– ಓರ್ವನನ್ನು ಬಿಟ್ಟು ಎಲ್ಲರೂ ಕಾಶ್ಮೀರದ ಉಗ್ರರೇ
ಶ್ರೀನಗರ: ಜಮ್ಮು ಮತ್ತು ಕಾಶ್ಮೀರಾದಲ್ಲಿ 8 ಮಂದಿ ಉನ್ನತ ಕಮಾಂಡರ್ ಸೇರಿದಂತೆ 22 ಜನ ಉಗ್ರರನ್ನು ಕಳೆದ 15 ದಿನಗಳಲ್ಲಿ ಭಾರತೀಯ ಸೇನೆ ಹೊಡೆದುರುಳಿಸಿದೆ.
ಈದ್ ಹಬ್ಬದ ನಂತರ ಉನ್ನತ ಭಯೋತ್ಪಾದಕರನ್ನು ಮತ್ತು ನಾಯಕರನ್ನು ಟಾರ್ಗೆಟ್ ಮಾಡಿ ಭಾರತೀಯ ಸೇನೆ ಹಲವು ದಾಳಿಗಳನ್ನು ಮಾಡಿತ್ತು. ಭಾರತೀಯ ಸೇನೆ ನೇರವಾಗಿ ಉಗ್ರ ನಾಯಕರು ಮತ್ತು ಟಾಪ್ ಕಮಾಂಡರ್ ಗಳನ್ನು ಗುರಿಯಾಗಿಸಿಕೊಂಡು ದಾಳಿ ಮಾಡಿದಾಗ, ಉಗ್ರರು ಪ್ರತಿದಾಳಿ ಮಾಡದಂತೆ ತಟಸ್ಥರಾದರು. ಈ ಕಾರಣದಿಂದ ಭಾರತೀಯ ಸೇನೆ ಭಯೋತ್ಪಾದಕರನ್ನು ಸೆದೆಬಡಿದಿದೆ ಎಂದು ಮೂಲಗಳು ತಿಳಿಸಿವೆ.
ಭಾರತೀಯ ಸೇನೆ ಇಸ್ಲಾಮಿಕ್ ಸ್ಟೇಟ್ ಜಮ್ಮು ಮತ್ತು ಕಾಶ್ಮೀರ (ಐಎಸ್‍ಜೆಕೆ) ಕಮಾಂಡರ್ ಆದಿಲ್ ಅಹ್ಮದ್ ವಾನಿ ಮತ್ತು ಲಷ್ಕರ್-ಎ-ತೈಬಾ (ಎಲ್‍ಇಟಿ) ಕೇಡರ್ ಶಾಹೀನ್ ಅಹ್ಮದ್ ಥೋಕರ್ ನನ್ನು ಮೇ 25 ರಂದು ಖುದ್ ಹಂಜಿಪೋರಾ ಕುಲ್ಗಂನಲ್ಲಿ ಹತ್ಯೆ ಮಾಡಿತ್ತು. ಇದಾದ ನಂತರ ಹಿಜ್ಬುಲ್ ಮುಜಾಹಿದ್ದೀನ್ (ಎಚ್‍ಎಂ) ಕಮಾಂಡರ್ ಪರ್ವೈಜ್ ಅಹ್ಮದ್ ಪಂಡಿತ್ ಇತಿರ್ ಮೇ 30 ರಂದು ವನ್‍ಪೊರಾ ಕುಲ್ಗಂನಲ್ಲಿ ಸೇನೆ ಹೊಡೆದು ಹಾಕಿತ್ತು.
ಹಿಜ್ಬುಲ್ ಮುಜಾಹಿದ್ದೀನ್ ಉಗ್ರ ಸಂಘಟನೆಯ ಟಾಪ್ ಕಮಾಂಡರ್ ಇಶ್ಫಾಕ್ ಅಹ್ಮದ್ ಇಟೂ, ಜೆಷ್-ಇ-ಮೊಹಮ್ಮದ್ ಸಂಘಟನೆಯ ಟಾಪ್ ಕಮಾಂಡರ್ ಓವೈಸ್ ಅಹ್ಮದ್ ಮಲಿಕ್‍ನನ್ನು ಜೂನ್ 7 ರಂದು ರೆಬನ್ ಶೋಪಿಯಾನ್‍ನಲ್ಲಿ ಭಾರತೀಯ ಸೇನೆ ಕೊಂದಿತ್ತು. ನಂತರ ಮೂವರು ಎಚ್‍ಎಂ ಕಮಾಂಡರ್ ಗಳಾದ ಆದಿಲ್ ಅಹ್ಮದ್ ಮಿರ್, ಬಿಲಾಲ್ ಅಹ್ಮದ್ ಭಟ್ ಮತ್ತು ಸಾಜಾದ್ ಅಹ್ಮದ್ ವಾ ಅವರನ್ನು ಸೇನೆ ಬಲಿ ಪಡೆದಿತ್ತು.
