ಬೆಂಗಳೂರು: ಇಲ್ಲಿನ ಫೀಲ್ಡ್ ಮಾರ್ಷಲ್ ಮಾಣಿಕ್ ಷಾ ಪರೇಡ್ ಮೈದಾನದಲ್ಲಿ 77ನೇ ಸ್ವಾತಂತ್ರ್ಯ ದಿನಾಚರಣೆ (77th IndependenceDay) ಅಂಗವಾಗಿ ಧ್ವಜಾರೋಹಣ ನೆರವೇರಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಅವರು ನಾಡಿನ ಸಮಸ್ತ ಜನತೆಗೆ ಸ್ವಾತಂತ್ರ್ಯ ದಿನಾಚರಣೆಯ ಶುಭಾಶಯ ಕೋರಿದ್ದಾರೆ.
ಬಳಿಕ ಸಮಾರಂಭವನ್ನುದ್ದೇಶಿಸಿ ಮಾತನಾಡಿದ ಸಿಎಂ, ಶಾಂತಿಯುತ ಸಮಾಜವಿದ್ದರೆ ಮಾತ್ರ ಅಭಿವೃದ್ಧಿ ಸಾಧ್ಯ. ಇದು ಜನರಿಗೆ ಅರ್ಥವಾಗಿರೋದ್ರಿಂದ ದುಷ್ಟರ ಆಟಗಳು ಬಹಳ ಕಾಲ ನಡೆಯುವುದಿಲ್ಲ ಅಂತ ಕರ್ನಾಟಕದ ಜನರೇ ಸಾಬೀತು ಮಾಡಿದ್ದಾರೆ ಎಂದು ಪ್ರತಿಪಕ್ಷಗಳ ವಿರುದ್ಧ ಕಿಡಿ ಕಾರಿದ್ದಾರೆ. ಇದನ್ನೂ ಓದಿ: ನಾವು ತೆಗೆದುಕೊಳ್ಳುವ ನಿರ್ಧಾರ ಮುಂದಿನ 1,000 ವರ್ಷ ಭಾರತಕ್ಕೆ ದಿಕ್ಕು ತೋರಲಿದೆ: ಮೋದಿ
Advertisement
Advertisement
ಇದೇ ವೇಳೆ 5 ಗ್ಯಾರಂಟಿಗಳ (Congress Guarantee) ಪ್ರಸ್ತಾಪ ಮಾಡಿದ ಸಿಎಂ, ಶಕ್ತಿ ಯೋಜನೆಯಿಂದ ನಿತ್ಯ 50-60 ಲಕ್ಷ ಮಹಿಳೆಯರು ನಿತ್ಯ ಬಸ್‌ನಲ್ಲಿ ಪ್ರಯಾಣ ಮಾಡುತ್ತಿದ್ದಾರೆ. ಇದೂವರೆಗೆ 38.54 ಕೋಟಿ ಮಹಿಳೆಯರು ಉಚಿತವಾಗಿ ಪ್ರಯಾಣ ಮಾಡಿದ್ದಾರೆ. ಆಗಸ್ಟ್ 27 ರಿಂದ ಗೃಹಲಕ್ಷ್ಮಿ ಯೋಜನೆ ಜಾರಿಗೆ ಬರಲಿದ್ದು, ಜುಲೈ 1 ರಿಂದ ಗೃಹಜ್ಯೋತಿ ಯೋಜನೆ ಜಾರಿಗೆ ಬಂದಿದೆ. ಇದುವರೆಗೆ ಗೃಹಜ್ಯೋತಿ ಯೋಜನೆಗೆ 1.49 ಕೋಟಿ ಗ್ರಾಹಕರು ನೋಂದಣಿ ಮಾಡಿಕೊಂಡಿದ್ದಾರೆ, ಬಾಡಿಗೆದಾರರೂ ಇದರ ಪ್ರಯೋಜನ ಪಡೆಯಲಿದ್ದಾರೆ. ಇದನ್ನೂ ಓದಿ: IndependenceDay: ಭಾಗ-3: ಕರ್ನಾಟಕ ಸ್ವಾತಂತ್ರ್ಯ ಹೋರಾಟದಲ್ಲಿ ಈಸೂರು ದುರಂತ ಸ್ಮರಣೀಯ
Advertisement
