ಆಪರೇಷನ್ ಕಾವೇರಿ- 229 ಭಾರತೀಯರನ್ನು ಹೊತ್ತ 7ನೇ ವಿಮಾನ ಜೆಡ್ಡಾದಿಂದ ಬೆಂಗಳೂರಿನತ್ತ

Public TV
2 Min Read
OPERATION KAVERI

ರಿಯಾದ್: ಆಪರೇಷನ್ ಕಾವೇರಿಯಡಿಯಲ್ಲಿ (Operation Kaveri) ಸುಡಾನ್‌ನಿಂದ (Sudan) ಭಾರತೀಯರನ್ನು ರಕ್ಷಿಸುವ ಕಾರ್ಯ ನಡೆಯುತ್ತಿದ್ದು, 229 ಭಾರತೀಯರು ಭಾನುವಾರ ಜೆಡ್ಡಾದಿಂದ (Jeddah) ಬೆಂಗಳೂರಿಗೆ (Bengaluru) ತೆರಳುವ ವಿಮಾನದಲ್ಲಿ ಹೊರಟಿದ್ದಾರೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ (Ministry Of External Affairs) ತಿಳಿಸಿದೆ.

ಈ ಕುರಿತು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಅಧಿಕೃತ ವಕ್ತಾರ ಅರಿಂದಮ್ ಬಾಗ್ಚಿ (Arindam Bagchi)  ತಮ್ಮ ಟ್ವಿಟ್ಟರ್‌ (Twitter) ಖಾತೆಯಲ್ಲಿ ಟ್ವೀಟ್ (Tweet) ಮಾಡುವ ಮೂಲಕ ಮಾಹಿತಿಯನ್ನು ಹಂಚಿಕೊಂಡಿದ್ದಾರೆ. ಆಪರೇಷನ್ ಕಾವೇರಿ ನಾಗರಿಕರನ್ನು ಮರಳಿ ಮನೆಗೆ ಕರೆತರುತ್ತಿದೆ. 229 ಪ್ರಯಾಣಿಕರನ್ನು ಹೊತ್ತ 7ನೇ ವಿಮಾನವು ಇದಾಗಿದ್ದು, ಜೆಡ್ಡಾದಿಂದ ಬೆಂಗಳೂರಿಗೆ ತೆರಳಲಿದೆ ಎಂದು ಟ್ವೀಟ್ ಮಾಡಿದ್ದಾರೆ. ಇದನ್ನೂ ಓದಿ: ರೇಪ್‍ನಿಂದ ರಕ್ಷಿಸಲು ಮೃತ ಹೆಣ್ಣು ಮಕ್ಕಳ ಸಮಾಧಿಗೆ ಬೀಗ ಹಾಕಿದ ಪಾಕ್‌ ಪಾಲಕರು

ಸುಡಾನ್‌ನಲ್ಲಿ ಕದನ ವಿರಾಮವನ್ನು ಘೋಷಿಸಿರುವುದರಿಂದ, ಭಾರತ ಸೇರಿದಂತೆ ಹಲವಾರು ದೇಶಗಳು ತಮ್ಮ ನಾಗರಿಕರನ್ನು ಸಂಘರ್ಷ-ಪೀಡಿತ ರಾಷ್ಟ್ರದಿಂದ ಸ್ಥಳಾಂತಿರಸಲು ಪ್ರಯತ್ನಿಸುತ್ತಿವೆ. ಇದಕ್ಕೂ ಮೊದಲು, ಭಾರತೀಯ ನೌಕಾಪಡೆಯ ಹಡಗು, ಐಎನ್‌ಎಸ್ ಟೆಗ್ (INS Teg), ಶನಿವಾರ ಸುಡಾನ್‌ನಲ್ಲಿ ಸಿಲುಕಿಕೊಂಡಿದ್ದ 288 ಭಾರತೀಯರನ್ನು ಆಪರೇಷನ್ ಕಾವೇರಿ ಮೂಲಕ ಯಶಸ್ವಿಯಾಗಿ ಸ್ಥಳಾಂತರಿಸಿತು. ಸುಡಾನ್ ಸಂಘರ್ಷಣೆಯಲ್ಲಿ ಸಿಲುಕಿಕೊಂಡಿದ್ದ 14ನೇ ತಂಡ ಇದಾಗಿದ್ದು, ಭಾರತಕ್ಕೆ ಮರಳಲು ಜೆಡ್ಡಾಕ್ಕೆ ತೆರಳಿದೆ. ಇದನ್ನೂ ಓದಿ: ಉಕ್ರೇನ್ ಮೇಲೆ ರಷ್ಯಾ ಕ್ಷಿಪಣಿ ದಾಳಿ – 5 ಮಕ್ಕಳು ಸೇರಿ 26 ಜನ ಸಾವು

