– ಪ್ರಕರಣಕ್ಕೆ ಸ್ಫೋಟಕ ತಿರುವು ನೀಡಿದ್ದ ಟೂರಿಸ್ಟ್ ಗೈಡ್ ಹೇಳಿಕೆ
– ಪತಿ ಕೊಲ್ಲಲು ಕಾಂಟ್ರ್ಯಾಕ್ಟ್ ಕಿಲ್ಲರ್ಸ್ ನೇಮಿಸಿಕೊಂಡಿದ್ದ ಸೋನಮ್
ಶಿಲ್ಲಾಂಗ್: ಇಡೀ ದೇಶಾದ್ಯಂತ ವ್ಯಾಪಕ ಸದ್ದು ಮಾಡಿದ್ದ ಹನಿಮೂನ್ ಮರ್ಡರ್ ಕೇಸ್ (Honeymoon Murder Case) ಕೊನೆಗೂ ತಾರ್ಕಿಕ ಅಂತ್ಯಕ್ಕೆ ಬಂದಂತಿದೆ. ಇಂದೋರ್ ಉದ್ಯಮಿ ರಾಜಾ ರಘುವಂಶಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಮಾರು 790 ಪುಟಗಳ ದೋಷಾರೋಪ ಪಟ್ಟಿ ಸಲ್ಲಿಸಿರುವ ಮೇಘಾಲಯ ಪೊಲೀಸರ ವಿಶೇಷ ತನಿಖಾ ತಂಡ (Meghalaya SIT) ರಾಜಾ ಪತ್ನಿ ಸೋನಂ ರಘುವಂಶಿಯೇ ಪ್ರಮುಖ ಆರೋಪಿ ಎಂದು ತಿಳಿಸಿದೆ. ಅಲ್ಲದೇ ಆಕೆಯ ಪ್ರಿಯಕರ ರಾಜ್ ಕುಶ್ವಾಹ ಸೇರಿ ಇತರ ಮೂವರ ವಿರುದ್ಧವೂ ಕೊಲೆ ಆರೋಪ ಹೊರಿಸಿದೆ.
ಇಂದೋರ್ ಮೂಲದ ಉದ್ಯಮಿಯ ಕೊಲೆಗೆ ಸಂಬಂಧಿಸಿದಂತೆ ವಿವಿಧ ಆಯಾಮಗಳಲ್ಲಿ ತನಿಖೆ ನಡೆಸಿದ್ದ ಮೇಘಾಲಯ ಪೊಲೀಸರ ವಿಶೇಷ ತನಿಖಾ ತಂಡ ಸೊಹ್ರಾ ಸಬ್-ಡಿವಿಷನ್‌ನ ನ್ಯಾಯಾಂಗ ಮ್ಯಾಜಿಸ್ಟ್ರೇಟ್ ಪ್ರಥಮ ದರ್ಜೆ ನ್ಯಾಯಾಲಯಕ್ಕೆ 790 ಪುಟಗಳ ದೋಷಾರೋಪ ಪಟ್ಟಿ (Chargesheet) ಸಲ್ಲಿಸಿದ್ದಾರೆ. ಇದನ್ನೂ ಓದಿ: Honeymoon Murder | ಕಾಂಟ್ರ್ಯಾಕ್ಟ್ ಕಿಲ್ಲರ್ಸ್.. ಫೋನ್‌ಕಾಲ್‌ನಲ್ಲೇ ಪಿನ್ ಟು ಪಿನ್ ಅಪ್ಡೇಟ್ – ಕೊಲೆ ರಹಸ್ಯ ಬಯಲಾಗಿದ್ದೇ ರೋಚಕ
