ಭೈರತಿ ರಣಗಲ್ (Bhairati Rangal) ಚಿತ್ರ ಆರು ವರ್ಷಗಳ ಹಿಂದೆ ಬಿಡುಗಡೆಯಾದ ‘ಮಫ್ತಿ’ ಚಿತ್ರದ ಪ್ರೀಕ್ವೆಲ್ ಎಂದು ಈಗಾಗಲೇ ಸಾಕಷ್ಟು ಸುದ್ದಿಯಾಗಿದೆ. ಆದರೆ, ‘ಮಫ್ತಿ’ ಚಿತ್ರ ಮಾಡುವಾಗ ಈ ಚಿತ್ರದಲ್ಲಿ ನಟಿಸಬೇಕಾ? ಎಂಬ ಗೊಂದಲ ನನ್ನಗಿತ್ತು. ‘ಏಕೆಂದರೆ, ಆ ಚಿತ್ರದಲ್ಲಿ ನನ್ನ ಪಾತ್ರ ಬರುವುದೇ ಇಂಟರ್ ವೆಲ್ ನಂತರ. ಶ್ರೀಮುರಳಿ ಈ ಚಿತ್ರದಲ್ಲಿ ಇನ್ನೊಂದು ಪಾತ್ರವನ್ನು ಮಾಡುತ್ತಿದ್ದರು. ಮುರಳಿ ನನ್ನ ಮಾವನ ಮಗ. ಇಲ್ಲ ಎನ್ನುವಂತೆಯೂ ಇರಲಿಲ್ಲ. ಹಾಗಿರುವಾಗ, ಏನು ಮಾಡುವುದು ಎಂಬ ಪ್ರಶ್ನೆ ಇದ್ದೇ ಇತ್ತು. ಅಂತಹ ಸಂದರ್ಭದಲ್ಲಿ ನಿರ್ದೇಶಕ ನರ್ತನ್ (Narthan) ಬಂದು ನೀವು ಈ ಪಾತ್ರ ಮಾಡಿ ಎಂದರು. ನನಗೊಂದು ಧೈರ್ಯ ಬಂತು. ಆನಂತರ “ಮಫ್ತಿ” ಚಿತ್ರದಲ್ಲಿ ನಟಿಸಲು ಒಪ್ಪಿಕೊಂಡೆ. ಅಭಿನಯಿಸುವಾಗಲೇ ಅದೇನೋ ಆ ಪಾತ್ರವನ್ನು ಇಷ್ಟಪಡತೊಡಗಿದೆ. ಅದಕ್ಕೆ ಆ ಹೆಸರು ಸಹ ಕಾರಣ. ಈ ತರಹದ ಹೆಸರು ಕೇಳೋಕೆ ಸಾಧ್ಯ ಇಲ್ಲ. ಇನ್ನು, ಸಂಭಾಷಣೆ ಚೆನ್ನಾಗಿತ್ತು. ಅಲ್ಲಿದ್ದ ಭೈರತಿ ರಣಗಲ್‍ನ ಸಣ್ಣ ಕಥೆಯನ್ನು ಇಲ್ಲಿ ಬೆಳೆಸಿದ್ದಾರೆ. ಯಾಕೆ ಅವನು ಭೈರತಿ ರಣಗಲ್ ಆಗುತ್ತಾನೆ. ಜನರಿಗೆ ಯಾಕೆ ಅವನನ್ನು ಕಂಡರೆ ಅಷ್ಟು ಪ್ರೀತಿ ಎಂದು ಹೇಳಲಾಗಿದೆ. ಹೆಚ್ಚು ಆಡಂಬರವಿಲ್ಲದೆ, ಸರಳವಾಗಿ ಈ ವಿಷಯವನ್ನು ಹೇಳಲಾಗಿದೆ. ಇಲ್ಲಿ ಎಷ್ಟು ಮಾತು ಬೇಕೋ, ಅಷ್ಟಿದೆ. ಬಹಳ ಚೆನ್ನಾಗಿದೆ ಕಥೆ ಮಾಡಿಕೊಂಡಿದ್ದಾರೆ ನಿರ್ದೇಶಕ ನರ್ತನ್’ ಎಂದರು ಶಿವಣ್ಣ.