ಈ ಹಿಂದೆ ಪೋರ್ಟ್ ಸುಡಾನ್‌ನಲ್ಲಿ ನೆಲೆಗೊಂಡಿದ್ದ ಐಎನ್‌ಎಸ್ ಸುಮೇಧಾ (INS Sumedha) ಬಿಕ್ಕಟ್ಟಿನಿಂದಾಗಿ 300 ಪ್ರಯಾಣಿಕರೊಂದಿಗೆ ಜೆಡ್ಡಾಕ್ಕೆ ಹೊರಟಿತ್ತು. ಆಪರೇಷನ್ ಕಾವೇರಿಯಡಿಯಲ್ಲಿ ಭಾರತ ಸರ್ಕಾರವು ಸುಮಾರು 3,000 ಭಾರತೀಯರನ್ನು ಸುಡಾನ್‌ನಿಂದ ಸ್ಥಳಾಂತರಿಸಲು ನಿರ್ಧರಿಸಿದೆ. ಇದನ್ನೂ ಓದಿ: ಸುಡಾನ್‌ನಲ್ಲಿ ಸಂಘರ್ಷ – ಜೆಡ್ಡಾದಿಂದ 362 ಭಾರತೀಯರು ಬೆಂಗಳೂರು ಕಡೆ ಪ್ರಯಾಣ


ಸೇನಾಪಡೆ ಮತ್ತು ಅರೆಸೇನಾ ಪಡೆಗಳ ನಡುವಿನ ಘರ್ಷಣೆಯಿಂದಾಗಿ ಸುಡಾನ್ ದೇಶವು ರಕ್ತಪಾತವನ್ನು ಅನುಭವಿಸುತ್ತಿದೆ. ಇಲ್ಲಿಯವರೆಗೆ 2,400ಕ್ಕೂ ಹೆಚ್ಚು ಭಾರತೀಯರನ್ನು ಸುಡಾನ್‌ನಿಂದ ಭಾರತಕ್ಕೆ ಸ್ಥಳಾಂತರಿಸಲಾಗಿದೆ. ಭಾರತೀಯ ವಲಸೆಗಾರರು “ಭಾರತ್ ಮಾತಾ ಕೀ ಜೈ” ಮತ್ತು “ವಂದೇ ಮಾತರಂ” ಘೋಷಣೆಗಳನ್ನು ಕೂಗಿದರು. ಅಲ್ಲದೇ ಆಪರೇಷನ್ ಕಾವೇರಿ ಅಡಿಯಲ್ಲಿ ಸುಡಾನ್‌ನಿಂದ ರಕ್ಷಿಸಿದ್ದಕ್ಕಾಗಿ ಪ್ರಧಾನಿ ನರೇಂದ್ರ ಮೋದಿ (Narendra Modi) ಮತ್ತು ವಿದೇಶಾಂಗ ಸಚಿವ ಎಸ್.ಜೈಶಂಕರ್ (S.Jaishankar) ಅವರನ್ನು ಶ್ಲಾಘಿಸಿದ್ದಾರೆ. ಇದನ್ನೂ ಓದಿ: ಆಪರೇಷನ್ ಕಾವೇರಿ- 135 ಮಂದಿ ಭಾರತೀಯರಿದ್ದ 3ನೇ ತಂಡ ಸೌದಿಗೆ ರೀಚ್

Share This Article