ಈಗಾಗಲೇ ಬಂಧಿಸಿರುವ ಸೋನಮ್ ರಘುವಂಶಿ (Sonam Raghuvanshi), ರಾಜ್ ಕುಶ್ವಾಹ, ಆಕಾಶ್ ರಜಪೂತ್, ಆನಂದ್ ಕುರ್ಮಿ ಮತ್ತು ವಿಶಾಲ್ ಸಿಂಗ್ ಚೌಹಾಣ್ ಆರೋಪಿಗಳನ್ನ ನ್ಯಾಯಾಂಗ ಬಂಧನದಲ್ಲಿರಿಸಲಾಗಿದೆ. ಕಳೆದ ಮೇ 23ರಂದು ಜನಪ್ರಿಯ ಪ್ರವಾಸಿ ತಾಣ ಸೊಹ್ರಾಕ್ಕೆ ತೆರಳಿದ್ದ ವೇಳೆ ಸೋನಮ್ ತನ್ನ ಗಂಡನನ್ನ ಕೊಲ್ಲಲು ಸಹಾಯ ಮಾಡಿದ್ದಾಗಿ ಆರೋಪ ಹೊರಿಸಲಾಗಿದೆ. ಇದನ್ನೂ ಓದಿ: Honeymoon Murder | ಕೊನೆಗೂ ತಮ್ಮಿಬ್ಬರ ಸಂಬಂಧ ಒಪ್ಪಿಕೊಂಡ ಸೋನಂ ರಘುವಂಶಿ – ರಾಜ್
ಎಲ್ಲ ಆರೋಪಿಗಳ ವಿರುದ್ಧ ಕೊಲೆಗಾಗಿ 103 (I), ಸಾಕ್ಷಿ ಕಣ್ಮರೆಗಾಗಿ 238 (a) ಹಾಗೂ ಕ್ರಿಮಿನಲ್ ಪಿತೂರಿಗಾಗಿ 61 (2) ಬಿಎನ್‌ಎಸ್ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಹೆಚ್ಚುವರಿ ಎಫ್‌ಐಎಲ್ ವರದಿಗಳು ಬಂದ ನಂತರ ಇತರ ಮೂವರು ಆರೋಪಿಗಳ ವಿರುದ್ಧ ಪೂರಕ ಆರೋಪ ಪಟ್ಟಿ ಸಲ್ಲಿಸಲಾಗುವುದು ಎಂದು ಪೂರ್ವ ಖಾಸಿ ಹಿಲ್ಸ್ ಎಸ್ಪಿ ವಿವೇಕ್ ಸೈಮ್ ತಿಳಿಸಿದ್ದಾರೆ. ಆಲ್ಲದೇ ಸಾಕ್ಷ್ಯ ನಾಶ ಮತ್ತು ಮರೆಮಾಚುವ ಆರೋಪದ ಮೇಲೆ ಬಂಧಿಸಲ್ಪಟ್ಟ ಜೇಮ್ಸ್, ತೋಮರ್ ಮತ್ತು ಅಹಿರ್ಬರ್ ಪ್ರಸ್ತುತ ಜಾಮೀನಿನ ಮೇಲೆ ಹೊರಗಿದ್ದಾರೆ. ಅವರ ಮೇಲೂ ನಿಗಾ ಇಡಲಾಗಿದೆ ಎಂದು ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ: Honeymoon Murder | ರಾಜ್‌ನ ಆಭರಣ, 5 ಲಕ್ಷ ನಗದು, ಪಿಸ್ತೂಲ್ ಇದ್ದ ಹಂತಕಿಯ ಬ್ಯಾಗ್ ಮುಚ್ಚಿಟ್ಟಿದ್ದ ಫ್ಲ್ಯಾಟ್ ಓನರ್ ಅರೆಸ್ಟ್
ಏನಿದು ಪ್ರಕರಣ?
