ಹೈದರಾಬಾದ್: ಆಂಧ್ರಪ್ರದೇಶದ ಗುಂಟೂರು ನಗರದಲ್ಲಿ 74 ವರ್ಷದ ವೃದ್ಧೆಯೊಬ್ಬರು ಅವಳಿ ಹೆಣ್ಣು ಮಕ್ಕಳಿಗೆ ಜನ್ಮ ನೀಡಿ ದಾಖಲೆ ನಿರ್ಮಿಸಿದ್ದಾರೆ. ಇಳಿ ವಯಸ್ಸಿನಲ್ಲಿ 2 ಮಕ್ಕಳಿಗೆ ಜನ್ಮನೀಡಿ ತಾವು ತಾಯಿಯಾಗುವ ಬಯಕೆಯನ್ನು ತೀರಿಸಿಕೊಂಡಿದ್ದಾರೆ.
ಹೌದು, ಈ ವಯಸ್ಸಿನಲ್ಲೂ ಮಗುವಿಗೆ ಜನ್ಮ ನೀಡೋದಾ ಎಂದು ಅಚ್ಚರಿಯಾಗಬಹುದು. ಆದರೂ ಇದು ಸತ್ಯ. ಆಂಧ್ರಪ್ರದೇಶದ ಪೂರ್ವ ಗೋದಾವರಿ ಜಿಲ್ಲೆಯ ನೆಲ್ಲಪಾರ್ತಿಪಾಡು ಗ್ರಾಮದ ನಿವಾಸಿ ಎರ್ರಮಟ್ಟಿ ಮಂಗಯಮ್ಮ(74) ಅವರು ಅವಳಿ ಮಕ್ಕಳಿಗೆ ಜನ್ಮ ನೀಡಿದ್ದಾರೆ. ಎರ್ರಾಮಟಿ ರಾಜ ರಾವ್(80) ಹಾಗೂ ಮಂಗಯಮ್ಮ ಅವರು ಮಾರ್ಚ್ 22, 1962 ರಂದು ಮದುವೆಯಾಗಿದ್ದರು. ಆದರೆ ರಾಜ ರಾವ್ ಮತ್ತು ಮಂಗಯಮ್ಮ ದಂಪತಿಗೆ ಮಕ್ಕಳಿರಲಿಲ್ಲ. ಬಹುವರ್ಷದಿಂದ ಮಕ್ಕಳನ್ನು ಪಡೆಯುವ ಆಸೆ ಹೊತ್ತಿದ್ದ ದಂಪತಿಯ ಕನಸು ಈಗ ನನಸಾಗಿದೆ. ಈ ಮೂಲಕ ಮಂಗಯಮ್ಮ ಹೊಸ ದಾಖಲೆ ಬರೆದಿದ್ದಾರೆ.
Advertisement
Advertisement
ಸುಮಾರು 30 ದಶಕಗಳಿಂದ ಮಕ್ಕಳು ಪಡೆಯಲು ದಂಪತಿ ಸಾಕಷ್ಟು ವೈದ್ಯರ ಮೊರೆಹೋಗುತ್ತಲೇ ಇದ್ದರು. ಆದರೆ 2018ರ ನವೆಂಬರ್ ತಿಂಗಳಲ್ಲಿ ಅವರು ಗುಂಟೂರಿನ ಅಹಲ್ಯಾ ನರ್ಸಿಂಗ್ ಹೋಂಗೆ ತಮ್ಮ ಸಮಸ್ಯೆಗೆ ಪರಿಹಾರ ಪಡೆಯಲು ಹೋಗಿದ್ದರು. ಅಲ್ಲಿ ಡಾ. ಶಾನಕ್ಯಾಲ ಉಮಾಶಂಕರ್ ಅವರು ದಂಪತಿಯ ಸಮಸ್ಯೆಗೆ ಪರಿಹಾರ ನೀಡುವುದಾಗಿ ಭರವಸೆ ನೀಡಿದರು. ಈ ಸವಾಲಿನ ಪ್ರಕರಣವನ್ನು ತಮ್ಮ ಕೈಗೆ ತೆಗೆದುಕೊಂಡು ಯಶಸ್ವಿಯಾಗಿದ್ದಾರೆ.
Advertisement
ಈ ಬಗ್ಗೆ ಮಾತನಾಡಿದ ಡಾ. ಶಾನಕ್ಯಾಲ ಉಮಾಶಂಕರ್ ಅವರು, ಮಂಗಯಮ್ಮ ಅವರಿಗೆ ಬಿಪಿ, ಸಕ್ಕರೆ ಕಾಯಿಲೆ ಅಥವಾ ಯಾವುದೇ ಆರೋಗ್ಯದ ತೊಂದರೆ ಇಲ್ಲ. ಅವರ ಆನುವಂಶಿಕ ರೇಖೆಯು ತುಂಬಾ ಉತ್ತಮವಾಗಿದೆ. ಈ ಹಿನ್ನೆಲೆಯಲ್ಲಿ ಹೃದ್ರೋಗ ತಜ್ಞರು, ಶ್ವಾಸಕೋಶಶಾಸ್ತ್ರಜ್ಞರು ಸೇರಿದಂತೆ ಇತರೆ ವಿಶೇಷ ವೈದ್ಯರೊಂದಿಗೆ ಚರ್ಚಿಸಿದ ಬಳಿಕ ಮಂಗಮ್ಮ ಅವರಿಗೆ ಎಲ್ಲಾ ರೀತಿಯ ಪರೀಕ್ಷೆ ನಡೆಸಿ, ನಂತರ ನಾವು ಅವರ ಸಮಸ್ಯೆಯನ್ನು ಬಗೆಹರಿಸಲು ನಿರ್ಧರಿಸಿದೆವು. ಬಹಳ ವರ್ಷಗಳ ಹಿಂದೆಯೇ ಅವರು ಋತುಬಂಧದ ಹಂತವನ್ನು ತಲುಪಿದ್ದರು. ಆದರೆ ಐವಿಎಫ್(ವಿಟ್ರೊ ಫಲೀಕರಣ ಅಥವಾ ವಿಟ್ರೋ ಫರ್ಟಿಲೈಸೇಷನ್) ಮೂಲಕ ನಾವು ಕೇವಲ ಒಂದು ತಿಂಗಳಲ್ಲಿ ಅವರು ಮತ್ತೆ ಋತುಮತಿಯಾಗುವಂತೆ ಚಿಕಿತ್ಸೆ ಕೊಟ್ಟೆವು ಎಂದು ತಿಳಿಸಿದರು.
