LatestLeading NewsMain PostNational

74th Republic Day: ದೆಹಲಿಯ ಕರ್ತವ್ಯ ಪಥ್‌ನಲ್ಲಿ‌ ಹಲವು ಪ್ರಥಮಗಳಿಗೆ ಸಾಕ್ಷಿಯಾದ ಪರೇಡ್‌

- ದಿಲ್ಲಿ ಪಥಸಂಚಲನದಲ್ಲಿ ಗಮನ ಸೆಳೆದ ಕರ್ನಾಟಕದ ʼನಾರಿ ಶಕ್ತಿʼ ಸ್ತಬ್ದಚಿತ್ರ

– ಗಮನ ಸೆಳೆದ ಸಿಆರ್‌ಪಿಎಫ್‌ ಮಹಿಳಾ ತುಕಡಿ, ಅಗ್ನಿವೀರರು
– ಈಜಿಪ್ಟ್‌ ಸೇನಾ ತುಕಡಿ ಭಾಗಿ
– ಆಕಾಶದಲ್ಲಿ ಚಮತ್ಕಾರ ಮಾಡಿ ಯುದ್ಧ ವಿಮಾನ, ಹೆಲಿಕಾಪ್ಟರ್‌ಗಳು

ನವದೆಹಲಿ: ದೇಶಾದ್ಯಂತ 74ನೇ ಗಣರಾಜ್ಯೋತ್ಸವ (74th Republic Day) ಆಚರಣೆ ಮಾಡಲಾಗುತ್ತಿದೆ. ದೆಹಲಿಯ (New Delhi) ಬ್ರಿಟಿಷರ ಕಾಲದ ರಾಜಪಥ್‌ ಹೆಸರು ಕರ್ತವ್ಯ ಪಥ್ (Kartavya Path) ಎಂದು ಬದಲಾದ ನಂತರ ಈ ಬಾರಿ ಗಣರಾಜ್ಯೋತ್ಸವ ಹೊಸತನ ಹಾಗೂ ಹಲವು ಪ್ರಥಮಗಳಿಗೆ ಸಾಕ್ಷಿಯಾಯಿತು. ದೆಹಲಿಯ ಕರ್ತವ್ಯ ಪಥದಲ್ಲಿ ಹಲವು ವಿಶೇಷತೆಗಳೊಂದಿಗೆ ಅದ್ದೂರಿ ಪರೇಡ್ ನಡೆಯಿತು. ಕಣ್ಮಮನ ಸೆಳೆಯುವ ಟ್ಯಾಬ್ಲೊಗಳು, ಅತ್ಯಾಕರ್ಷಕ ಪಥ ಸಂಚಲನ ಎಲ್ಲರ ಗಮನ ಸೆಳೆಯಿತು.

 74th Republic Day: ದೆಹಲಿಯ ಕರ್ತವ್ಯ ಪಥ್‌ನಲ್ಲಿ‌ ಹಲವು ಪ್ರಥಮಗಳಿಗೆ ಸಾಕ್ಷಿಯಾದ ಪರೇಡ್‌

ರಾಷ್ಟ್ರಪತಿ ದ್ರೌಪದಿ ಮುರ್ಮು, ಈಜಿಪ್ಟ್‌ನಿಂದ ಬಂದಿದ್ದ ಅತಿಥಿ ಅಧ್ಯಕ್ಷ ಅಬ್ದೆಲ್ ಫತ್ತಾಹ್ ಅಲ್-ಸಿಸಿ ಪ್ರಧಾನಿ, ನರೇಂದ್ರ ಮೋದಿ ಸಮ್ಮುಖದಲ್ಲಿ ರಾಷ್ಟ್ರ ಧ್ವಜ ಹಾರಿಸುವ ಮೂಲಕ ಪರೇಡ್‌ಗೆ ಚಾಲನೆ ನೀಡಿದರು. ರಾಷ್ಟ್ರಪತಿ ದ್ರೌಪದಿ ಮುರ್ಮು ಅವರೊಂದಿಗೆ ಪ್ರಧಾನ ಮಂತ್ರಿ ನರೇಂದ್ರ ಮೋದಿ, ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌ ಪರೇಡ್‌ ವೀಕ್ಷಿಸಿದರು.