ಇಂದೋರ್ ಮೂಲದ ರಾಜಾ ರಘುವಂಶಿ (Raja Raghuvanshi) ಮತ್ತು ಸೋನಮ್ ಕಳೆದ ಮೇ 11ರಂದು ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು. ನವದಂಪತಿ ಮೇ 20ರಂದು ಹನಿಮೂನ್‌ಗೆಂದು ಮೇಘಾಲಯಕ್ಕೆ ತೆರಳಿದ್ದರು. ಶಿಲ್ಲಾಂಗ್‌ನ ಬಾಲಾಜಿ ಅತಿಥಿಗೃಹದಲ್ಲಿ ಉಳಿದುಕೊಂಡಿದ್ದ ಅವರು ಮೇ 22ರ ಬೆಳಗ್ಗೆ ದ್ವಿಚಕ್ರ ವಾಹನವೊಂದನ್ನ ಬಾಡಿಗೆ ಪಡೆದು ಅತಿಥಿ ಗೃಹದಿಂದ ಜನಪ್ರಿಯ ಪ್ರವಾಸಿ ತಾಣ ಸೊಹ್ರಾಕ್ಕೆ ಮಧುಚಂದ್ರ ವೀಕ್ಷಣೆಗೆ ತೆರಳಿದ್ದರು. ಈ ವೇಳೆ ಅವರು 2 ಲಗೇಜ್ ಬ್ಯಾಗ್ ತಮ್ಮೊಂದಿಗೆ ತೆಗೆದುಕೊಂಡಿದ್ದರು. ಮೇ 25ರೊಳಗೆ ಹಿಂತಿರುಗುವುದಾಗಿ ಅತಿಥಿ ಗೃಹದ ವ್ಯವಸ್ಥಾಪಕರಿಗೆ ತಿಳಿಸಿದ್ದರು. ಮೇ 23ರಂದು ಮೌಲಾಖಿಯಾತ್ ಗ್ರಾಮ ತಲುಪಿದ ದಂಪತಿ, ನೊಂಗ್ರಿಯಾಟ್‌ನ ಶಿಪಾರಾ ಹೋಂಸ್ಟೇಯಲ್ಲಿ ವಾಸ್ತವ್ಯ ಹೂಡಿದ್ದರು. ಆ ಬಳಿಕ ದಂಪತಿ ನಿಗೂಢವಾಗಿ ನಾಪತ್ತೆಯಾಗಿದ್ದರು. ಇದಾದ 1 ದಿನದ ಬಳಿಕ ಅವರು ಬಾಡಿಗೆಗೆ ಪಡೆದಿದ್ದ ಸ್ಕೂಟಿ ಸೊಹ್ರಾರಿಮ್ ಬಳಿ ಪತ್ತೆಯಾಗಿತ್ತು. 11 ದಿನಗಳ ಹುಡುಕಾಟದ ಬಳಿಕ ಶಿಲ್ಲಾಂಗ್ ಪೊಲೀಸರು ಆಳವಾದ ಕಂದಕವೊಂದರಲ್ಲಿ ರಾಜಾ ರಘುವಂಶಿಯ ಮೃತದೇಹ ಪತ್ತೆ ಹಚ್ಚಿದ್ದರು. ಅವರನ್ನು ಮಾರಕಾಸ್ತ್ರದಿಂದ ಕೊಚ್ಚಿ ಕೊಲೆ ಮಾಡಲಾಗಿದೆ ಎಂದು ದೃಢಪಡಿಸಿದ್ದರು.
ಸ್ಫೋಟಕ ತಿರುವು ಸಿಕ್ಕಿದ್ದೆಲ್ಲಿ?