Advertisement
ಶಿವಣ್ಣ (Shivaraj Kumar) ಈ ಚಿತ್ರದಲ್ಲಿ ಆ ಡ್ರೆಸ್ ಯಾಕೆ ಹಾಕುತ್ತಾರೆ? ಎನ್ನುವುದೇ ಚಿತ್ರದ ಕಥೆ ಎಂದು ಮಾತನಾಡಿದ ನಿರ್ದೇಶಕ ನರ್ತನ್, ‘‘ಮಫ್ತಿ’ ಚಿತ್ರ ಮಾಡುವಾಗಲೇ, ಆ ಪಾತ್ರದ ತೂಕ ಹೆಚ್ಚಿತ್ತು. ಚಿತ್ರ ನೋಡಿದಾಗ ಜನರಿಗೆ ಸಾಕಾಗಲಿಲ್ಲ. ಏಕೆಂದರೆ, ಶಿವಣ್ಣ ಅವರ ಪಾತ್ರ ಇಂಟರ್‍ವೆಲ್ ನಂತರ ಬರುತ್ತದೆ. ಈ ಪಾತ್ರವನ್ನು ಇಷ್ಟಕ್ಕೇ ಮುಗಿಸಬಾರದು, ಇದರ ಹಿನ್ನೆಲೆ ಏನಾದರೂ ಬರೆಯಬೇಕು ಎಂದಾಗ ರಣಗಲ್ ಹಿಂದಿನ ಕಥೆ ಸೃಷ್ಟಿಯಾಯಿತು. ಪೆನ್ ಹಿಡಿದಾಗ ಬಹಳ ಸಲೀಸಾಗಿ ಕಥೆ ಸೃಷ್ಟಿಯಾಯಿತು. “ಭೈರತಿ ರಣಗಲ್” ಗ್ಯಾಂಗ್‍ಸ್ಟರ್ ಆಗಿದ್ದು ಹೇಗೆ? ಆ ಬ್ಲಾಕ್ ಡ್ರೆಸ್ ಯಾಕೆ ಹಾಕುತ್ತಾರೆ ಎನ್ನುವುದೇ ಚಿತ್ರದ ಕಥೆ. ಈ ಸಿನಿಮಾ ಬರೆದುಕೊಂಡು ಕಥೆ ಹೇಳಿದಾಗ, ಶಿವಣ್ಣ ಹಾಗೂ ಗೀತಕ್ಕ ಅವರು ಬೇರೇನೂ ಕೇಳಲಿಲ್ಲ. ಮಾಡು ಎಂದು ಹುರಿದುಂಬಿಸಿದರು.ಈಗಾಗಲೇ 70 ರಷ್ಟು ಚಿತ್ರ ಮುಗಿದಿದೆ. ಆಗಸ್ಟ್ 15ಕ್ಕೆ ಚಿತ್ರ ಬಿಡುಗಡೆಯಾಗುತ್ತಿದೆ’ ಎಂದರು.
Advertisement
Advertisement
ನಮ್ಮ ಚಿತ್ರ ಆಗಸ್ಟ್ 15 ರಂದು ತೆರೆಗೆ ಬರುತ್ತಿದೆ. ಆಗಸ್ಟ್ ನಲ್ಲಿ ಸಾಲುಸಾಲು ರಜೆಗಳಿದೆ. ಸಾಮಾನ್ಯವಾಗಿ ಸತತವಾಗಿ ರಜೆ ಸಿಕ್ಕರೆ, ಜನ ಚಿತ್ರಮಂದಿರಕ್ಕೆ ಬರುತ್ತಾರೆ ಎಂಬ ದೃಷ್ಟಿಯಿಂದ ಆಗಸ್ಟ್ 15 ರಂದು ಚಿತ್ರವನ್ನು ಬಿಡುಗಡೆ ಮಾಡಲಾಗುತ್ತಿದೆ ಎಂದು ನಿರ್ಮಾಪಕಿ ಗೀತಾ ಶಿವರಾಜಕುಮಾರ್ ತಿಳಿಸಿದರು.
Advertisement
ಚಿತ್ರದಲ್ಲಿ ಶಿವರಾಜಕುಮಾರ್, ರುಕ್ಮಿಣಿ ವಸಂತ್, ರಾಹುಲ್ ಬೋಸ್, ಅವಿನಾಶ್ , ದೇವರಾಜ್, ಮಧು ಗುರುಸ್ವಾಮಿ, ಛಾಯಾ ಸಿಂಗ್, ಬಾಬು ಹಿರಣ್ಣಯ್ಯ ಮುಂತಾದವರು ಅಭಿನಯಿಸುತ್ತಿದ್ದಾರೆ. “ಭೈರತಿ ರಣಗಲ್” ಚಿತ್ರಕ್ಕೆ ನವೀನ್ ಕುಮಾರ್ ಛಾಯಾಗ್ರಹಣ ಮತ್ತು ರವಿ ಬಸ್ರೂರು ಅವರ ಸಂಗೀತವಿದೆ.