– ಮಕ್ಕಳು ಮಾತ್ರವಲ್ಲದೆ ದೊಡ್ಡವರಿಗೂ ಪಾಠ
– ರಾತ್ರಿ- ಹಗಲೆನ್ನದೆ ದಣಿವರಿಯದೆ ಕಾಯಕ
ಭುವನೇಶ್ವರ್: ಕಳೆದ 75 ವರ್ಷಗಳಿಂದ ವೃದ್ಧರೊಬ್ಬರು ಯಾವುದೇ ಶುಲ್ಕ ತೆಗೆದುಕೊಳ್ಳದೆ ಮರದ ಕೆಳಗೆ ಪಾಠ ಮಾಡುತ್ತಿದ್ದಾರೆ.
ವೃದ್ಧನನ್ನು ನಂದ ಪ್ರಾಸ್ತಿ ಎಂದು ಗುರುತಿಸಲಾಗಿದೆ. ಇವರು ಕೇವಲ ಮಕ್ಕಳಿಗೆ ಮಾತ್ರವಲ್ಲದೆ ದೊಡ್ಡವರಿಗೂ ಉಚಿತ ಶಿಕ್ಷಣ ನೀಡುತ್ತಿದ್ದಾರೆ. ದೊಡ್ಡವರಿಗೆ ಮಾತ್ರ ರಾತ್ರಿ ಸಮಯದಲ್ಲಿ ಪಾಠಗಳನ್ನು ಹೇಳಿಕೊಡುತ್ತಿದ್ದಾರೆ.
Advertisement
Advertisement
ತಮ್ಮ ಶಿಕ್ಷಣ ಪೂರ್ಣಗೊಳಿಸಲು 4 ನೇ ತರಗತಿ ಬಳಿಕ ಮಕ್ಕಳನ್ನು ಪ್ರಾಥಮಿಕ ಶಾಲೆಗೆ ಕಳುಹಿಸುವಂತೆ ಸೂಚಿಸಿದ್ದಾರೆ. ಬೋಧನೆ ಮೇಲಿನ ಉತ್ಸಾಹ ಅವರನ್ನು ಈ ಮಟ್ಟಕ್ಕೆ ಕರೆದುಕೊಂಡು ಬಂದಿದೆ. ಹೀಗಾಗಿ ಅವರು ಬರೋಬ್ಬರಿ 75 ವರ್ಷಗಳಿಂದ ನಿರಂತರವಾಗಿ ದಣಿವರಿಯದೇ ಉಚಿತ ಶಿಕ್ಷಣ ನೀಡುತ್ತಾ ಬಂದಿದ್ದಾರೆ. ಜೊತೆಗೆ ಜಜ್ಪುರ್ ಜಿಲ್ಲೆಯ ಚಿಕ್ಕ ಮಕ್ಕಳ ಶಿಕ್ಷಣಕ್ಕೆ ಮೊದಲ ಆದ್ಯತೆ ನೀಡಿದರು.
Advertisement
ವೃದ್ಧ ಬರ್ತಂಡ ಗ್ರಾಮದವರಾಗಿದ್ದು, ಇವರ ಸೇವೆಯನ್ನು ಗುರುತಿಸಿ ಸರ್ಕಾರ ನೆರವು ನೀಡಲು ಮುಂದಾಗಿತ್ತು. ಆದರೆ ನಂದಾ ಅವರು ಮಾತ್ರ ಸರ್ಕಾರದ ನೆರವನ್ನು ಪಡೆಯಲು ನಿರಾಕರಿಸಿದ್ದಾರೆ. ಅಲ್ಲದೆ ಹಳೆಯ ಮರದ ಕೆಳಗೆಯೇ ಕುಳಿತು ತನ್ನ ಕೆಲಸವನ್ನು ಮುಂದುವರಿಸಿದ್ದಾರೆ.
