– 24 ಗಂಟೆಗಳಲ್ಲಿ ದೇಶದಲ್ಲಿ 40 ಮಂದಿ ಸಾವು
– ಸೋಂಕಿತರ ಸಂಖ್ಯೆ 7,447ಕ್ಕೆ ಏರಿಕೆ
ನವದೆಹಲಿ: ವಿಶ್ವವ್ಯಾಪಿ ತಲ್ಲಣ ಮೂಡಿಸಿರುವ ಮಹಾಮಾರಿ ಕೊರೊನಾ ವೈರಸ್‍ಗೆ ಈವರೆಗೆ ಜಗತ್ತಿನಾದ್ಯಂತ ಬರೋಬ್ಬರಿ 1 ಲಕ್ಷಕ್ಕೂ ಅಧಿಕ ಮಂದಿ ಬಲಿಯಾಗಿದ್ದಾರೆ. ಇತ್ತ ಭಾರತದಲ್ಲಿ ಕಳೆದ 24 ಗಂಟೆಗಳಲ್ಲಿ 1,035 ಹೊಸ ಪ್ರಕರಣಗಳು ವರದಿಯಾಗಿದ್ದು, 40 ಮಂದಿ ಕೊರೊನಾ ಸೋಂಕಿನಿಂದ ಸಾವನ್ನಪ್ಪಿದ್ದಾರೆ.
ಶನಿವಾರ ಬೆಳಗ್ಗಿನವರೆಗಿನ ವರದಿ ಪ್ರಕಾರ, ಭಾರತದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 7,447ಕ್ಕೇರಿದ್ದು, 643 ಮಂದಿ ಗುಣಮುಖರಾಗಿದ್ದಾರೆ. ಈವರೆಗೆ 239 ಮಂದಿ ಮೃತಪಟ್ಟಿದ್ದು, 6,565 ಮಂದಿ ಸೋಕಿನಿಂದ ಬಳಲುತ್ತಿದ್ದಾರೆ ಎಂದು ಆರೋಗ್ಯ ಸಚಿವಾಲಯದ ತಿಳಿಸಿದೆ.
ಭಾರತದಲ್ಲಿ ಸೋಂಕು ಹರಡಿರುವ ರಾಜ್ಯಗಳ ಪಟ್ಟಿಯಲ್ಲಿ ಮಹಾರಾಷ್ಟ್ರ ಮೊದಲ ಸ್ಥಾನದಲ್ಲಿದೆ. ಇಲ್ಲಿ 110 ಮಂದಿ ಸೋಂಕಿತರು ಸಾವನ್ನಪ್ಪಿದ್ದಾರೆ. ಸೋಂಕಿತರ ಸಂಖ್ಯೆ 1,574 ಏರಿದ್ದು, 188 ಮಂದಿ ಗುಣಮುಖರಾಗಿದ್ದಾರೆ. ಎರಡನೇ ಸ್ಥಾನದಲ್ಲಿರುವ ತಮಿಳು ನಾಡಿನಲ್ಲಿ 911 ಸೋಂಕಿತರಿದ್ದು, ದೆಹಲಿಯಲ್ಲಿ 903 ಮಂದಿ ಸೋಂಕಿತ ರೋಗಿಗಳಲ್ಲಿ 25 ಮಂದಿ ಗುಣಮುಖರಾಗಿ 13 ಮಂದಿ ಮಹಾಮಾರಿಗೆ ಬಲಿಯಾಗಿದ್ದಾರೆ.
ಇತ್ತ ರಾಜಸ್ತಾನದಲ್ಲಿ 553, ತೆಲಂಗಾಣದಲ್ಲಿ 473, ಛತ್ತೀಸ್‍ಗಢ 18, ಚಂಡೀಗಢದಲ್ಲಿ 19, ಉತ್ತರ ಪ್ರದೇಶ 431, ಹರ್ಯಾಣದಲ್ಲಿ 177 ಸೋಂಕಿತರಿದ್ದಾರೆ. ಮೊದಲ ಬಾರಿಗೆ ಸೋಂಕು ಕಾಣಿಸಿಕೊಂಡಿದ್ದ ಕೇರಳದಲ್ಲಿ ಈಗ 364 ಮಂದಿ ಸೋಂಕಿತರಿದ್ದು, ಲಡಾಕ್‍ನಲ್ಲಿ 15, ಜಮ್ಮು-ಕಾಶ್ಮೀರದಲ್ಲಿ 207 ಸೋಂಕಿತ ಪ್ರಕರಣಗಳು ವರದಿಯಾಗಿವೆ. ಬಿಹಾರದಲ್ಲಿ ಸೋಂಕಿತ 60 ರೋಗಿಗಳಲ್ಲಿ 23 ಮಂದಿ ಒಂದೇ ಕುಟುಂಬಕ್ಕೆ ಸೇರಿದವರಾಗಿದ್ದಾರೆ.
ವಿಶ್ವಾದ್ಯಂತ ಬರೋಬ್ಬರಿ 17,00,951 ಮಂದಿಗೆ ಕೊರೊನಾ ತಗುಲಿದ್ದು, ಈವರೆಗೆ 1,02,789 ಮಂದಿ ಸಾವನ್ನಪ್ಪಿದ್ದಾರೆ, ಅಲ್ಲದೆ 3,76,796 ಮಂದಿ ಸೋಂಕಿನಿಂದ ಗುಣಮುಖರಾಗಿದ್ದಾರೆ ಎಂದು ವರದಿಯಾಗಿದೆ.