ನವದೆಹಲಿ: 2019 ರಿಂದ 2020ರ ನಡುವೆ ಉತ್ಪಾದಿಸಿದ ಹೋಂಡಾ ಕಾರ್ ಸಂಸ್ಥೆಯ ವಿವಿಧ ಮಾದರಿಯ 77,954 ಕಾರುಗಳ ಇಂಧನ ಪಂಪ್ (ಫ್ಯೂಯೆಲ್ ಪಂಪ್) ಗಳಲ್ಲಿ ದೋಷ ಕಾಣಿಸಿದ್ದು, ಇವುಗಳನ್ನು ಸರಿಪಡಿಸಲು ಹೋಡಾ ಕಾರ್ ಸಂಸ್ಥೆ ಮುಂದಾಗಿದೆ.
ಹೋಂಡಾ ಸಂಸ್ಥೆ ಒಟ್ಟು 7 ಮಾಡೆಲ್ ಕಾರುಗಳಿಗೆ ಉಚಿತವಾಗಿ ಬದಲಿ ಪಂಪ್ ಅಳವಡಿಕೆ ಮಾಡಿಕೊಡಲಿದ್ದು, ಈ ಅಭಿಯಾನಕ್ಕೆ ಇಂದು ಚಾಲನೆ ಸಿಕ್ಕಿದೆ.
2019ರ ಜನವರಿ ಆಗಸ್ಟ್ ನಡುವೆ ಉತ್ಪಾದನೆಗೊಂಡ 36,086 ಅಮೇಝ್ ಕಾರು, ಡಬ್ಲ್ಯೂ ಆರ್ ವಿ ಹೆಸರಿನ 7,871, ಜಾಝ್ – 6,235, 2019 ಜನವರಿ-ಸೆಪ್ಟೆಂಬರ್ ನಡುವೆ ನಿರ್ಮಿಸಿದ ಫೋರ್ಥ್ ಜೆನ್ ಸಿಟಿ-20,248, ಸಿವಿಕ್-5,170, 2019 ಜನವರಿ-ಅಕ್ಟೋಬರ್ ನಡುವೆ ನಿರ್ಮಿಸಿದ ಬಿಆರ್-ವಿ – 1737, 2019 ಜನವರಿಯಿಂದ 2020 ಸೆಪ್ಟೆಂಬರ್ ಅವಧಿಯಲ್ಲಿ ನಿರ್ಮಾಣವಾದ 607 ಕಾರುಗಳು ಸೇರಿ ಒಟ್ಟು 77,954 ಕಾರುಗಳ ಫ್ಯೂಯೆಲ್ ಪಂಪ್‍ನಲ್ಲಿ ದೋಷ ಕಾಣಿಸಿಕೊಂಡಿದೆ ಎಂದು ಹೇಳಿದ್ದು, ಇವುಗಳ ಬದಲಾವಣೆ ಕಾರ್ಯ ಆರಂಭವಾಗಿದೆ.
ಇಂಧನ ಪಂಪ್ ಬದಲಾವಣೆ ಇಂದಿನಿಂದ ಹಂತ ಹಂತವಾಗಿ ಭಾರತದಾದ್ಯಂತ ಇರುವ ತನ್ನ ಡೀಲರ್‍ಶಿಪ್‍ಗಳಲ್ಲಿ ಉಚಿತವಾಗಿ ನಡೆಯಲಿದೆ ಮತ್ತು ಈ ದೋಷಪೂರಿತ ಕಾರುಗಳ ಮಾಲೀಕರನ್ನು ಹೋಂಡಾ ಸಂಸ್ಥೆಯೇ ವೈಯಕ್ತಿಕವಾಗಿ ಪತ್ತೆ ಹಚ್ಚಿ ಫ್ಯೂಯೆಲ್ ಪಂಪನ್ನು ಉಚಿತವಾಗಿ ಬದಲಾಯಿಸಿ ಕೊಡುವುದಾಗಿ ಹೋಂಡಾ ಸಂಸ್ಥೆ ಹೇಳಿದೆ.
ಇದಕ್ಕಾಗಿ ಹೋಂಡಾ ಕಾರ್ ಸಂಸ್ಥೆಯು ತನ್ನ ವೆಬ್‍ಸೈಟ್‍ನಲ್ಲಿ ಮೈಕ್ರೋಸೈಟ್ ಓಪನ್ ಮಾಡಿದ್ದು, ಗ್ರಾಹಕರು ತಮ್ಮ ಕಾರಿನ 17 ಅಂಕಿಗಳ ವೆಹಿಕಲ್ ಐಡೆಂಟಿಫಿಕೇಶನ್ ನಂಬರ್ ಬಳಸಿ ತಮ್ಮ ಕಾರು ಇದರ ವ್ಯಾಪ್ತಿಗೆ ಒಳಪಡಲಿದೆಯೇ ಎಂದು ಪತ್ತೆ ಹಚ್ಚಬಹುದು.
2018ರಲ್ಲಿ ಉತ್ಪಾದನೆಗೊಂಡಿದ್ದ 65,651 ಕಾರುಗಳಲ್ಲಿ ಇಂಥದ್ದೇ ದೋಷ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಕಳೆದ ವರ್ಷ ಅವುಗಳ ಇಂಧನ ಪಂಪ್‍ಗಳನ್ನು ಹೋಂಡಾ ಸಂಸ್ಥೆ ಬದಲಿಸಿಕೊಟ್ಟಿತ್ತು.