Advertisement
ಈ ಸಂಬಂಧ ಪ್ರತಿಕ್ರಿಯಿಸಿರುವ ನಂದಾ, ನಾನು ಕೃಷಿ ಭೂಮಿಯಲ್ಲಿ ಕೆಲಸ ಮಾಡುತ್ತಿದ್ದೆ. ನಮ್ಮ ಹಳ್ಳಿಯನ್ನು ಹಲವಾರು ಮಂದಿ ಅನಕ್ಷರಸ್ಥರು ಇರುವುದು ನನ್ನ ಗಮನಕ್ಕೆ ಬಂದಿದೆ. ನಮ್ಮ ಹಳ್ಳಿಯ ಜನ ಹೆಬ್ಬೆಟ್ಟು ಒತ್ತುತ್ತಾರೆಯೇ ಹೊರತು ಯಾರಿಗೂ ತಮ್ಮ ಹೆಸರಿನ ಸಹಿ ಹಾಕಲು ಬರುತ್ತಿರಲಿಲ್ಲ. ಹೀಗಾಗಿ ಒಂದು ದಿನ ಅವರನ್ನೆಲ್ಲ ಕರೆದು ಸಹಿ ಹಾಕುವುದು ಹೇಗೆ ಎಂಬುದನ್ನು ಕಲಿಸಿಕೊಟ್ಟೆ. ಈ ವೇಳೆ ಅನೇಕರು ಆಸಕ್ತಿಯಿಂದ ಬಂದು ಸಹಿ ಹಾಕುವುದನ್ನು ಕಲಿತುಕೊಂಡರು. ಅಲ್ಲದೆ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಕೆಲವರು ಭಗವದ್ಗೀತೆಯನ್ನು ಓದಲು ಪ್ರಾರಂಭಿಸಿದರು. ಸದ್ಯ ನನ್ನ ಮೊದಲ ಬ್ಯಾಚ್ ವಿದ್ಯಾರ್ಥಿಗಳ ಮೊಮ್ಮಕ್ಕಳಿಗೆ ನಾನು ಪಾಠ ಹೇಳಿಕೊಡುತ್ತಿದ್ದೇನೆ ಎಂದು ಹೇಳಿದರು.
ಇನ್ನು ಈ ಸಂಬಂಧ ಬರ್ತಂಡಾ ಪಂಚಾಯತ್ ಅಧ್ಯಕ್ಷ ಮಾತನಾಡಿ, ಕಳೆದ 75 ವರ್ಷಗಳಿಂದ ವೃದ್ಧ ನಿರಂತರವಾಗಿ ಮಕ್ಕಳಿಗೆ ಉಚಿತ ಶಿಕ್ಷಣ ನೀಡುತ್ತಾ ಬಂದಿದ್ದಾರೆ. ಶಿಕ್ಷಣ ಹೇಳಿಕೊಡುತ್ತಿರುವುದು ಇವರಿಗೆ ತುಂಬಾನೇ ಇಷ್ಟವಾಗಿದ್ದು, ಇದಕ್ಕಾಗಿ ಅವರು ಸರ್ಕಾರದಿಂದ ಯಾವುದೇ ಸಹಾಯ ಪಡೆದುಕೊಳ್ಳುತ್ತಿಲ್ಲ. ಆದರೆ ಅವರು ಮಕ್ಕಳಿಗೆ ಆರಾಮಾಗಿ ಕಲಿಸುವ ಸೌಲಭ್ಯವನ್ನು ಒದಗಿಸಲು ನಿರ್ಧರಿಸಿರುವುದಾಗಿ ತಿಳಿಸಿದ್ದಾರೆ.
ಇವರು ಮಳೆ, ಚಳಿ ಹಾಗೂ ಬಿಸಿಲು ಎನ್ನದೇ ಮಕ್ಕಳಿಗೆ ಅತ್ಯಂತ ಉತ್ಸಾಹದಿಂದ ಪಾಠ ಹೇಳಿಕೊಡುತ್ತಿದ್ದಾರೆ. ಅವರ ವೃದ್ಧಾಪ್ಯವನ್ನು ಗಮನದಲ್ಲಿಟ್ಟುಕೊಂಡು ಶಿಕ್ಷಣ ನೀಡಲು ಅವರಿಗೆ ಬೇಕಾದ ಸೌಲಭ್ಯವನ್ನು ಕಲ್ಪಿಸಿಕೊಡಲು ಗ್ರಾಮ ಪಂಚಾಯತ್ ನಿರ್ಧರಿಸಿದೆ ಎಂದು ಅವರು ತಿಳಿಸಿದ್ದಾರೆ.