ಹಲವು ಪ್ರಥಮಗಳ ವಿಶೇಷತೆ
ಪರೇಡ್ ಹಲವು ಹೊಸತನಕ ಸಾಕ್ಷಿಯಾಗಿತ್ತು‌. ಅಗ್ನಿವೀರರು ಪಥ್ ಸಂಕಲನದಲ್ಲಿ ಭಾಗಿಯಾಗದರೆ, ಇದೇ ಮೊದಲ ಬಾರಿಗೆ ಈಜಿಪ್ಟ್ ಸೇನಾ ತುಕಡಿ ಕೂಡಾ ಭಾಗಿಯಾಗಿತ್ತು. ಗುಲಾಮಿ ಮಾನಸಿಕತೆಯಿಂದ ಹೊರ ಬರುವ ಭಾಗವಾಗಿ 25 ಪೌಂಡರ್ ಗನ್‌ಗಳ ಬದಲು ಭಾರತದಲ್ಲಿ ನಿರ್ಮಿತವಾದ 105 ಎಂಎಂ ಇಂಡಿಯನ್ ಫಿಲ್ಡ್ ಗನ್‌ಗಳಿಂದ 21 ಗನ್ ಸೆಲ್ಯೂಟ್ ನೀಡಲಾಯಿತು. ಒಟ್ನಲ್ಲಿ ಈ ಬಾರಿಯ ಪರೇಡ್ ಭಾರತದ ನಾರಿ ಶಕ್ತಿ ಮತ್ತು ಆತ್ಮ ನಿರ್ಭರ್ ಭಾರತ್ ಶಕ್ತಿ ಸಂದೇಶ ಸಾರಿದರೆ, ವಿವಿಧತೆಯಲ್ಲಿ ಏಕತೆಗೊಂಡಿರುವ ಭಾರತದ ಸಂಸ್ಕೃತಿಯನ್ನು ಅನಾವರಣಗೊಳಿಸಿತು.

ಪರೇಡ್ ಗೆ ಚಾಲನೆ ನೀಡುತ್ತಿದ್ದಂತೆ ಪರೇಡ್ ಕಮಾಂಡರ್ ಲೆಫ್ಟಿನೆಂಟ್ ಜನರಲ್ ಧೀರಜ್ ಸೇಠ್ ನೇತೃತ್ವದಲ್ಲಿ ಭವ್ಯ ಪರೇಡ್ ಆರಂಭವಾಯಿತು. 75 ಶಸ್ತ್ರಸಜ್ಜಿತ ರೆಜಿಮೆಂಟ್‌ನ ಮುಖ್ಯ ಯುದ್ಧ ಟ್ಯಾಂಕ್ ಅರ್ಜುನ್‌ನ ತುಕಡಿಯು ಪರೇಡ್ ಹಾದಿಯಲ್ಲಿ ಸಾಗಿ ಬಂತು. ಇದಾದ ಬಳಿಕ 61 ಅಶ್ವಸೈನ್ಯದ ಸಮವಸ್ತ್ರದಲ್ಲಿ ಮೊದಲ ತಂಡವನ್ನು ಕ್ಯಾಪ್ಟನ್ ರೈಜಾದಾ ಶೌರ್ಯ ಬಾಲಿ ಮುನ್ನಡೆಸಿದರು.

