DistrictsHassanKarnatakaLatestMain Post

ಶಾಲೆಗೆ ಹೋಗಿದ್ದ 7ನೇ ಕ್ಲಾಸ್ ಬಾಲಕಿ ನಾಪತ್ತೆ – ಸ್ಕೂಲ್ ಬಳಿ ಬ್ಯಾಗ್ ಬಿಟ್ಟು ಕಣ್ಮರೆ

ಹಾಸನ: ಶಾಲೆಗೆ ತೆರಳಿದ್ದ ಏಳನೇ ತರಗತಿ ವಿದ್ಯಾರ್ಥಿನಿ ನಿಗೂಢ ರೀತಿಯಲ್ಲಿ ನಾಪತ್ತೆಯಾಗಿರುವ ಘಟನೆ ಹಾಸನ (Hassan) ಜಿಲ್ಲೆ ಚನ್ನರಾಯಪಟ್ಟಣ ತಾಲೂಕಿನ ಅಣತಿ ಗ್ರಾಮದಲ್ಲಿ ನಡೆದಿದೆ.

ದಾಸರಹಳ್ಳಿ ಗ್ರಾಮದ ಡಿ.ಬಿ.ಕುಮಾರ್ ಅವರ ಸಾಕು ಮಗಳು ನಂದಿತಾ (Nanditha) ಕಾಣೆಯಾದಾಕೆ. ಅಣತಿ ಸರ್ಕಾರಿ ಶಾಲೆಯಲ್ಲಿ ಓದುತ್ತಿರುವ ನಂದಿತಾ, ಸರ್ಕಾರಿ ಹಾಸ್ಟೆಲ್‍ನಲ್ಲಿದ್ದಳು. ನವೆಂಬರ್ 7ರಂದು ಸಂಜೆ 5 ಗಂಟೆ ಸುಮಾರಿಗೆ ಶಾಲೆ ಮುಗಿಸಿ ಹಾಸ್ಟೆಲ್‍ಗೆ ಹೋಗದೆ ನಾಪತ್ತೆಯಾಗಿದ್ದಾಳೆ.

ಮೂಲತಃ ಕೆ.ಆರ್.ಪೇಟೆ, ತಾಲ್ಲೂಕಿನ ನಂಜೇಗೌಡ ಮಂಗಳ ದಂಪತಿ ಪುತ್ರಿ ನಂದಿತಾಳನ್ನು ತಾತ ಚನ್ನರಾಯಪಟ್ಟಣ ದಾಸರಹಳ್ಳಿ ಗ್ರಾಮದ ಕುಮಾರ್ ಸಾಕಿಕೊಂಡು ವಿದ್ಯಾಭ್ಯಾಸ (Education) ಕೊಡಿಸುತ್ತಿದ್ದರು. ನವೆಂಬರ್ 7 ಸೋಮವಾರದಂದು ಶಾಲೆಗೆ ಬಂದಿದ್ದ ನಂದಿತಾ ಸಂಜೆಯವರೆಗೂ ಶಾಲೆ (School) ಮುಗಿಸಿ ವಾಪಸ್ ಹೋಗಿದ್ದಾಳೆ. ಶಿಕ್ಷಕರು ವಿದ್ಯಾರ್ಥಿಗಳೆಲ್ಲಾ ಹೋದ ಕೆಲಹೊತ್ತಿನಲ್ಲೇ ವಾಪಸ್ ಶಾಲೆಗೆ ಬಂದಿರುವ ನಂದಿತಾ ಶಾಲಾ ಆವರಣದಲ್ಲಿ ಬ್ಯಾಗ್ ಇಟ್ಟು ದಿಢೀರ್ ಕಾಣಿಯಾಗಿದ್ದಾಳೆ. ಇದನ್ನೂ ಓದಿ: ಮದರಸಾಗೆ ತೆರಳುತ್ತಿದ್ದ ಬಾಲಕಿಯನ್ನು ಎತ್ತಿ ನೆಲಕ್ಕೆಸೆದ ಕಿರಾತಕ

ಇತ್ತ ಸೋಮವಾರ ಸಂಜೆ ಹಾಸ್ಟೆಲ್‍ಗೆ ನಂದಿತಾ ಬಾರದಿದ್ದರಿಂದ ಹಾಸ್ಟೆಲ್ ವಾರ್ಡನ್ ನಂದಿತಾ ತಾತ ಕುಮಾರ್‍ಗೆ ಫೋನ್ ಮಾಡಿ ವಿಷಯ ತಿಳಿಸಿದ್ದಾರೆ. ಶಾಲೆಯಲ್ಲಿ ವಿಚಾರಿಸಿದಾಗ ನಂದಿತಾ ನಾಪತ್ತೆ ಆಗಿರುವ ವಿಷಯ ಗೊತ್ತಾಗಿದೆ. ಕುಮಾರ್ ನುಗ್ಗೇಹಳ್ಳಿ ಪೊಲೀಸ್ ಠಾಣೆಗೆ ದೂರು ನೀಡಿದ್ದು ದಾಸರಹಳ್ಳಿ ಗ್ರಾಮದ ಗಿರೀಶ್, ನಂದಿತಾಳನ್ನು ಪುಸಲಾಯಿಸಿ ಕರೆದುಕೊಂಡು ಹೋಗಿದ್ದಾನೆ ಎಂದು ಶಂಕೆ ವ್ಯಕ್ತಪಡಿಸಿದ್ದಾರೆ.

ಪೊಲೀಸರು ಗಿರೀಶ್‍ನನ್ನು ವಶಕ್ಕೆ ಪಡೆದು ತನಿಖೆ ಮುಂದುವರಿಸಿದ್ದಾರೆ. ಇತ್ತ ಗಿರೀಶ್ ಅನಾಥನಾಗಿದ್ದು, ವ್ಯಾನ್ ಇಟ್ಟುಕೊಂಡು ಜೀವನ ನಡೆಸುತ್ತಿದ್ದಾನೆ. ನಂದಿತಾ ತನ್ನ ಪೋಷಕರಿಗೆ ಫೋನ್ ಮಾಡಿಕೊಡು ಎಂದಾಗ ಆತ ಫೋನ್ ಮಾಡಿ ಕೊಟ್ಟಿದ್ದಾನೆ. ಈ ಕಾರಣಕ್ಕೆ ಅವನ ಮೇಲೆ ಅನುಮಾನ ಪಡಲಾಗುತ್ತಿದೆ ಅಂತ ಗ್ರಾಮಸ್ಥರು ತಿಳಿಸಿದ್ದಾರೆ.

ಇದೀಗ ಸಾಕು ಮಗಳು ಹಾಗೂ ವಿದ್ಯಾರ್ಥಿನಿ ನಿಗೂಢ ನಾಪತ್ತೆಯಿಂದ ಪೋಷಕರು ಹಾಗೂ ಶಿಕ್ಷಕರು ಆತಂಕಗೊಂಡಿದ್ದಾರೆ. ಗಿರೀಶ್‍ನನ್ನು ವಶಕ್ಕೆ ಪಡೆದಿರುವ ನುಗ್ಗೇಹಳ್ಳಿ ಪೊಲೀಸರು ತನಿಖೆ ಚುರುಕುಗೊಳಿಸಿದ್ದು, ನಂದಿತಾಳ ಸುಳಿವು ಮಾತ್ರ ಇದುವರೆಗೂ ಪತ್ತೆಯಾಗಿಲ್ಲ.

Live Tv

Leave a Reply

Your email address will not be published. Required fields are marked *

Back to top button