ಯಪಡೆ(ಎಸ್‍ಟಿಎಫ್) ಅಮರ್ ದುಬೆಯನ್ನು ಹೊಡೆದುರುಳಿಸಿದೆ. ಪೊಲೀಸರನ್ನು ಹತ್ಯೆಗೈದ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇಹರ್ಯಾಣದ ಫರಿದಾಬಾದ್ ನಲ್ಲಿರುವ ಹೋಟೆಲಿನಲ್ಲಿ ಅವಿತಿದ್ದ ಮೂವರನ್ನು ಬಂಧಿಸಿಲಾಗಿದೆ. ಅಲ್ಲದೆ ಶಂಕಿತರ ಬಳಿಯಿಂದ ಆಯುಧ ಹಾಗೂ ಮದ್ದುಗುಂಡುಗಳನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ.
ಜುಲೈ 2ರಂದು ರಾತ್ರಿ ಪೊಲೀಸರ ತಂಡ 60 ಪ್ರಕರಣಗಳಲ್ಲಿ ಬೇಕಾಗಿದ್ದ ಆರೋಪಿ ವಿಕಾಸ್ ದುಬೆಯನ್ನು ಬಂಧಿಸಲೆಂದು ದಿಕ್ರು ಗ್ರಾಮಕ್ಕೆ ತೆರಳಿತ್ತು. ಈ ವಿಚಾರ ಮೊದಲೇ ತಿಳಿದಿದ್ದ ವಿಕಾಸ್ ದುಬೆ ಬೆಂಬಲಿಗರು ರಸ್ತೆಗೆ ಅಡ್ಡಲಾಗಿ, ಕಲ್ಲು ಹಾಗೂ ಇಟ್ಟಿಗೆಗಳನ್ನು ಇಟ್ಟಿದ್ದರು. ಇದನ್ನು ತೆರವುಗೊಳಿಸಿ ಪೊಲೀಸರು ದುಬೆ ಅವಿತಿದ್ದ ಮನೆಯತ್ತ ಆಗಮಿಸುತ್ತಿದ್ದರು. ಇದನ್ನೂ ಓದಿ: ಮೂವರು ಪೊಲೀಸರು ಅಮಾನತು – ಹಂತಕ ದುಬೆ ಬಗ್ಗೆ ಸುಳಿವು ಕೊಟ್ಟರೆ 2.5 ಲಕ್ಷ ಬಹುಮಾನ
ಈ ವೇಳೆ ಗುಂಡಿನ ಮಳೆ ಸುರಿಸಿದ್ದಾರೆ. ಪರಿಣಾಮ ಡಿವೈಎಸ್ಪಿ ದೇವೇಂದ್ರ ಮಿಶ್ರಾ, ಮೂವರು ಪೊಲೀಸ್ ಸಬ್ ಇನ್ಸ್ ಪೆಕ್ಟರ್ ಗಳು ಹಾಗೂ 4 ಪೊಲೀಸರು ಮೃತಪಟ್ಟಿದ್ದರು. ಇದೇ ಸಂದರ್ಭದಲ್ಲಿ ದುಬೆ ಬೆಂಬಲಿಗರು ಪೊಲೀಸರ ಬಳಿಯಿದ್ದ ಎಕೆ-47 ರೈಫಲ್ ಸೇರಿದಂತೆ ಶಸ್ತ್ರಾಸ್ತ್ರಗಳನ್ನು ಹೊತ್ತೊಯ್ದಿದ್ದರು. ಇದನ್ನೂ ಓದಿ: ಪೊಲೀಸರ ನರಹತ್ಯೆಗೈದ ಹಂತಕನ ಮನೆ ಉಡೀಸ್- ಐಷಾರಾಮಿ ಕಾರುಗಳು ಜಖಂ