ಮೇಘಾಲಯದ ಸೊಹ್ರಾ ಪ್ರದೇಶದಲ್ಲಿ ಈ ಮೊದಲು ಕೂಡ ಟೂರಿಸ್ಟ್‌ಗಳು ನಾಪತ್ತೆಯಾಗಿದ್ದರು. ಇದರಿಂದಾಗಿ ರಾಜಾ ರಘುವಂಶಿ ದಂಪತಿ ನಾಪತ್ತೆ ಪ್ರಕರಣ ಮೇಘಾಲಯದಲ್ಲಿ ಭಾರೀ ಸುದ್ದಿಯಾಗಿತ್ತು. ರಾಜಾ ರಘುವಂಶಿ ಮೃತದೇಹ ಪತ್ತೆ ಬಳಿಕ ಪ್ರಕರಣದ ಹಿಂದಿನ ಪಿತೂರಿ ಪೊಲೀಸರಿಗೆ ದೊಡ್ಡ ಸವಾಲಾಗಿತ್ತು. ಇದೇ ವೇಳೆ ಸ್ಥಳೀಯ ಟೂರಿಸ್ಟ್ ಗೈಡ್ ಒಬ್ಬರು ಸ್ಫೋಟಕ ಮಾಹಿತಿ ನೀಡಿದ್ದರು. ಇದನ್ನೂ ಓದಿ: Honeymoon Murder | ಬೇರೊಂದು ಮಹಿಳೆ ಹತ್ಯೆಗೈದು ಸೋನಮ್ ಶವವೆಂದು ನಂಬಿಸೋಕೆ ಮುಂದಾಗಿದ್ದ ಹಂತಕರು
ಮೇ 23 ರಂದು ಬೆಳಗ್ಗೆ 10 ಗಂಟೆ ಸುಮಾರಿಗೆ ನೊಂಗ್ರಿಯಾತ್‌ನಿಂದ ಮಾವ್ಲಾಖಿಯಾತ್‌ಗೆ 3,000 ಮೆಟ್ಟಿಲುಗಳನ್ನು ಹತ್ತುತ್ತಿದ್ದಾಗ ಮೂವರು ಪುರುಷ ಪ್ರವಾಸಿಗರು ದಂಪತಿ ಜೊತೆಗೆ ಇದ್ದುದ್ದನ್ನು ನೋಡಿದೆ. ಮೇ.22ರಂದು ದಂಪತಿಯನ್ನ ನೊಂಗ್ರಿಯಾಟ್‌ಗೆ ಕರೆದೊಯ್ಯಲು ನಾನು ಮುಂದಾದೆ. ಆದರೆ, ಅವರು ನನ್ನ ಗೈಡ್ ಸೇವೆಯನ್ನ ಒಳ್ಳೆಯ ಮಾತುಗಳಿಂದಲೇ ಬೇಡವೆಂದರು. ಇದೇ ವೇಳೆ ಭಾ ವಾನ್ಸಾಯಿ ಎಂಬ ಇನ್ನೊಬ್ಬ ಗೈಡ್‌ನನ್ನು ನೇಮಕ ಮಾಡಿಕೊಂಡ ದಂಪತಿ, ಶಿವಾರಾ ಹೋಂಸ್ಟೇಯಲ್ಲಿ ರಾತ್ರಿ ಕಳೆದು, ಮರುದಿನ ಅವರಿಬ್ಬರೇ ಹೊರಬಂದರು. ನಾನು ಅವರನ್ನು ಮತ್ತೆ ನೋಡಿದಾಗ ನಾಲ್ವರು ಪುರುಷರಿದ್ದರು, ಆದ್ರೆ ಅವರು ಹಿಂದಿಯಲ್ಲಿ ಮಾತನಾಡುತ್ತಿದ್ದರು. ಹಾಗಾಗಿ ನನಗೆ ಅದನ್ನು ಸಂಪೂರ್ಣವಾಗಿ ಅರ್ಥ ಮಾಡಿಕೊಳ್ಳಲು ಆಗಲಿಲ್ಲ. ಪುರುಷರು ಮೌಲಖಿಯಾತ್ ತಲುಪಿದಾಗ, ದಂಪತಿಗಳ ಸ್ಕೂಟರ್ ಅಲ್ಲಿ ಇರಲಿಲ್ಲ ಎಂದು ಗೈಡ್ ಸ್ಥಳೀಯ ಪೊಲೀಸರಿಗೆ ಮಾಹಿತಿ ನೀಡಿದ್ದರು. ಈ ಮಾಹಿತಿ ಪೊಲೀಸ್ ತನಿಖೆಯ ದಿಕ್ಕನ್ನೇ ಬದಲಿಸಿತ್ತು.