ಈ ಯೋಜನೆಗೆ 13,910 ಕೋಟಿ ಖರ್ಚಾಗಲಿದೆ. ಅನ್ನಭಾಗ್ಯಕ್ಕೆ ಕೇಂದ್ರ ಸರ್ಕಾರದ ಉದ್ದೇಶಪೂರ್ವಕ ಅಸಹಕಾರದ ನಡುವೆಯೂ ಯೋಜನೆ ಜಾರಿ ಮಾಡಿದ್ದೇವೆ. ಈವರೆಗೆ 1.04 ಕೋಟಿ ಕುಟುಂಬಗಳಿಗೆ ನಗದು ವರ್ಗಾವಣೆ ಆಗಿದೆ. ಉಳಿದ ಕುಟುಂಬಗಳಿಗೆ ಶೀಘ್ರವೇ ಹಣ ವರ್ಗಾವಣೆ ಮಾಡಲಾಗುತ್ತದೆ. ಶಾಂತಿಯುತ ಸಮಾಜವಿದ್ದರೆ ಮಾತ್ರ ಅಭಿವೃದ್ಧಿ ಸಾಧಿಸಲು ಸಾಧ್ಯ ಎಂದು ನಮ್ಮ ಜನರಿಗೆ ಅರ್ಥವಾಗಿರುವುದರಿಂದ ದುಷ್ಟರ ಆಟಗಳು ಬಹಳ ಕಾಲ ನಡೆಯುವುದಿಲ್ಲ ಎಂಬುದನ್ನು ಕರ್ನಾಟಕದ ಜನರೇ ಸಾಬೀತು ಮಾಡಿದ್ದಾರೆ. ವಸಾಹತುವಾದ ಮತ್ತು ಸಾಮ್ರಾಜ್ಯವಾದಗಳು ಜೀವಂತವಾಗಿದ್ದಾಗ, ಸ್ವಾತಂತ್ರ್ಯ ಗಳಿಸಿದರೆ ಸಾಕು ಅಭಿವೃದ್ಧಿ ಎಂಬುದು ತನ್ನಿಂದ ತಾನೆ ಸಾಧ್ಯವಾಗುತ್ತದೆ. ಇದನ್ನು ಭಾವಿಸಿಯೇ ನಮ್ಮ ಹಿರಿಯರು ಹೋರಾಟ ಮಾಡಿದ್ದರು. ಇದು ಸತ್ಯ ಕೂಡ ಆಗಿತ್ತು ಎಂದು ಹೇಳಿದ್ದಾರೆ.
Advertisement
ಸ್ವಾತಂತ್ರ್ಯವೇನೊ ಲಭಿಸಿತು. ಆದರೆ ನವ ಉದಾರವಾದಿ ನೀತಿಗಳು ಜಗತ್ತಿನಾದ್ಯಂತ ಪ್ರಾರಂಭವಾದ ಮೇಲೆ ಬಡವರು ಮತ್ತು ಶ್ರೀಮಂತರ ನಡುವಿನ ಅಂತರ ಹೆಚ್ಚಾಗುತ್ತಾ ಹೋಯಿತು. ಇಂದು ನಮ್ಮಲ್ಲಿಯೇ 10% ರಷ್ಟು ಜನ 78% ಕ್ಕಿಂತ ಹೆಚ್ಚಿನ ಪ್ರಮಾಣದ ಸಂಪತ್ತಿನ ಮೇಲೆ ಯಜಮಾನಿಕೆ ಹೊಂದಿದ್ದಾರೆ. ಬ್ರಿಟಿಷರು ಭಾರತದಿಂದ ನಮ್ಮ ದೇಶದ ಸಂಪತ್ತನ್ನ ಹೊತ್ತೊಯ್ದರು. ಆದರೆ ಇಂದು ನಮ್ಮಲ್ಲಿ ಕೆಲವೇ ದೊಡ್ಡ ಬಂಡವಾಳಿಗರ ಬಳಿ ಶೇಖರಣೆಗೊಳ್ಳುತ್ತಿದೆ. ಈ ರೀತಿಯಾದರೆ ಅಭಿವೃದ್ಧಿ ಸಾಧ್ಯವೆ? ಇದನ್ನೆಲ್ಲ ಮನಗಂಡು ನಾವು ಸಂಪತ್ತಿನ ಸಂಗ್ರಹ ಮತ್ತು ಹಂಚಿಕೆ ಹಾಗೂ ಮರುಹಂಚಿಕೆಗಳಲ್ಲಿ ಸಾಮಾಜಿಕ ನ್ಯಾಯವನ್ನ ಪಾಲಿಸುತ್ತಿದ್ದೇವೆ. ಶಕ್ತಿ, ಗೃಹಜ್ಯೋತಿ, ಅನ್ನಭಾಗ್ಯ, ಗೃಹಲಕ್ಷ್ಮಿ ಹಾಗೂ ಯುವನಿಧಿ ಎಂಬ 5 ಗ್ಯಾರಂಟಿ ಯೋಜನೆಗಳನ್ನ ಜಾರಿಗೆ ತಂದಿದ್ದೇವೆ ಎಂದು ವಿವರಿಸಿದ್ದಾರೆ.