Advertisement
ನಂತರ ಐವಿಎಫ್ ವಿಧಾನದಿಂದ ಮಂಗಯಮ್ಮ ಅವರು ಗರ್ಭ ಧರಿಸುವಂತೆ ಚಿಕಿತ್ಸೆ ನೀಡಲಾಯಿತು. ಬಳಿಕ ಅವರನ್ನು ಜಾಗೃತೆಯಿಂದ ನೋಡಿಕೊಳ್ಳುವುದು ಅವಶ್ಯವಾಗಿದ್ದ ಕಾರಣಕ್ಕೆ ದಂಪತಿಯನ್ನು ಆಸ್ಪತ್ರೆಯಲ್ಲಿಯೇ ಉಳಿಯಲು ಸೂಚಿಸಿದೆವು. ಮಂಗಯಮ್ಮ ಅವರಿಗೆ ಅಗತ್ಯ ಪೋಷ್ಠಿಕಾಂಶ, ಆರೈಕೆ, ಚಿಕಿತ್ಸೆ ನೀಡಿ ಆಸ್ಪತ್ರೆಯಲ್ಲಿಯೇ ನೋಡಿಕೊಳ್ಳಲಾಗುತ್ತಿತ್ತು. ಅವರ ವಯಸ್ಸಿಗೆ ನಾರ್ಮಲ್ ಡೆಲಿವರಿ ಆಗುವುದು ಕಷ್ಟದ ವಿಚಾರವಾಗಿದ್ದ ಕಾರಣಕ್ಕೆ ಸಿಸೇರಿಯನ್ ಮಾಡಬೇಕಾಯಿತು. ಸದ್ಯ ತಾಯಿ, ಮಕ್ಕಳು ಆರೋಗ್ಯವಾಗಿದ್ದಾರೆ ಎಂದು ವೈದ್ಯರು ಮಾಹಿತಿ ನೀಡಿದ್ದಾರೆ.
ತಾಯಿಯಾದ ಖುಷಿಯನ್ನು ಮಂಗಯಮ್ಮ ಅವರು ಹಂಚಿಕೊಂಡು, ನಾವು ಮಕ್ಕಳಿಲ್ಲದೆ ಕೊನೆಯುಸಿರು ಎಳೆಯುತ್ತೇವೆ ಎಂದು ಅಂದುಕೊಂಡಿದ್ದೆ. ಆದರೆ ನಮ್ಮ ಮನೆಯ ಪಕ್ಕದಲ್ಲಿದ್ದ ಮಹಿಳೆಯೊಬ್ಬರು 55ರ ವಯಸ್ಸಿನಲ್ಲಿ ತಾಯಿಯಾಗಿದ್ದರು. ಅವರು ಐವಿಎಫ್ ತಂತ್ರಜ್ಞಾನದ ಮೂಲಕ ಮಕ್ಕಳು ಪಡೆಯುವ ವಯಸ್ಸು ಮೀರಿದ್ದರೂ ಮಕ್ಕಳು ಪಡೆಯಬಹುದು ಎಂದು ಹೇಳಿದ್ದರು. ಆಗ ನಾನು ಪತಿಗೆ ಈ ಬಗ್ಗೆ ತಿಳಿಸಿದೆ, ಅವರೂ ಕೂಡ ಇದಕ್ಕೆ ಒಪ್ಪಿಕೊಂಡರು. ನಾನು ಈಗ ಬಹಳ ಖುಷಿಯಾಗಿದ್ದೇನೆ ಎಂದು ಸಂತೋಷ ವ್ಯಕ್ತಪಡಿಸಿದರು.
ಇತ್ತೀಚೆಗೆ ರಾಜಸ್ತಾನ ಮೂಲದ ದಲ್ಜಿಂಧರ್ ಕೌರ್ ಅವರು ತಮ್ಮ 70ರ ವಯಸ್ಸಿನಲ್ಲಿ ತಾಯಿಯಾಗಿ ದಾಖಲೆ ಬರೆದಿದ್ದರು. ಈ ದಾಖಲೆಯನ್ನು ಮಂಗಯಮ್ಮ ಅವರು ಮುರಿದು, ಹೊಸ ದಾಖಲೆ ಸೃಷ್ಟಿಸಿದ್ದಾರೆ.