-ವಿದ್ಯಾರ್ಥಿ ನಿಲಯದಲ್ಲಿ 70 ವಲಸಿಗರಿಗೆ ಆಶ್ರಯ
ಧಾರವಾಡ/ಹುಬ್ಬಳ್ಳಿ: ಕಾಲ್ನಡಿಗೆ ಮೂಲಕ ಮಧ್ಯಪ್ರದೇಶ ಹಾಗೂ ಬಿಹಾರಕ್ಕೆ ಹೊರಟಿದ್ದ 70 ಜನ ವಲಸೆ ಕಾರ್ಮಿಕರಿಗೆ ಇಂದು ಹುಬ್ಬಳ್ಳಿ ತಾಲೂಕಿನ ತಿರುಮಲಕೊಪ್ಪದ ಬಳಿಯ ವಿದ್ಯಾರ್ಥಿ ನಿಲಯದಲ್ಲಿ ಆಶ್ರಯ ಕಲ್ಪಿಸಲಾಗಿದೆ.
ಕಾರ್ಮಿಕರು ಕಾಲ್ನಡಿಗೆ ಮೂಲಕ ತಮ್ಮ ರಾಜ್ಯಗಳಿಗೆ ಹೊರಟಿರುವ ವಿಷಯ ತಿಳಿದ ಜಿಲ್ಲಾಧಿಕಾರಿ ದೀಪಾ ಚೋಳನ್ ಎಲ್ಲರಿಗೂ ಆಶ್ರಯ ಕಲ್ಪಿಸುವಂತೆ ಸೂಚಿಸಿದ್ದರು. ಜಿಲ್ಲಾಧಿಕಾರಿಗಳ ಸೂಚನೆ ಮೇರೆಗೆ ಡಿವೈಎಸ್ ಪಿ ರವಿ ನಾಯಕ್ ಮತ್ತು ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕ ಎನ್. ಆರ್. ಪುರುಷೋತ್ತಮ ಅವರು ಇಂದು ಬೆಳಗ್ಗೆ ವಲಸೆ ಕಾರ್ಮಿಕನರನ್ನು ಭೇಟಿ ಮಾಡಿ ಅವರಿಂದ ಮಾಹಿತಿ ಕಲೆ ಹಾಕಿದ್ದಾರೆ.
Advertisement
Advertisement
ಲಾಕ್‍ಡೌನ್‍ನಿಂದಾಗಿ ವಾಹನಗಳ ಸಿಗದ ಹಿನ್ನೆಲೆಯಲ್ಲಿ 70 ಜನರು ಕಾಲ್ನಡಿಗೆಯಲ್ಲಿ ಹಾವೇರಿಯಿಂದ ಪ್ರಯಾಣ ಬೆಳೆಸಿದ್ದರು. ಬಿಹಾರದ 60 ಜನ ಮತ್ತು ಮಧ್ಯಪ್ರದೇಶದ 10 ಜನರನ್ನು ವಿದ್ಯಾರ್ಥಿನಿಲಯಕ್ಕೆ ಕರೆತಂದು ಆಶ್ರಯ ಒದಗಿಸಲಾಗಿದೆ. ಅಧಿಕಾರಿಗಳು ಎಲ್ಲ ವಲಸಿಗರನ್ನು ಸೇವಾ ಸಿಂಧು ಪೋರ್ಟಲ್ ಮೂಲಕ ನೋಂದಣಿ ಮಾಡಿಸಿ, ವಿಶೇಷ ರೈಲು ಸಂಚಾರ ಪ್ರಾರಂಭವಾಗುತ್ತಿದ್ದಂತೆ ಕಳಿಸೋದಾಗಿ ಭರವಸೆ ನೀಡಿದ್ದಾರೆ. ರೈಲು ಪ್ರಯಾಣದ ಟಿಕೆಟ್ ಕೊಡಿಸಲು ಜಿಲ್ಲಾಡಳಿತ ಅಗತ್ಯ ಕ್ರಮ ಕೈಗೊಂಡಿದೆ.