ನವದೆಹಲಿ: ಯುಯು ಲಲಿತ್ (UU Lalit) ಅವರು ಸುಪ್ರೀಂ ಕೋರ್ಟ್‍ನ ಮುಖ್ಯ ನ್ಯಾಯಮೂರ್ತಿ ಆಗಿದ್ದ ಸಂದರ್ಭದಲ್ಲಿ ಅಕ್ಬರ್ ರಸ್ತೆಯಲ್ಲಿರುವ ತಮ್ಮ ಅಧಿಕೃತ ನಿವಾಸದಲ್ಲಿ 40ಕ್ಕೂ ಅಧಿಕ ಕೆಲಸಗಾರರನ್ನು (Staff) ಹೊಂದಿದ್ದ ವಿಷಯ ಚರ್ಚೆಗೆ ಗ್ರಾಸವಾಗಿದೆ.
ಆ. 27ರಿಂದ ನ. 8ರವರೆಗೆ 49ನೇ ಸಿಜೆಐ ಆಗಿ ನ್ಯಾಯಮೂರ್ತಿ ಲಲಿತ್ ಅವರು ತಮ್ಮ ಅಧಿಕಾರವನ್ನು ವಹಿಸಿಕೊಂಡಿದ್ದರು. ಈ ಸಂದರ್ಭದಲ್ಲಿ ಅವರು ತಮ್ಮ ಮನೆ ಮತ್ತು ಕಚೇರಿಯಲ್ಲಿ ಕಾರ್ಯನಿರ್ವಹಿಸಲು ಗುಮಾಸ್ತ ಸೇರಿದಂತೆ ಸುಮಾರು 40ಕ್ಕೂ ಅಧಿಕ ಸಹಾಯಕ ಸಿಬ್ಬಂದಿಯನ್ನು ಹೊಂದಿದ್ದರು. ಅದಾದ ಬಳಿಕ ಕಳೆದ ತಿಂಗಳು ನಿವೃತ್ತಿ ಹೊಂದಿದ ಬಳಿಕ ಕೆಲವು ಸಿಬ್ಬಂದಿಯನ್ನು ತೆಗೆದು ಹಾಕಿ 28 ಸಹಾಯಕ ಸಿಬ್ಬಂದಿಯನ್ನು ತಮ್ಮ ಅಧಿಕೃತ ನಿವಾಸದಲ್ಲಿ ಕೆಲಸಕ್ಕೆ ಇಟ್ಟುಕೊಂಡಿದ್ದಾರೆ. ಈ ಮೂಲಕ ಹಿಂದಿನ ಸಿಜೆಐಗಿಂತ ಅಧಿಕ ಕೆಲಸಗಾರರನ್ನು ಹೊಂದಿದ್ದಾರೆ ಎಂದು ಮಾಧ್ಯಮವೊಂದು ವರದಿ ಮಾಡಿದೆ.
ಸಾಮಾನ್ಯವಾಗಿ ಲಲಿತ್ ಅವರ ಮೊದಲಿನ ಸಿಜೆಐಗಳು 12-15 ಸಹಾಯಕ ಸಿಬ್ಬಂದಿಯನ್ನು ಹೊಂದಿದ್ದರು. ಅವರೆಲ್ಲರೂ ನಿವೃತ್ತಿಯ ನಂತರ ಕೇವಲ ಇಬ್ಬರು ಅಥವಾ ಮೂವರು ಸಹಾಯಕ ಸಿಬ್ಬಂದಿಯನ್ನು ಉಳಿಸಿಕೊಳ್ಳುತ್ತಿದ್ದರು. ಕೆಲವು ನಿವೃತ್ತ ಸಿಜೆಐ ದೆಹಲಿಯಲ್ಲಿ ಉಳಿದುಕೊಂಡಿದ್ದರೆ ಅಥವಾ ಅವರು ತಮ್ಮ ತವರು ರಾಜ್ಯಕ್ಕೆ ಮರಳಲು ನಿರ್ಧರಿಸುತ್ತಾರೆ. ಈ ವೇಳೆ ಸಂಬಂಧಪಟ್ಟ ಎಚ್‍ಸಿಗಳು ಈ ಸಹಾಯಕ ಸಿಬ್ಬಂದಿಯನ್ನು ಅಲ್ಲಿಗೆ ಒದಗಿಸಿದ್ದಾರೆ ಎಂಬುದನ್ನು ಮೂಲಗಳು ತಿಳಿಸಿವೆ.
ಅಷ್ಟೇ ಅಲ್ಲದೇ ರಾಷ್ಟ್ರಪತಿ ಭವನದಲ್ಲಿ ಅಥವಾ ಪ್ರಧಾನ ಮಂತ್ರಿ ಕಚೇರಿಯಲ್ಲಿ ನಿರತರಾಗಿರುವ ಸಹಾಯಕ ಸಿಬ್ಬಂದಿಯ ಸಂಖ್ಯೆಯನ್ನು ಹೊರತುಪಡಿಸಿದರೆ, ಯಾವುದೇ ಸಾಂವಿಧಾನಿಕ ಹುದ್ದೆ ಹೊಂದಿರುವವರು ತಮ್ಮ ನಿವಾಸಗಳಲ್ಲಿ ಇಷ್ಟು ಸಂಖ್ಯೆಯ ಸಹಾಯಕ ಸಿಬ್ಬಂದಿಯನ್ನು ಹೊಂದಿರುವುದಿಲ್ಲ. ಇದನ್ನೂ ಓದಿ: ನಿಂತಿದ್ದ ವೇಳೆ ಆಕಸ್ಮಿಕ ಬೆಂಕಿ- ಮೂರು ಬಸ್‍ಗಳು ಬೆಂಕಿಗಾಹುತಿ
ಆಗಸ್ಟ್‍ನಲ್ಲಿ ಕೇಂದ್ರ ಸರ್ಕಾರವು 1959ರ ಸುಪ್ರೀಂ ಕೋರ್ಟ್ ನ್ಯಾಯಾಧೀಶರ ನಿಯಮಗಳನ್ನು ತಿದ್ದುಪಡಿ ಮಾಡಿತ್ತು. ಈ ವೇಳೆ ನಿವೃತ್ತ ಸಿಜೆಐಗಳಿಗೆ 6 ತಿಂಗಳ ಕಾಲ ಬಾಡಿಗೆ ಮುಕ್ತ ವಸತಿ ಒದಗಿಸಲು ನಿರ್ಧರಿಸಿದೆ. ಈ ಹಿನ್ನೆಲೆಯಲ್ಲಿ ನ್ಯಾಯಮೂರ್ತಿ ಲಲಿತ್ ಅವರಿಗೆ ಶಹಜಹಾನ್ ರಸ್ತೆಯಲ್ಲಿ ಬಂಗಲೆಯನ್ನು ನೀಡಲಾಗಿತ್ತು. ಆದರೆ ನ್ಯಾಯಮೂರ್ತಿ ಲಲಿತ್ ಅವರು ಕಟ್ಟಡವು ಕೆಟ್ಟ ಸ್ಥಿತಿಯಲ್ಲಿದೆ ಎಂದು ಹೇಳಿ ಪ್ರಸ್ತಾಪವನ್ನು ತಿರಸ್ಕರಿಸಿದರು. ಇದನ್ನೂ ಓದಿ: ಪ್ರಧಾನಿ ಸಹೋದರ ಪ್ರಹ್ಲಾದ್ ಮೋದಿ ಸಂಚರಿಸುತ್ತಿದ್ದ ಕಾರು ಅಪಘಾತ