Connect with us

ಋತುಚಕ್ರವಾಗಿರೋದು ಯಾರಿಗೆಂದು ತಿಳಿಯಲು 70 ಹುಡುಗಿಯರ ಬಟ್ಟೆ ಕಳಚಿಸಿದ ವಾರ್ಡನ್!

ಋತುಚಕ್ರವಾಗಿರೋದು ಯಾರಿಗೆಂದು ತಿಳಿಯಲು 70 ಹುಡುಗಿಯರ ಬಟ್ಟೆ ಕಳಚಿಸಿದ ವಾರ್ಡನ್!

ಮುಜಾಫರ್‍ನಗರ್: ಉತ್ತರಪ್ರದೇಶದ ವಸತಿ ಶಾಲೆಯೊಂದರ ವಾರ್ಡನ್ ಹಾಗು ಶಾಲೆಯ ಮುಖ್ಯಸ್ಥೆಯಾದ ಮಹಿಳೆಯೊಬ್ಬಳು ಸುಮಾರು 70 ಹುಡುಗಿಯರನ್ನು ಬಟ್ಟೆ ಕಳಚುವಂತೆ ಮಾಡಿದ್ದಾಳೆ ಎಂದು ಆರೋಪ ಕೇಳಿಬಂದಿದೆ.

ಬಾತ್‍ರೂಮಿನಲ್ಲಿ ರಕ್ತದ ಕಲೆ ಕಾಣಿಸಿದ ಹಿನ್ನೆಲೆಯಲ್ಲಿ ಋತಚಕ್ರವಾಗಿರೊದು ಯಾರಿಗೆ ಎಂದು ತಿಳಿಯಲು ವಾರ್ಡನ್, ವಿದ್ಯಾರ್ಥಿನಿಯರನ್ನು ಬಟ್ಟೆ ತೆಗೆಯುವಂತೆ ಮಾಡಿದ್ದಾಳೆ. ಅಲ್ಲದೆ ವಿದ್ಯಾರ್ಥಿನಿಯರನ್ನ ತರಗತಿಯಲ್ಲೇ ಬೆತ್ತಲೆಯಾಗಿ ಕೂರುವಂತೆ ಮಾಡಿದ್ದಾಳೆಂದು ಆರೋಪಿಸಲಾಗಿದೆ.

ಇಲ್ಲಿನ ದಿಗ್ರಿ ಗ್ರಾಮದಲ್ಲಿರುವ ಕಸ್ತೂರಬಾ ಗಾಂಧಿ ವಸತಿ ಶಾಲೆಯಲ್ಲಿ ಗುರುವಾರದಂದು ಈ ಘಟನೆ ನಡೆದಿದೆ ಎಂದು ವಿದ್ಯಾರ್ಥಿನಿಯರ ಪೋಷಕರು ದೂರು ದಾಖಲಿಸಿದ್ದಾರೆ. ಶಾಲೆಯ ಪ್ರಾಂಶುಪಾಲೆ ಹಾಗೂ ವಾರ್ಡನ್ ಆಗಿರುವ ಸುರೇಖಾ ತೋಮರ್, ತನ್ನ ಆದೇಶವನ್ನು ಪಾಲಿಸದಿದ್ದರೆ ಅದರ ಪರಿಣಾಮವನ್ನ ಎದುರಿಸಬೇಕಾಗುತ್ತದೆ ಎಂದು ಹೇಳಿ ವಿದ್ಯಾರ್ಥಿನಿಯರನ್ನ ಬೆದರಿಸಿದ್ದಾಳೆಂದು ಜಿಲ್ಲಾ ಪ್ರಾಥಮಿಕ ಶಿಕ್ಷಣ ಅಧಿಕಾರಿ ಚಂದರ್ ಕೇಶ್ ಯಾದವ್ ಪತ್ರಿಕೆಯೊಂದಕ್ಕೆ ತಿಳಿಸಿದ್ದಾರೆ.

