72 ವರ್ಷಗಳ ನಂತರ ಮೊದಲ ಬಾರಿಗೆ ಭಾರತೀಯ ದಂಪತಿಯಿಂದ ಪಿಓಕೆಯ ಶಾರದೆಗೆ ಪೂಜೆ

Public TV
2 Min Read
sharada pakistan web

ನವದೆಹಲಿ: ಭಾರತೀಯ ಮೂಲದ ಹಾಂಕಾಂಗ್ ಹಿಂದೂ ದಂಪತಿ ಪಾಕಿಸ್ತಾನ ಆಕ್ರಮಿತ ಕಾಶ್ಮೀರ(ಪಿಓಕೆ)ದ ಶಾರದಾ ಪೀಠದ ದೇಗುಲದಲ್ಲಿ ಪೂಜೆ ನೆರವೇರಿಸಿದ್ದಾರೆ. ಈ ಮೂಲಕ ಕಳೆದ 72 ವರ್ಷಗಳಿಂದ ಪ್ರಥಮ ಬಾರಿಗೆ ಪಿಓಕೆಯಲ್ಲಿನ ಶಾರದೆಯನ್ನು ಪೂಜಿಸಿದ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ಪಿ.ವಿ.ವೆಂಕಟರಮಣ ಮತ್ತು ಅವರ ಪತ್ನಿ ಸುಜಾತಾ ಸೇವ್ ಶಾರದಾ ಸಮಿತಿ ಹಾಗೂ ಪಿಓಕೆಯಲ್ಲಿನ ನಾಗರಿಕ ಸದಸ್ಯರ ಸಮಾಜದ ಸಂಘಟಿತ ಪ್ರಯತ್ನಗಳ ಮೂಲಕ ಅಧಿಕೃತ ವೀಸಾದೊಂದಿಗೆ ಪಿಓಕೆಯಲ್ಲಿನ ಶಾರದಾ ಪೀಠಕ್ಕೆ ತೆರಳಿ ಶಾರದಾ ದೇವಿ ಹಾಗೂ ಸ್ವಾಮಿ ಲಾಲ್ ಜಿ ಅವರಿಗೆ ಪೂಜೆ ಸಲ್ಲಿಸಿದ್ದಾರೆ.

ವರದಿಗಳ ಪ್ರಕಾರ ದಂಪತಿಗಳ ಭೇಟಿಯ ಸಮಯದಲ್ಲಿ ಜಮ್ಮು ಕಾಶ್ಮೀರದ ವಿಶೇಷ ಸ್ಥಾನಮಾನವನ್ನು ಪಡಿಸಿರುವ ಭಾರತದ ಕ್ರಮವನ್ನು ವಿರೋಧಿಸಿ ಪಿಓಕೆಯಲ್ಲಿ ಕಳೆದ ಮೂರು ದಿನಗಳಿಂದ ಗಡಿ ನಿಯಂತ್ರಣ ರೇಖೆ ಬಳಿ ಪ್ರತಿಭಟನೆ ನಡೆಸುತ್ತಿದ್ದರು. ಹೀಗಾಗಿ ದಂಪತಿಗಳಿಗೆ ರಕ್ಷಣೆ ಕೊಡುವಂತೆ ಭಾರತೀಯ ಅಧಿಕಾರಿಗಳು ಪಿಓಕೆಯ ನಾಗರಿಕ ಸಮಾಜದ ಸದಸ್ಯರಿಗೆ ಮನವಿ ಮಾಡಿದ್ದರು.

ಶಾಂತಿಯುತವಾಗಿ ಪೂಜೆಯನ್ನು ನೆರವೇರಿಸಿದ ನಂತರ ದಂಪತಿ ದೇವತೆ ಮತ್ತು ಸ್ವಾಮಿ ನಂದ ಲಾಲ್ ಅವರ ಫೋಟೋಗಳನ್ನು ನಾಗರಿಕ ಸಮಾಜದ ಸದಸ್ಯರಿಗೆ ಹಸ್ತಾಂತರಿಸಿದರು. ಪ್ರಸ್ತುತ ಭಾರತ ಮತ್ತು ಪಾಕಿಸ್ತಾನದ ನಡುವೆ ನಡೆಯುತ್ತಿರುವ ಗಡಿಯಾಚೆಗಿನ ಉದ್ವಿಗ್ನತೆ ತಣ್ಣಗಾದ ನಂತರ ಇಲ್ಲಿ ದೇವಾಲಯ ಸ್ಥಾಪಿಸಬಹುದು ಎಂದು ಹೇಳಿದರು.

ಇದಕ್ಕೂ ಮುನ್ನ 2019ರಲ್ಲಿ ಭಾರತೀಯ ಅಧಿಕಾರಿಗಳು ಪಾಕಿಸ್ತಾನ ಹಿಂದೂ ಕೌನ್ಸಿಲ್(ಪಿಎಚ್‍ಸಿ)ನೊಂದಿ ಮಾತುಕತೆ ಸಾಧಿಸಿದ್ದರು. ಡಾ.ರಮೇಶ್ ವಾಂಕ್ವಾನಿ ನೇತೃತ್ವದ ಐವರು ಸದಸ್ಯರ ನಿಯೋಗವು 2019ರ ಜೂನ್ 24ರಂದು ಶಾರದಾ ಪೀಠಕ್ಕೆ ಭೇಟಿ ನೀಡಿತ್ತು.

ಶಾರದಾ ಪೀಠದ ತೀರ್ಥಯಾತ್ರೆಯ ಮಾರ್ಗವನ್ನು ಪುನಃ ತೆರೆಯಲು ಹಾಗೂ ಶಾರದಾ ದೇವಾಲಯವನ್ನು ಪುನಃ ಸ್ಥಾಪಿಸಲು ರವೀಂದ್ರ ಪಂಡಿತ ಹಾಗೂ ಇತರ ಸಂಬಂಧಿಸಿದ ಜನರು ಸೇವ್ ಶಾರದಾ ಸಮಿತಿಯನ್ನು ರಚಿಸಿದ್ದಾರೆ. ತೀರ್ಥಯಾತ್ರೆಗಾಗಿ ಹಾಗೂ ಭಾರತೀಯ ಹಿಂದೂಗಳ ಪ್ರಯಾಣಕ್ಕೆ ಅನುಕೂಲವಾಗುವಂತೆ ಎಲ್‍ಓಸಿ ಪರವಾನಗಿ ನಿಯಮಗಳನ್ನು ಅಂಗೀಕರಿಸುವಂತೆ ಸಮಿತಿ ಒತ್ತಾಯಿಸುತ್ತಿದೆ.

ಸೇವ್ ಶಾರದಾ ಸಮಿತಿಯು ಪಿಓಕೆಯ ಇತರ ಐತಿಹಾಸಿಕ ತಾಣಗಳಂತೆ ಶಾರದಾ ತಾಣವನ್ನು ಸಂರಕ್ಷಿಸುವಂತೆ ಕಾನೂನು ಹೋರಾಟ ನಡೆಸುತ್ತಿದೆ. ಇದರ ಭಾಗವಾಗಿ ಪಿಓಕೆ ಸುಪ್ರೀಂ ಕೋರ್ಟ್ ಶಾರದಾ ಪೀಠದ ಸಂರಕ್ಷಣೆ ಮಾಡುವಂತೆ ಸರ್ಕಾರಕ್ಕೆ ಸೂಚಿಸಿತ್ತು.

Share This Article
Leave a Comment

Leave a Reply

Your email address will not be published. Required fields are marked *