ಅರ್ಥಶಾಸ್ತ್ರಜ್ಞ ಅಮರ್ತ್ಯ ಸೇನ್ ಅವರ ಪ್ರಮೇಯವಾದ ಅಭಿವೃದ್ಧಿಯೆ ಸ್ವಾತಂತ್ರ್ಯ ಎಂಬುದರಲ್ಲಿ ನಂಬಿಕೆಯಿಟ್ಟು ಈ ಯೋಜನೆಗಳನ್ನು ರೂಪಿಸಿ ಅನುಷ್ಠಾನ ಮಾಡುತ್ತಿದ್ದೇವೆ. ಬ್ರಿಟಿಷರು ಭಾರತದ ಸ್ಥಳೀಯ ಉತ್ಪಾದನಾ ವಿಧಾನಗಳ ಕೈ ಬೆರಳುಗಳನ್ನ ಕತ್ತರಿಸಿ ಹಾಕಿ ಮಾರುಕಟ್ಟೆಯ ಮೇಲೆ ಯಜಮಾನಿಕೆ ಸಾಧಿಸಿದ್ದರು. ಇದರಿಂದಾಗಿ ದೇಶದ ಆರ್ಥಿಕತೆ ಪೂರ್ತಿ ಪಾತಾಳಕ್ಕೆ ಕುಸಿದಿತ್ತು. ಬ್ರಿಟಿಷರು ದೇಶದ ಜನರ ಮೇಲೆ ಸಾಲವನ್ನು, ಕೈಗಳಿಗೆ ನಿರುದ್ಯೋಗ ಹೊಟ್ಟೆ ತುಂಬ ಹಸಿವನ್ನು ಬಳುವಳಿಯಾಗಿ ಕೊಟ್ಟು ಹೋಗಿದ್ದರು. ಇಂಥ ಸಂದರ್ಭದಲ್ಲಿ ಮಹಾತ್ಮ ಗಾಂಧೀಜಿ ಮತ್ತು ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಚಿಂತನೆಗಳು ಮತ್ತು ಪಂಡಿತ್ ಜವಾಹರಲಾಲ್ ನೆಹರೂ ಅವರ ಕಾರ್ಯಯೋಜನೆಗಳು ದೇಶವನ್ನು ಪಾತಾಳದಿಂದ ಮೇಲೆತ್ತಲು ಸಾಧ್ಯ ಮಾಡಿದವು. ಇವರೆಲ್ಲರ ಕೊಡುಗೆಯಿಂದ ಭಾರತವು ಇಂದು ಜಗತ್ತಿನಲ್ಲಿ ಅತ್ಯಂತ ಪ್ರಬಲ ದೇಶವಾಗಿ ಬೆಳೆದಿದೆ ಎಂದು ಹೇಳಿದ್ದಾರೆ.
