ಜೈಪುರ್: ಕೊರೊನಾ ರೂಪಾಂತರಿ ಓಮಿಕ್ರಾನ್ ಸೋಂಕಿಗೆ ಒಳಗಾಗಿ ಚಿಕಿತ್ಸೆ ಪಡೆದು ಗುಣಮುಖನಾಗಿ ಡಿಸ್ಚಾರ್ಜ್ ಆಗಿದ್ದ ವೃದ್ಧ ಸಾವಿಗೀಡಾಗಿರುವ ಘಟನೆ ರಾಜಸ್ಥಾನದ ಉದಯಪುರ್‌ನಲ್ಲಿ ನಡೆದಿದೆ.
73 ವರ್ಷ ವಯಸ್ಸಿನ ವೃದ್ಧ ಓಮಿಕ್ರಾನ್ ಸೋಂಕಿಗೆ ಒಳಗಾಗಿದ್ದರು. ಉದಯಪುರ್‌ನ ಎಂಬಿಜಿಹೆಚ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದರು. ಇದನ್ನೂ ಓದಿ: ಮಹಿಳೆಗೆ ಕೊರೊನಾ – ಚಲಿಸುತ್ತಿದ್ದ ವಿಮಾನದ ಟಾಯ್ಲೆಟ್‌ನಲ್ಲೇ 3 ಗಂಟೆ ಕ್ವಾರಂಟೈನ್
ಈ ಕುರಿತು ಪ್ರತಿಕ್ರಿಯಿಸಿರುವ ಆಸ್ಪತ್ರೆಯ ವೈದ್ಯ ಸುಮನ್, ಡಿ.15ರಂದು ಕೋವಿಡ್‌ನಿಂದಾಗಿ ವೃದ್ಧ ಆಸ್ಪತ್ರೆಗೆ ದಾಖಲಾಗಿದ್ದರು. ನಂತರ ಡಿ.21ರಂದು ಪರೀಕ್ಷೆಗೆ ಒಳಪಡಿಸಿದಾಗ ನೆಗೆಟಿವ್ ಬಂದಿತು. ಮತ್ತೆ ಡಿ.25ರಂದು ಅವರ ಮಾದರಿಯನ್ನು ಜೀನೋಮ್ ಸೀಕ್ವೆನ್ಸಿಂಗ್ ಕಳುಹಿಸಿದ್ದಾಗ ವರದಿಯಲ್ಲಿ ಓಮಿಕ್ರಾನ್ ದೃಢಪಟ್ಟಿತ್ತು.
ಕೋವಿಡ್ ಲಸಿಕೆಯ ಎರಡು ಡೋಸ್ ಅನ್ನು ಅವರು ಪಡೆದುಕೊಂಡಿದ್ದರು. ಆದರೆ ಅವರು ಮಧುಮೇಹ ಮೆಲ್ಲಿಟಸ್, ಅಧಿಕ ರಕ್ತದೊತ್ತಡ, ಹೈಪೋಥೈರಾಯ್ಡಿಸಮ್ ಕಾಯಿಲೆಗಳಿಂದ ಬಳಲುತ್ತಿದ್ದರು. ಓಮಿಕ್ರಾನ್‌ನಿಂದ ಗುಣಮುಖರಾಗಿದ್ದರೂ ಅವರ ಆರೋಗ್ಯ ಸ್ಥಿತಿ ಗಂಭೀರವಾಗಿತ್ತು. ಆಮ್ಲಜನಕ ಪ್ರಮಾಣವೂ ಕಡಿಮೆಯಾಗಿದ್ದರಿಂದ ಅವರು ಮೃತಪಟ್ಟರು ಎಂದು ವೈದ್ಯರು ಸ್ಪಷ್ಟಪಡಿಸಿದ್ದಾರೆ. ಇದನ್ನೂ ಓದಿ: ವಿದೇಶದಿಂದ ಬೆಂಗಳೂರಿಗೆ ಬಂದ 9 ಮಂದಿಗೆ ಕೊರೊನಾ