ಗಾಂಧಿನಗರ: ಪೋರಬಂದರ್ ಕರಾವಳಿಯಲ್ಲಿ ಭಾರತೀಯ ನೌಕಾಪಡೆಯ (Indian Navy) ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ (ಎನ್‌ಸಿಬಿ) ಮತ್ತು ಗುಜರಾತ್ (Gujarat) ಭಯೋತ್ಪಾದಕ ನಿಗ್ರಹ ದಳ (ಎಟಿಎಸ್) ಜಂಟಿ ಕಾರ್ಯಾಚರಣೆ ನಡೆಸಿ ಬೋಟ್‌ನಲ್ಲಿ ಸಾಗಿಸುತ್ತಿದ್ದ 700 ಕೆಜಿ ಮೆಥಾಂಫೆಟಮೈನ್ ಮಾದಕ ವಸ್ತು ವಶಪಡಿಸಿಕೊಂಡಿವೆ. ಅಲ್ಲದೇ ಬೋಟ್‌ನಲ್ಲಿದ್ದ 8 ಇರಾನ್ ಪ್ರಜೆಗಳನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕೇಂದ್ರ ಗುಪ್ತಚರ ನೀಡಿದ ಮಾಹಿತಿ ಮೇಲೆ ಈ ಕಾರ್ಯಾಚರಣೆ ನಡೆದಿದೆ. ಬೋಟ್ ಅಂತಾರಾಷ್ಟ್ರೀಯ ಸಮುದ್ರ ಗಡಿ ರೇಖೆಯ (ಐಎಂಬಿಎಲ್) ಬಳಿ ಪತ್ತೆಯಾಗಿತ್ತು. ಅಲ್ಲಿಂದ ಬೋಟ್‌ನ್ನು ಅಧಿಕಾರಿಗಳು ವಶಕ್ಕೆ ಪಡೆದು ಪೋರ್‌ಬಂದರ್‌ಗೆ ತಂದಿದ್ದಾರೆ. ವಶಕ್ಕೆ ಪಡೆಯಲಾದ ಮಾದಕ ವಸ್ತು ಮೌಲ್ಯ ಸುಮಾರು 2-5 ಕೋಟಿ ರೂ. ಎಂದು ಅಂದಾಜಿಸಲಾಗಿದೆ.
ಮಾದಕ ವಸ್ತು ಸಾಗಾಣಿಕೆ ಬಗ್ಗೆ ಹೆಚ್ಚಿನ ವಿವರಗಳನ್ನು ತಿಳಿಯಲು ಅಧಿಕಾರಿಗಳು ಬಂಧಿತರನ್ನು ವಿಚಾರಣೆ ನಡೆಸುತ್ತಿದ್ದಾರೆ. ಮಾದಕ ವಸ್ತು ಮೂಲ ಪಾಕಿಸ್ತಾನವೇ ಎಂಬ ಬಗ್ಗೆಯೂ ತನಿಖೆ ನಡೆಯುತ್ತಿದೆ. ಪಾಕಿಸ್ತಾನವು ತಮ್ಮ ಭಯೋತ್ಪಾದಕ ಚಟುವಟಿಕೆಗಳಿಗೆ ಹಣಕ್ಕಾಗಿ ಗಡಿಯುದ್ದಕ್ಕೂ ಮಾದಕ ವಸ್ತು ಸರಬರಾಜು ಮಾಡುತ್ತಿದೆ ಎಂಬ ಆರೋಪ ಇದೆ.
ಕೇಂದ್ರ ಗೃಹ ಸಚಿವ ಅಮಿತ್ ಶಾ ಕಾರ್ಯಾಚರಣೆಯಲ್ಲಿ ಪಾಲ್ಗೊಂಡ ತಂಡವನ್ನು ಶ್ಲಾಘಿಸಿದ್ದಾರೆ. ಈ ಬಗ್ಗೆ ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ಅವರು, ಮಾದಕ ದ್ರವ್ಯ ಮುಕ್ತ ಭಾರತಕ್ಕಾಗಿ ಪ್ರಧಾನಿ ನರೇಂದ್ರ ಮೋದಿಜಿಯವರ ದೃಷ್ಟಿಕೋನವನ್ನು ಈ ಕಾರ್ಯಾಚರಣೆ ತೋರಿಸುತ್ತದೆ. ನಮ್ಮ ಏಜೆನ್ಸಿಗಳು ಇಂದು ಅಂತರರಾಷ್ಟ್ರೀಯ ಮಾದಕವಸ್ತು ಕಳ್ಳಸಾಗಣೆ ಕಾರ್ಟೆಲ್ ಅನ್ನು ಭೇದಿಸಿ ಗುಜರಾತ್‌ನಲ್ಲಿ 700 ಕೆಜಿಗೂ ಹೆಚ್ಚು ನಿಷಿದ್ಧ ಮಾಧಕ ವಸ್ತುವನ್ನು ವಶಪಡಿಸಿಕೊಂಡಿವೆ. ಭದ್ರತಾ ಏಜೆನ್ಸಿಗಳ ನಡುವಿನ ತಡೆರಹಿತ ಸಮನ್ವಯಕ್ಕೆ ಒಂದು ಅತ್ಯುತ್ತಮ ಉದಾಹರಣೆಯಾಗಿದೆ ಎಂದು ಅವರು ಬರೆದುಕೊಂಡಿದ್ದಾರೆ.
ಕೆಲವೇ ದಿನಗಳ ಹಿಂದೆ ಗುಜರಾತ್ ಭರೂಚ್ ಜಿಲ್ಲೆಯ ಅಂಕಲೇಶ್ವರದಲ್ಲಿರುವ ಕಾರ್ಖಾನೆ ಒಂದರಲ್ಲಿ 250 ಕೋಟಿ ರೂ.ಗೂ ಹೆಚ್ಚು ಮೌಲ್ಯದ ಮಾದಕ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿತ್ತು. ಅಲ್ಲದೇ ಈ ಹಿಂದೆಯೂ ಕಾರ್ಯಾಚರಣೆ ನಡೆಸಿ ಅಂಕಲೇಶ್ವರದಲ್ಲಿ 5,000 ಕೋಟಿ ಮೌಲ್ಯದ ಮಾದಕ ವಸ್ತು ವಶಪಡಿಸಿಕೊಳ್ಳಲಾಗಿತ್ತು.