ಬಳಿಕ 17 ಯಾಂತ್ರೀಕೃತ ಪದಾತಿ ದಳದ NAG ಕ್ಷಿಪಣಿ ವ್ಯವಸ್ಥೆಯನ್ನು ಮುನ್ನಡೆಸಿದ ಲೆಫ್ಟಿನೆಂಟ್ ಸಿದ್ಧಾರ್ಥ ತ್ಯಾಗಿ ಅವರಿಂದ ರಾಷ್ಟ್ರಪತಿ ಮುರ್ಮು ಗೌರವ ವಂದನೆ ಸ್ವೀಕರಿಸಿದರು. ಇದಾದ ಬಳಿಕ ಹಂತ ಹಂತವಾಗಿ ಬೇರೆ ಬೇರೆ ಸೇನಾ ತುಕಡಿಗಳು ಪಥ ಸಂಚಲನ ಮಾಡಿದವು. ಲಡಾಖ್ ಸ್ಕೌಟ್ಸ್ ರೆಜಿಮೆಂಟ್‌ನ ಕ್ಯಾಪ್ಟನ್ ನವೀನ್ ಧತ್ತೇರ್ವಾಲ್ ನೇತೃತ್ವದಲ್ಲಿ ಕ್ವಿಕ್ ರಿಯಾಕ್ಷನ್ ಫೈಟಿಂಗ್ ವೆಹಿಕಲ್‌ನ ತುಕಡಿ, ಲೆಫ್ಟಿನೆಂಟ್ ಪ್ರಜ್ವಲ್ ಕಲಾ ನೇತೃತ್ವದ 861 ಮಿಸೈಲ್ ರೆಜಿಮೆಂಟ್‌ನ ಬ್ರಹ್ಮೋಸ್‌ನ ತುಕಡಿ, 27 ಏರ್ ಡಿಫೆನ್ಸ್ ಮಿಸೈಲ್ ರೆಜಿಮೆಂಟ್‌ನ ಆಕಾಶ್ ವೆಪನ್ ಸಿಸ್ಟಮ್, ಕ್ಯಾಪ್ಟನ್ ಸುನಿಲ್ ದಶರಥೆ ನೇತೃತ್ವದ ‘ಅಮೃತಸರ ಏರ್‌ಫೀಲ್ಡ್’ ಮತ್ತು 512 ಲೈಟ್ ಎಡಿ ಮಿಸೈಲ್ ರೆಜಿಮೆಂಟ್, ಭಾರತೀಯ ನೌಕಾಪಡೆಯ 80 ಸಂಗೀತಗಾರರನ್ನು ಒಳಗೊಂಡಿರುವ ಭಾರತೀಯ ನೌಕಾಪಡೆಯ ಬ್ರಾಸ್ ಬ್ಯಾಂಡ್ ಕರ್ತವ್ಯ ಪಥ್ ನಲ್ಲಿ ಪರೇಡ್‌ ನಡೆಸಿದವು.

ಕಣ್ಮಮನ ಸೆಳೆದ ಟ್ಯಾಬ್ಲೊಗಳು
ಈ ಬಾರಿಯ ಪರೇಡ್‌ನಲ್ಲಿ 17 ರಾಜ್ಯದ ಹಾಗೂ ಕೇಂದ್ರ ಸರ್ಕಾರದ ವಿವಿಧ ಇಲಾಖೆ ಮತ್ತು ಸಚಿವಾಲಯದ ಆರು ಟ್ಯಾಬ್ಲೊಗಳು ಸೇರಿ ಒಟ್ಟು 23 ಟ್ಯಾಬ್ಲೊಗಳು ಭಾಗಿಯಾಗಿದ್ದವು. ಜಾರ್ಖಂಡ್‌ನ ಟ್ಯಾಬ್ಲೊ ದಿಯೋಘರ್‌ನಲ್ಲಿರುವ ಪ್ರಸಿದ್ಧ ಬೈದ್ಯನಾಥ ದೇವಾಲಯ, ಗುಜರಾತ್ ʼಸ್ವಚ್ಛ-ಹಸಿರು ಶಕ್ತಿ ಸಮರ್ಥ’ ಎಂಬ ಸಂದೇಶ ಮೇಲೆ ನವೀಕರಿಸಬಹುದಾದ ಇಂಧನದ ಬಗ್ಗೆ, ಕೇರಳವು ‘ನಾರಿ ಶಕ್ತಿ’ ಮತ್ತು ಮಹಿಳಾ ಸಬಲೀಕರಣದ ಜಾನಪದ ಸಂಪ್ರದಾಯಗಳ ಟ್ಯಾಬ್ಲೊವನ್ನು ಪ್ರದರ್ಶಿಸಿದವು.