ಅಲ್ಲಿ ಯಾವ ಶಿಕ್ಷಕರೂ ಇರಲಿಲ್ಲ. ನಮ್ಮನ್ನು ಕಳಮಹಡಿಗೆ ಬರುವಂತೆ ಹೇಳಿದ್ರು. ಮೇಡಮ್ ನಮ್ಮ ಬಟ್ಟೆ ಕಳಚುವಂತೆ ಮಾಡಿದ್ರು. ಅವರು ಹೇಳಿದಂತೆ ಮಾಡದಿದ್ರೆ ಹೊಡೆಯುತ್ತೇನೆ ಅಂತ ಹೇಳಿದ್ರು. ನಾವು ಮಕ್ಕಳು, ನಾವೇನು ಮಾಡಲು ಸಾಧ್ಯ? ಅವರು ಹೇಳಿದಂತೆ ಮಾಡದೇ ಹೋಗಿದ್ದರೆ ನಮ್ಮನ್ನು ಹೊಡೆಯುತ್ತಿದ್ದರು ಎಂದು ವಿದ್ಯಾರ್ಥಿನಿಯೊಬ್ಬರು ಹೇಳಿಕೆ ನೀಡಿದ್ದಾರೆ.

ವಾರ್ಡನ್ ಅನೇಕ ವೇಳೆ ವಿದ್ಯಾರ್ಥಿನಿಯರಿಗೆ ಹೊಡೆದು ಬೆದರಿಸಿದ್ದು, ಆಕೆಗೆ ಶಿಕ್ಷೆಯಾಗಬೇಕೆಂದು ಪೋಷಕರು ರಾಜ್ಯ ಸರ್ಕಾರಕ್ಕೆ ಒತ್ತಾಯಿಸಿದ್ದಾರೆ.

ಈ ಬಗ್ಗೆ ಹಿರಿಯ ಮಹಿಳಾ ಅಧಿಕಾರಿಯೊಬ್ಬರಿಂದ ತನಿಖೆ ನಡೆಸುವಂತೆ ಈಗಾಗಲೇ ರಾಜ್ಯ ಸರ್ಕಾರ ಆದೇಶಿಸಿದೆ. ಜಿಲ್ಲಾಡಳಿತ ಸುರೇಖಾಳನ್ನು ಕೆಲಸದಿಂದ ವಜಾ ಮಾಡಿದ್ದು, ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಆದರೆ ಈ ಎಲ್ಲಾ ಆರೋಪಗಳನ್ನು ಸುರೇಖಾ ತೋಮರ್ ತಳ್ಳಿಹಾಕಿದ್ದು, ಅವರಿಗೆ ಬಟ್ಟೆ ಕಳಚುವಂತೆ ಯಾರೂ ಹೇಳಿಲ್ಲ. ನಾನು ಇಲ್ಲಿ ಇರಬಾರದು ಅಂತ ಇಲ್ಲಿನ ಸಿಬ್ಬಂದಿ ನಡೆಸಿರುವ ಪಿತೂರಿ ಇದು. ಇಲ್ಲಿನ ಸಿಬ್ಬಂದಿ ತಮ್ಮ ಕೆಲಸವನ್ನ ಸರಿಯಾಗಿ ಮಾಡುತ್ತಿದ್ದಾರೋ ಇಲ್ಲವೋ ಎಂದು ಪರಿಶೀಲಿಸುವಂತೆ ನನಗೆ ಹೇಳಲಾಗಿತ್ತು. ನಾನು ತುಂಬಾ ಸ್ಟ್ರಿಕ್ಟ್, ಅದಕ್ಕೆ ನನ್ನನ್ನು ಅವರು ದ್ವೇಷಿಸುತ್ತಾರೆ ಎಂದು ಹೇಳಿದ್ದಾಳೆ.

ಈ ಘಟನೆಯಿಂದಾಗಿ ಸುಮಾರು 35 ವಿದ್ಯಾರ್ಥಿಗಳು ಶಾಲೆಯನ್ನ ತೊರೆದಿದ್ದಾರೆ ಎಂದು ವರದಿಯಾಗಿದೆ.

 

Advertisement
Advertisement