ಜೂನ್ 7ರಂದು, ಎಚ್‍ಎಂ ಕಮಾಂಡರ್ ಉಮರ್ ಮೊಹಿಯುದ್ದೀನ್ ಧೋಬಿ, ಎಲ್‍ಇಟಿ ಉನ್ನತ ಕಮಾಂಡರ್ ರಯೀಸ್ ಅಹ್ಮದ್ ಖಾನ್ ಮತ್ತು ಎಚ್‍ಎಂ ಕಮಾಂಡರ್ ಗಳಾದ ಸಕ್ಲೈನ್ ಅಹ್ಮದ್ ವಾಗೆ ಮತ್ತು ವಕೀಲ್ ಅಹ್ಮದ್ ನಾಯ್ಕು ಅವರನ್ನು ರೆಬನ್ ಶೋಪಿಯಾನ್‍ನಲ್ಲಿ ಸೇನೆ ಹೊಡೆದು ಹಾಕಿತ್ತು. ಇದರಲ್ಲಿ ಫೌಜಿ ಭಾಯ್ ಹೊರತುಪಡಿಸಿ ಎಲ್ಲಾ ಭಯೋತ್ಪಾದಕರು ಜಮ್ಮು ಮತ್ತು ಕಾಶ್ಮೀರದ ಸ್ಥಳೀಯರಾಗಿದ್ದು, ಅವರಲ್ಲಿ ಹೆಚ್ಚಿನವರು ಶೋಪಿಯಾನ್, ಕುಲ್ಗಮ್ ಮತ್ತು ಪುಲ್ವಾಮಾ ಜಿಲ್ಲೆಯವರಾಗಿದ್ದಾರೆ.
ಇವರ ಜೊತೆಗೆ ಮೇ 18ರಂದು ರಾಜೌರಿಯಲ್ಲಿ ಹೊಸದಾಗಿ ಒಳನುಸುಳಿದ ಗುಂಪಿನಿಂದ ನಾಲ್ಕು ಭಯೋತ್ಪಾದಕರು ಸೇನಾ ದಾಳಿಗೆ ಬಲಿಯಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ. ನೌಶೇರಾ ಸೆಕ್ಟರ್ ನಲ್ಲಿ ಎಲ್‍ಒಸಿ ಬಳಿ ಮೂವರು ಕೊಲ್ಲಲಾಗಿದೆ. ಕಲಕೋಟೆಯ ಗಡಿಯಲ್ಲಿ ಒಳನುಸುಳಿದ ಓರ್ವನನ್ನು ಕೊಲ್ಲಲಾಗಿದೆ ಎಂದು ಸೇನಾ ಮೂಲಗಳು ತಿಳಿಸಿವೆ.
ಹಿಜ್ಬುಲ್ ಮುಜಾಹಿದ್ದೀನ್ ಭಯೋತ್ಪಾದಕ ಸಂಘಟನೆಯಲ್ಲಿ ಕೆಲಸ ಮಾಡುತ್ತಿದ್ದ ಮುಜಾಫರ್ ಅಹ್ಮದ್ ನಾಯಕ್, ಜಾನ್ ಮೊಹಮ್ಮದ್ ನಜರ್ ಮತ್ತು ಆಜಾದ್ ಅಹ್ಮದ್ ಎಂಬ ಮೂವರು ಓವರ್ ಗ್ರೌಂಡ್ ವರ್ಕರ್ ಗಳನ್ನು ಅವಂತಿಪೋರಾ ಪೊಲೀಸರು ಜೀವಂತವಾಗಿ ಬಂಧಿಸಿದ್ದಾರೆ.
ಈ ಒಂದು ವರ್ಷದ ಅವಧಿಯಲ್ಲಿ ಸುಮಾರು 36 ಕಾರ್ಯಾಚರಣೆಗಳನ್ನು ಮಾಡಿ 88 ಭಯೋತ್ಪಾದಕರು ಕೊಲ್ಲಲಾಗಿದೆ ಎಂದು ಜಮ್ಮು ಮತ್ತು ಕಾಶ್ಮೀರದ ಪೊಲೀಸ್ ಮಹಾನಿರ್ದೇಶಕ (ಡಿಜಿಪಿ) ದಿಲ್ಬಾಗ್ ಸಿಂಗ್ ಹೇಳಿದ್ದಾರೆ. ಶೋಪಿಯಾನ್ ಜಿಲ್ಲೆಯ ಸುಗೂ ಪ್ರದೇಶದಲ್ಲಿ ಬುಧವಾರ ಮೂವರು ಭಯೋತ್ಪಾದಕರು ಸಾವನ್ನಪ್ಪಿದ್ದಾರೆ ಎಂದು ಭಾರತೀಯ ಸೇನೆ ಮಾಹಿತಿ ನೀಡಿದೆ.