ಪಶ್ಚಿಮ ಬಂಗಾಳದ ದುರ್ಗಾ ಪೂಜಾ, ಮಹಾರಾಷ್ಟ್ರದ ಶಕ್ತಿ ಪೀಠಗಳ ಮತ್ತು ತಮಿಳುನಾಡಿನ ಟ್ಯಾಬ್ಲೋ ಜನ ಮೆಚ್ಚುಗೆ ಪಾತ್ರವಾದರೆ, ಅಯೋಧ್ಯೆಯಲ್ಲಿ ಆಚರಿಸಲಾದ ಮೂರು ದಿನಗಳ ದೀಪೋತ್ಸವವನ್ನು ಉತ್ತರ ಪ್ರದೇಶ ಸರ್ಕಾರ ಈ ಬಾರಿ ಪ್ರದರ್ಶಿಸಿತು‌.

ಕರ್ತವ್ಯ ಪಥ್‌ನಲ್ಲಿ ಕರ್ನಾಟಕದ ನಾರಿಶಕ್ತಿ
ಟ್ಯಾಬ್ಲೊಗಳ ಸರಣಿಯಲ್ಲಿ ಕರ್ನಾಟಕವೂ ಈ ಬಾರಿ ತನ್ನ ಟ್ಯಾಬ್ಲೊವನ್ನು ಪ್ರದರ್ಶಿಸಿತು. ಈ ಬಾರಿ ಕರ್ನಾಟಕ ನಾರಿ ಶಕ್ತಿ ಪರಿಕಲ್ಪನೆಯಲ್ಲಿ ಟ್ಯಾಬ್ಲೊ ಪ್ರದರ್ಶಿಸಿದ್ದು, ಟ್ಯಾಬ್ಲೊದಲ್ಲಿ 2,000 ಅಧಿಕ ಹೆರಿಗೆ ಮಾಡಿಸಿದ್ದ ಸೂಲಗಿತ್ತಿ ನರಸಮ್ಮ, 30,000ಕ್ಕೂ ಅಧಿಕ ಸಸಿಗಳನ್ನು ನೆಟ್ಟ ಹಾಲಕ್ಕಿ ತುಳಸಿ ಗೌಡ ಮತ್ತು 8,000 ಮರಗಳನ್ನು ಪೋಷಿಸಿದ ಸಾಲುಮರದ ತಿಮ್ಮಕ್ಕ ಅವರ ಸಾಧನೆಯನ್ನು ಒಳಗೊಂಡಿತ್ತು. ರಾಜ್ಯದ ಟ್ಯಾಬ್ಲೊ ಜೊತೆಗೆ ಉತ್ತರ ಕನ್ನಡದ ಹಾಲಕ್ಕಿ ಸುಗ್ಗಿ ಕುಣಿತ ಕಲಾವಿದರು ಹೆಜ್ಜೆ ಹಾಕಿದರು.

ಟ್ಯಾಬ್ಲೊಗಳ ಪ್ರದರ್ಶನದ ಬಳಿಕ ಆಕಾಶದಲ್ಲಿ ಯುದ್ದ ವಿಮಾನಗಳು ಮತ್ತು ಹೆಲಿಕಾಪ್ಟರ್‌ಗಳು ಭಾರತದ ಶಕ್ತಿಯನ್ನು ವಿಶ್ವಕ್ಕೆ ತೋರಿದವು. ರಫೇಲ್ ಕಸರತ್ತು ಎಲ್ಲರ ಆಕರ್ಷಣೆಯ ಕೇಂದ್ರವಾಗಿತ್ತು. ಮೇಡ್ ಇನ್ ಇಂಡಿಯಾದ ಲಘು ಯುದ್ದ ವಿಮಾನ ಮತ್ತು ಹೆಲಿಕಾಪ್ಟರ್‌ಗಳು ಪ್ರದರ್ಶನ ನೀಡಿದವು.

Live Tv

Join our Whatsapp group by clicking the below link
https://chat.whatsapp.com/E6YVEDajTzH06LOh77r25k

Leave a Reply

Your email address will not be published. Required fields are marked *

Back to top button