ಯಾವುದೇ ಯೋಜನೆ ಜಾರಿಗೊಳಿಸುವಾಗ ಸಮಾಜದ ಕಟ್ಟ ಕಡೆಯ ವ್ಯಕ್ತಿಗೆ ಇದರಿಂದ ಅನುಕೂಲವಾಗುವುದೇ? ಸಾಮಾಜಿಕ ನ್ಯಾಯ ಪಾಲನೆಯಾಗಿದೆಯೇ? ಎಂದು ಯೋಚಿಸಿಯೇ ಮುಂದಡಿಯಿಡುವುದು ನಮ್ಮ ಆಡಳಿತದ ಅಂತಃಸತ್ವವಾಗಿದೆ. ಬೆಲೆ ಏರಿಕೆ, ನಿರುದ್ಯೋಗ, ಜಾತಿ-ಧರ್ಮಗಳ ಕಾರಣಕ್ಕಾಗಿ ತಾರತಮ್ಯ ಭ್ರಷ್ಟಚಾರ ಮುಂತಾದ ಕಾರಣಗಳಿಗಾಗಿ ನಾಡಿನ ಜನರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದರು. ರಾಜ್ಯದ ಅನೇಕ ಜಿಲ್ಲೆಗಳ ಜನರ ತಲಾದಾಯ ಹಿಂದೆ ಆಡಳಿತ ನಡೆಸಿದ್ದ ನಮ್ಮ ಹಿಂದಿನ ಸರ್ಕಾರದ ಅವಧಿಗೆ ಹೋಲಿಸಿದರೆ ಆ ನಂತರದ ಅವಧಿಯಲ್ಲಿ ಏರಿಕೆಯಾಗದೆ ಬಡತನ ಇನ್ನಷ್ಟು ಹೆಚ್ಚುತ್ತಿರುವುದು ನಮ್ಮ ಗಮನಕ್ಕೆ ಬಂದಿತ್ತು. ಇದನ್ನೆಲ್ಲ ಗಂಭೀರವಾಗಿ ಪರಿಗಣಿಸಿದ ನಮ್ಮ ಸರ್ಕಾರ ಜನರ ಆರ್ಥಿಕ, ಸಾಮಾಜಿಕ ಚೈತನ್ಯ ಹೆಚ್ಚಿಸುವ ಉದ್ದೇಶದಿಂದ ಸಾರ್ವತ್ರಿಕ ಮೂಲ ಆದಾಯ [Universal Basic income] ಎಂಬ ಹೊಸ ಆರ್ಥಿಕ ಪ್ರಮೇಯ ಅಳವಡಿಸಿಕೊಂಡು ಗ್ಯಾರಂಟಿ ಯೋಜನೆಗಳನ್ನು ರೂಪಿಸಿದೆ. ಅಧಿಕಾರ ಸ್ವೀಕರಿಸಿದ ಮೊದಲ ದಿನವೇ ನಡೆದ ಸಚಿವ ಸಂಪುಟ ಸಭೆಯಲ್ಲಿ ಚುನಾವಣೆಗೂ ಮೊದಲು ನಾವು ಆಶ್ವಾಸನೆ ನೀಡಿದ್ದ 5 ಗ್ಯಾರಂಟಿ ಯೋಜನೆಗಳ ಅನುಷ್ಠಾನಕ್ಕೆ ತಾತ್ವಿಕ ಅನುಮೋದನೆ ನೀಡಿದ್ದೇವು. ಸರ್ಕಾರ ಅಧಿಕಾರಕ್ಕೆ ಬಂದ 3 ವಾರಗಳಲ್ಲಿಯೇ ಗ್ಯಾರಂಟಿ ಯೋಜನೆಗಳ ಜಾರಿ ಪ್ರಾರಂಭಿಸಿ ಎಲ್ಲ ಸವಲತ್ತುಗಳನ್ನು ಜನರಿಗೆ ನೇರವಾಗಿ ತಲುಪಿಸುತ್ತಿದ್ದೇವೆ ಎಂದಿದ್ದಾರೆ.
ಮಹಿಳೆಯರು, ಲಿಂಗತ್ವ ಅಲ್ಪಸಂಖ್ಯಾತರಿಗೆ ಉಚಿತ ಬಸ್ ಪ್ರಯಾಣ ಸೌಲಭ್ಯ ಕಲ್ಪಿಸುವ ‘ಶಕ್ತಿʼ ಯೋಜನೆಯು ನಿಜಾರ್ಥದಲ್ಲಿ ಮಹಿಳೆಯರ ಹಾಗೂ ನಾಡಿನ ಸಬಲೀಕರಣಕ್ಕೆ ಪುಷ್ಟಿ ನೀಡಿದೆ. ಪ್ರತಿದಿನ ಸರಾಸರಿ 50 ರಿಂದ 60 ಲಕ್ಷ ಮಹಿಳೆಯರಿಗೆ ಇದರ ಅನುಕೂಲವಾಗುತ್ತಿದೆ. ನಮ್ಮ ಈ ಯೋಜನೆಯ ಕುರಿತು ರಾಷ್ಟ್ರೀಯ-ಅಂತಾರಾಷ್ಟ್ರೀಯ ಮಾಧ್ಯಮಗಳು ಅಧ್ಯಯನ ಮಾಡಿ ವ್ಯಾಪಕ ಪ್ರಶಂಸೆ ಮಾಡಿ ಬರೆದಿವೆ. ನಮ್ಮ ಸರ್ಕಾರದ ಈ ಗ್ಯಾರಂಟಿ ಯೋಜನೆಗಳಿಂದ ಬಡ, ಮಧ್ಯಮ ವರ್ಗದ ಕುಟುಂಬಗಳ ಬದುಕಿನಲ್ಲಿ ಸಾಕಷ್ಟು ಬದಲಾವಣೆ ಬರಲಿದೆ. ಜಾತಿ, ಮತ, ವರ್ಗ, ವರ್ಣ ಭೇದವಿಲ್ಲದೆ ಈ ಗ್ಯಾರಂಟಿ ಯೋಜನೆಗಳನ್ನು ಜಾರಿಗೊಳಿಸಲಾಗುತ್ತಿದೆ. ನಮ್ಮ ಗ್ಯಾರಂಟಿ ಯೋಜನೆಗಳ ಕುರಿತು ಕೆಲವರು ನಕಾರಾತ್ಮಕ ಭಾವನೆ ಸಮಾಜದಲ್ಲಿ ಉತ್ಪಾದಿಸಲು ಪ್ರಯತ್ನಿಸುತ್ತಿದ್ದಾರೆ. ಸರ್ಕಾರವು ರಾಜ್ಯದ ಭೌತಿಕ ಅಭಿವೃದ್ಧಿ ಮತ್ತು ಸಾಮಾಜಿಕ ಅಭಿವೃದ್ಧಿ ಎಂಬ ಎರಡೂ ಮಾದರಿಗಳನ್ನ ಒಂದೇ ರೀತಿಯಲ್ಲಿ ಪರಿಭಾವಿಸಿದೆ.
