– 2 ತಿಂಗಳ ಕಂದನಿಗಾಗಿ ಶಿವಮೊಗ್ಗ ಟು ಮಂಗಳೂರು ಪ್ರಯಾಣ
ಚಿಕ್ಕಮಗಳೂರು: ಶಿವಮೊಗ್ಗದಿಂದ ಮಂಗಳೂರಿಗೆ ತೆರಳುತ್ತಿದ್ದ ಅಂಬುಲೆನ್ಸ್ ಗೆ ಝೀರೋ ಟ್ರಾಫಿಕ್ ವ್ಯವಸ್ಥೆ ಮಾಡಿಕೊಟ್ಟ ಕಾಫಿನಾಡ ಪೊಲೀಸರಿಗೆ ಚಿಕ್ಕಮಗಳೂರು ಜನ ಶ್ಲಾಘಿಸಿದ್ದಾರೆ.
ಶಿವಮೊಗ್ಗ ಜಿಲ್ಲೆ ಶಿರಾಳಕೊಪ್ಪ ಮೂಲದ ಎರಡು ತಿಂಗಳ ಮಗುವಿಗೆ ತುರ್ತಾಗಿ ಹೃದಯ ಸಂಬಂಧಿ ಚಿಕಿತ್ಸೆ ನೀಡಬೇಕಿತ್ತು. ಆದರೆ ಬಡ ಕುಟುಂಬದ ಮಗುವಿನ ಪೋಷಕರು ಆಸ್ಪತ್ರೆಯಲ್ಲಿನ ಅಂಬುಲೆನ್ಸ್ ಹಣ ಹೆಚ್ಚಾಗಿದ್ದರಿಂದ ಟ್ರಸ್ಟ್ ಮೂಲಕ ಚಿಕ್ಕಮಗಳೂರಿನ ಅಂಬುಲೆನ್ಸ್ ಗೆ ಸಂಪರ್ಕಿಸಿದ್ದರು.
Advertisement
Advertisement
ಕೂಡಲೇ ಶಿವಮೊಗ್ಗಕ್ಕೆ ಹೋಗಿ ಮಗುವನ್ನು ಕರೆದುಕೊಂಡು ಹೊರಟ ಅಂಬುಲೆನ್ಸ್ ಚಾಲಕ ಆಗುಂಬೆ ಘಾಟ್ ಮೂಲಕ ಹೋಗಲು ರಸ್ತೆ ಜಾಮ್ ಆಗಿದ್ದ ಕಾರಣ ಚಿಕ್ಕಮಗಳೂರು ಮೂಲಕ ಮಂಗಳೂರಿಗೆ ಹೊರಟಿದ್ದಾರೆ. ಈ ವೇಳೆ ಅಂಬುಲೆನ್ಸ್ ಚಾಲಕ ಚಿಕ್ಕಮಗಳೂರು ಪೊಲೀಸರಿಗೆ ಮನವಿ ಮಾಡಿದ್ದರಿಂದ ಕಾಫಿನಾಡ ಖಾಕಿಗಳು ಚಿಕ್ಕಮಗಳೂರಿನಿಂದ ಕೊಟ್ಟಿಗೆಹಾರದ ಗಡಿ ದಾಟುವವರೆಗೂ ಅಂಬುಲೆನ್ಸ್ ಗೆ ಝೀರೋ ಟ್ರಾಫಿಕ್ ವ್ಯವಸ್ಥೆ ಕಲ್ಪಿಸಿದ್ದಾರೆ. ರಸ್ತೆಯುದ್ದಕ್ಕೂ ಕಾಫಿನಾಡ ಜನರೂ ಕೂಡ ದಾರಿ ಮಾಡಿಕೊಟ್ಟಿದ್ದಾರೆ.
Advertisement
Advertisement
ಶಿವಮೊಗ್ಗ – ಚಿಕ್ಕಮಗಳೂರು – ಮಂಗಳೂರು ಪ್ರಯಾಣಕ್ಕೆ ಸಾಧಾರಣ ಎಂಟು ಗಂಟೆ ಬೇಕು. ಆದರೆ ಅಂಬುಲೆನ್ಸ್ ಚಾಲಕ ಜೀಶಾನ್ ಮೂರೇ ಗಂಟೆಯಲ್ಲಿ ಮಂಗಳೂರು ತಲುಪಿದ್ದಾರೆ. ಚಾಲಕನ ಚಾಕಚಕ್ಯತೆಯ ಚಾಲನೆಗೆ ಜನರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಚಾರ್ಮಾಡಿ ಘಾಟಿನಲ್ಲಿ ಡ್ರೈವಿಂಗ್ ಮಾಡುವುದು ನಿಜಕ್ಕೂ ಸವಾಲಿನ ಕೆಲಸವಾಗಿರುತ್ತದೆ. ಹೀಗಿರುವಾಗ ಒಂದೇ ವೇಗವನ್ನು ಕಾಪಾಡಿಕೊಂಡು ಮೂರೇ ಗಂಟೆಗೆ ಶಿವಮೊಗ್ಗದಿಂದ ಮಂಗಳೂರಿಗೆ ತಲುಪಿರುವ ಡ್ರೈವರ್ ಜೀಶಾನ್ ಚಾಲನೆಗೂ ಜನ ಭೇಷ್ ಅಂದಿದ್ದಾರೆ.