ಚಿಕ್ಕಮಗಳೂರು: ತಾಯಿ ಬೈದಿದ್ದಕ್ಕೆ ಮನನೊಂದು ಏಳನೇ ತರಗತಿ ವಿದ್ಯಾರ್ಥಿನಿ ಆತ್ಮಹತ್ಯೆಗೆ (Suicide) ಶರಣಾಗಿರುವ ಘಟನೆ ಚಿಕ್ಕಮಗಳೂರು(Chikkamagaluru) ಜಿಲ್ಲೆ, ಕೊಪ್ಪ ತಾಲೂಕಿನ ಜಯಪುರ(Jayapura) ಸಮೀಪದ ಬಸರೀಕಟ್ಟೆ ಗ್ರಾಮದಲ್ಲಿ ನಡೆದಿದೆ.
ಮೃತಳನ್ನು 13 ವರ್ಷದ ಸುಪ್ರಿತಾ ಎಂದು ಗುರುತಿಸಲಾಗಿದೆ. ಬಸರಿಕಟ್ಟೆ ಗ್ರಾಮದಲ್ಲಿ ಮೊಬೈಲ್ ಅಂಗಡಿಗೆ ಕೆಲಸಕ್ಕೆ ಹೋಗಿದ್ದ ತಾಯಿ ಮಧ್ಯಾಹ್ನ ಊಟಕ್ಕೆ ಮನೆಗೆ ಬಂದಿದ್ದರು. ಈ ವೇಳೆ ಸುಪ್ರಿತಾ ಟಿವಿ ನೋಡುತ್ತಿದ್ದಳು. ತಾಯಿ ಊಟ ಹಾಕಿ ಕೊಟ್ಟಾಗ ಸುಪ್ರಿತಾ ಟಿವಿ ನೋಡುತ್ತಾ ತಟ್ಟೆ ಬೀಳಿಸಿ ಅನ್ನವನ್ನು ಚೆಲ್ಲಿದಳು. ಅದಕ್ಕೆ ತಾಯಿ ಬರೀ ಟಿವಿ ನೋಡು ಓದಬೇಡ, ಚೆಲ್ಲಿರುವ ಅನ್ನವನ್ನು ಕ್ಲೀನ್ ಮಾಡು ಎಂದು ಹೇಳಿ ಮತ್ತೆ ಕೆಲಸಕ್ಕೆ ಹೋಗಿದ್ದರು.
ತಾಯಿ ಕೆಲಸಕ್ಕೆ ಹೋದ ಬೆನ್ನಲ್ಲೇ ಬಾಲಕಿ ಸುಪ್ರಿತಾ ತನ್ನದೇ ವೇಲ್ ನಿಂದ ಮನೆಯ ಮೇಲ್ಛಾವಣಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾಳೆ. ವಿಷಯ ತಿಳಿದು ಮನೆಗೆ ಬಂದ ತಾಯಿ ಕೂಡಲೇ ಆಕೆಯನ್ನ ಆಸ್ಪತ್ರೆಗೆ ಕರೆದೊಯ್ದರು ಬಾಲಕಿ ಸಾವನ್ನಪ್ಪಿದ್ದಾಳೆ.
ಮೃತ ಬಾಲಕಿ ತಾಯಿ ಸರೋಜ ಗಂಡನಿಂದ ಬೇರೆಯಾಗಿ ಬೇರೆ ವಾಸವಿದ್ದಳು. ಹಿರಿಯ ಮಗಳು ತಾಯಿ ಜೊತೆ ಇದ್ದರೆ, ಕಿರಿಯ ಮಗಳು ತಂದೆ ಜೊತೆ ಇದ್ದಳು. ಜಯಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