ಸುಳ್ಳಿನ ನಾಟಕವಾಡಿದ್ದ ಸೋನಂ
ಜೂ.9ರ ತಡರಾತ್ರಿ 1:42ರ ವೇಳೆ ಘಾಜಿಪುರ ಜಿಲ್ಲೆಯ ನಂದಗಂಜ್‌ನ ಡಾಬಾದಲ್ಲಿ ಭಯಭೀತ ಸ್ಥಿತಿಯಲ್ಲಿ ಮಹಿಳೆಯೊಬ್ಬರು ಪತ್ತೆಯಾಗಿದ್ದಾರೆ ಎಂಬ ಮಾಹಿತಿ ಬಂದಿತ್ತು. ಬಳಿಕ ಪೊಲೀಸರು ಸ್ಥಳಕ್ಕೆ ತಲುಪಿದಾಗ ಆಕೆ ತನ್ನನ್ನ ಸೋನಮ್ ರಘುವಂಶಿ ಎಂದು ಗುರುತಿಸಿಕೊಂಡಳು. ತನ್ನ ಪತಿಯೊಂದಿಗೆ ಮೇಘಾಲಯಕ್ಕೆ ಹೋಗಿರುವುದಾಗಿ ಹೇಳಿಕೊಂಡಿದ್ದಳು, ಡಾಬಾ ಮಾಲೀಕನ ಮುಂದೆಯೂ ಸುಳ್ಳಿನ ನಾಟಕವಾಡಿದ್ದಳು. ಅಲ್ಲಿ ಕೆಲ ಅಪರಿಚಿತ ವ್ಯಕ್ತಿಗಳು ತನ್ನ ಪತಿಯನ್ನು ಕೊಂದರು. ಬಳಿಕ ನನ್ನನ್ನ ಕಿಡ್ನ್ಯಾಪ್ ಮಾಡಿ ಇಲ್ಲಿ ಬಿಟ್ಟುಹೋದ್ರು ಎಂದು ಕಥೆ ಕಟ್ಟಿದ್ದಳು ಸೋನಮ್.
ಪ್ರೀ ಪ್ಲ್ಯಾನ್ಡ್ ಮರ್ಡರ್
ಕಿಡ್ನ್ಯಾಪ್ ಮಾಡಿದ್ಮೇಲೆ ನನ್ನ ಚಿನ್ನಾಭರಣ ದೋಚಿದ್ರು, ಪ್ರಜ್ಞೆ ಬರುತ್ತಿದ್ದಂತೆ ಘಾಜಿಪುರದ ಡಾಬಾ ಬಳಿ ಕತ್ತಲೆ ಕೋಣೆಯಲ್ಲಿ ಬಿಟ್ಟು ಹೋದ್ರು ಅಂತೆಲ್ಲ ಕಥೆ ಕಟ್ಟಿದ್ದಳು. ಆದ್ರೆ ಪೊಲೀಸರು ಇದ್ಯಾವುದನ್ನೂ ನಂಬಲಿಲ್ಲ. ಕೊಲೆಗಾರರು ಪತ್ತೆಯಾದ ಕೆಲವೇ ಸಮಯದಲ್ಲಿ ಸೋನಮ್ ಕೂಡ ಕಾಣಿಸಿಕೊಂಡಿದ್ದರಿಂದ ಅನುಮಾನ ಹೆಚ್ಚಾಗಿಯೇ ಇತ್ತು. ಆಕೆಯನ್ನು ಬಂಧಿಸಿದ ಬಳಿಕ ಇದು ಪೂರ್ವಯೋಜನೆಯಾಗಿತ್ತು ಎಂಬುದನ್ನು ಪೂರ್ವ ಖಾಸಿ ಹಿಲ್ಸ್ ಎಸ್ಪಿ ವಿವೇಕ್ ಸಿಮ್ ಬಹಿರಂಗಪಡಿಸಿದ್ದರು. ಪೊಲೀಸರು ಆಕೆಯನ್ನ ತೀವ್ರ ವಿಚಾರನೆಗೆ ಒಳಪಡಿಸಿದ ಬಳಿಕ ಸೋನಮ್ ಖುದ್ದು ತಪ್ಪೊಪ್ಪಿಕೊಂಡಿದ್ದಳು. ಇದನ್ನೂ ಓದಿ: ಯುವತಿಯನ್ನು ಪ್ರೀತಿಸಿ, ಮದುವೆಯಾಗಿ ಕಿರುಕುಳ ಆರೋಪ – ಮಾಜಿ ಕಾರ್ಪೊರೇಟರ್ ದಂಪತಿ, ಪುತ್ರನ ವಿರುದ್ಧ FIR