ಭಾಷಣ ಮುಖ್ಯಾಂಶಗಳು:
* ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರಗಳಲ್ಲಿ ಮೂಲಸೌಕರ್ಯ ಅಭಿವೃದ್ಧಿಗೆ ನಮ್ಮ ಸರ್ಕಾರದಿಂದ ಆದ್ಯತೆ.
* ಶಾಲಾ ಕೊಠಡಿಗಳ ನಿರ್ಮಾಣ, ದುರಸ್ತಿಗೆ 650 ಕೋಟಿ ರೂ. ಹಾಗೂ ಶಾಲೆ, ಕಾಲೇಜುಗಳಲ್ಲಿ ಶೌಚಾಲಯ ನಿರ್ಮಾಣ ಕೈಗೊಳ್ಳಲು 200 ಕೋಟಿ ರೂ. ಅನುದಾನ
* ಶಾಲೆಗಳಲ್ಲಿ ಕಲಿಯುತ್ತಿರುವ ಮಕ್ಕಳಿಗೆ ವಾರಕ್ಕೆ ಎರಡು ದಿನ ಮೊಟ್ಟೆ ಕೊಡಲು ತೀರ್ಮಾನ
* ನಮ್ಮ 5 ವರ್ಷಗಳ ಅವಧಿಯಲ್ಲಿ ಅಗತ್ಯ ಇರುವವರಿಗೆ ಸೂರು ನೀಡಲು ಯೋಜಿಸಿದ್ದೇವೆ.
* ಸರ್ಕಾರಿ ಬಸ್ಸುಗಳ ಟ್ರ್ಯಾಕಿಂಗ್ ವ್ಯವಸ್ಥೆ, ಪ್ಯಾನಿಕ್ ಬಟನ್ ವ್ಯವಸ್ಥೆ ಪ್ರಾರಂಭಿಸಲು ಸಿದ್ಧತೆ
* ಬ್ರ್ಯಾಂಡ್ ಬೆಂಗಳೂರು ಪರಿಕಲ್ಪನೆಯಡಿ ಬೆಂಗಳೂರು ನಗರವನ್ನ ಅಂತಾರಾಷ್ಟ್ರೀಯ ಮಟ್ಟಕ್ಕೆ ಏರಿಸಲು ನಿರ್ಧಾರ
* ನಗರದ ಸಂಚಾರ ವ್ಯವಸ್ಥೆ, ಪರಿಸರ, ಘನತ್ಯಾಜ್ಯ ನಿರ್ವಹಣೆ, ಸಾರ್ವಜನಿಕ ಸ್ಥಳಗಳ ಸದ್ಬಳಕೆ, ಆರೋಗ್ಯ, ಪ್ರಾಣಿಗಳ ಆರೋಗ್ಯ, ಜನಸ್ನೇಹಿ ಇ-ಆಡಳಿತ ವ್ಯವಸ್ಥೆ, ನೀರಿನ ಭದ್ರತೆ ಹಾಗೂ ಪ್ರವಾಹ ನಿರ್ವಹಣೆಯ ಸವಾಲುಗಳನ್ನು ಎದುರಿಸಲು ಒತ್ತು
Web Stories