ಬೆಂಗಳೂರು: ಕೊರೊನಾ ವೈರಸ್ ಗೆ ಕರುನಾಡು ಬೆಚ್ಚು ಬಿದ್ದಿದೆ. ಇತ್ತ ಶಿಕ್ಷಣ ಇಲಾಖೆ ಕೂಡ ಮಕ್ಕಳ ಹಿತದೃಷ್ಟಿಯಿಂದ ಪರೀಕ್ಷೆಗಳನ್ನ ಮುಂದೂಡಿಕೆ ಮಾಡಿ ಆದೇಶ ಹೊರಡಿಸಿದೆ. ಮಾರ್ಚ್ 31 ವರೆಗೂ 7,8 ಮತ್ತು 9ನೇ ತರಗತಿಗಳನ್ನು ನಡೆಸದಂತೆ ಎಲ್ಲಾ ಶಾಲೆಗಳಿಗೂ ಆದೇಶ ಹೊರಡಿಸಿದೆ.
ಈ ಮೊದಲು ಮಾರ್ಚ್ 23ರ ಒಳಗೆ 7-9 ನೇ ತರಗತಿವರೆಗೆ ಪರೀಕ್ಷೆಗಳು ಮುಗಿಸಿ ಬೇಸಿಗೆ ರಜೆ ನೀಡಲು ಸಾರ್ವಜನಿಕ ಶಿಕ್ಷಣ ಇಲಾಖೆ ಆದೇಶ ಹೊರಡಿಸಿತ್ತು. ಆದರೆ ಕೊರೊನಾ ಆತಂಕ ಹೆಚ್ಚಾದ ಹಿನ್ನೆಲೆಯಲ್ಲಿ ಹಳೆಯ ಆದೇಶವನ್ನು ರದ್ದು ಮಾಡಿದೆ. ಮಾರ್ಚ್ 31 ವರೆಗೆ 7-9 ನೇ ತರಗತಿವರೆಗೆ ಪರೀಕ್ಷೆ ನಡೆಸದೆ ವಿದ್ಯಾರ್ಥಿಗಳಿಗೆ ರಜೆ ನೀಡಬೇಕು ಅಂತ ಆದೇಶ ಹೊರಡಿಸಿದೆ. ಅಲ್ಲದೆ ಮಾರ್ಚ್ 31 ರ ನಂತರ ಹೊಸ ವೇಳಾಪಟ್ಟಿ ಹೊರಡಿಸೋದಾಗಿ ಶಿಕ್ಷಣ ಇಲಾಖೆ ತಿಳಿಸಿದೆ.
Advertisement
Advertisement
ಈಗಾಗಲೇ 1-6 ನೇ ತರಗತಿವರೆಗೆ ಪರೀಕ್ಷೆಗಳನ್ನ ಶಿಕ್ಷಣ ಇಲಾಖೆ ರದ್ದು ಮಾಡಿ ಮಕ್ಕಳಿಗೆ ಬೇಸಿಗೆ ರಜೆ ಘೋಷಿಸಿದೆ. ಈಗ 7-9 ನೇ ತರಗತಿವರೆಗೆ ಪರೀಕ್ಷೆ ಮುಂದೂಡಿದ್ದು, ಪರಿಸ್ಥಿತಿಗೆ ಅನುಗುಣವಾಗಿ ಮುಂದೆ ವೇಳಾಪಟ್ಟಿ ಪ್ರಕರಣ ಮಾಡೋದಾಗಿ ಸರ್ಕಾರಿ, ಅನುದಾನಿತ, ಖಾಸಗಿ ಶಾಲೆಗಳಿಗೆ ಸೂಚನೆ ನೀಡಿದೆ. ರಾಜ್ಯ ಸರ್ಕಾರ ಅಧೀನದ ಎಲ್ಲಾ ಶಾಲೆಗಳಿಗೂ ಈ ಆದೇಶ ಅನ್ವಯ ಆಗಲಿದೆ.
Advertisement
ಇನ್ನು ಎಸ್.ಎಸ್.ಎಲ್.ಸಿ ಪರೀಕ್ಷೆಗಳಿಗೆ ಯಾವುದೇ ತೊಂದರೆ ಇಲ್ಲ. ಮೊದಲೇ ನಿಗದಿಯಾಗಿರುವಂತೆ ಮಾರ್ಚ್ 27 ರಿಂದ ಪರೀಕ್ಷೆಗಳು ನಡೆಯಲಿದೆ. ಯಾವುದೇ ಬದಲಾವಣೆ ವೇಳಾಪಟ್ಟಿಯಲ್ಲಿ ಇಲ್ಲ ಅಂತ ಶಿಕ್ಷಣ ಇಲಾಖೆ ಸ್ಪಷ್ಟಪಡಿಸಿದೆ. ಇದಲ್ಲದೆ ಈಗಾಗಲೇ ನಡೆಯುತ್ತಿರೋ ದ್ವಿತೀಯ ಪಿಯುಸಿ ಪರೀಕ್ಷೆಗಳು ಮೊದಲ ವೇಳಾಪಟ್ಟಿಯಂತೆ ಮುಂದುವರಿಯಲಿವೆ ಅಂತ ಶಿಕ್ಷಣ ಇಲಾಖೆ ಸ್ಪಷ್ಟಪಡಿಸಿದೆ.