– 7 ವರ್ಷಗಳ ಬಳಿಕ ಮನೆಯಲ್ಲಿ ಸಂಭ್ರಮ
ಬೆಂಗಳೂರು: ಎದೆಮಟ್ಟಕ್ಕೆ ಬೆಳೆದುನಿಂತ ಮಕ್ಕಳು ಕೊಲೆಯಾದ್ರೆ ಆ ಪೋಷಕರ ಪಾಡು ಹೇಗಿರಬೇಡ.. ಪುತ್ರ ಶೋಕಂ ನಿರಂತರಂ ಅನ್ನುವಂತೆ ಕೊಲೆಯಾದ ಮಗನ ನೆನಪಲ್ಲೇ ಆ ಕುಟುಂಬ 7 ವರ್ಷಗಳ ಕಾಲ ಶೋಕಾಚರಣೆ ಮಾಡಿತ್ತು. ಯಾವುದೇ ಹಬ್ಬ ಬಂದರು ಮನೆಯಲ್ಲಿ ಮಗನ ನೆನೆದು ಕಣ್ಣೀರಿಡುವಂತಾಗಿತ್ತು. ಆದರೀಗ ಕೊಲೆಯಾದ ಮಗನ ಹುಟ್ಟು ಹಬ್ಬದಂದೇ ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ ಪ್ರಕಟವಾಗಿದ್ದು, ಮನೆಗೆ ದೀಪಾಲಂಕಾರ ಮಾಡಿ 7 ವರ್ಷದ ಬಳಿಕ ವಿಜೃಂಭಣೆಯಿಂದ ಆ ತಂದೆ ದೀಪಾವಳಿ ಹಬ್ಬ ಆಚರಿಸಿದ್ದಾರೆ.
ಹೌದು. ಎಂಜಿನಿಯರಿಂಗ್ ಮುಗಿಸಿ ಬೆಂಗಳೂರಿಗೆ ಕೆಲಸ ಅರಸಿ ಬಂದಿದ್ದ ಬಿಹಾರದ ಪಾಟ್ನಾ ಹುಡುಗ ಸಿದ್ದಾರ್ಥ್ ಕೌಶಲ್‌ನ ಸ್ಟೋರಿಯಿದು. 2018ರ ಜೂನ್ 26ರ ಬೆಳಗಿನ ಜಾವ 2.45ರ ಸುಮಾರಿಗೆ ಕಾರಿನಲ್ಲಿ ಎಲೆಕ್ಟ್ರಾನಿಕ್ ಸಿಟಿ ಕಡೆ ಸಿದ್ದಾರ್ಥ್ ಕೌಶಲ್ ತೆರಳ್ತಿದ್ರು. ಮೈಕೊಲೇಔಟ್ ಸಮೀಪ ಕಾರು ನಿಲ್ಲಿಸಿ ಮೂತ್ರ ವಿಸರ್ಜನೆಗೆ ಸಿದ್ದಾರ್ಥ್ ತೆರಳಿದ್ದ. ಈ ವೇಳೆ ಬೈಕ್ ನಲ್ಲಿ ಬಂದ ಇಬ್ಬರು ಸಿದ್ದಾರ್ಥ್ ಬೈಕ್‌ಗೆ ಮಿರರ್ ತಾಗಿಸಿ ಮುಂದೆ ಹೋಗಿದ್ರು. ಈ ವೇಳೆ ಸಿದ್ದಾರ್ಥ್ ನೋಡ್ಕೊಂಡ್ ಹೋಗಿ ಅಂತಾ ಹಿಂದಿಯಲ್ಲಿ ಹೇಳಿದ್ದ. ಇದರಿಂದ ಉಂಟಾದ ಜಗಳ ತಾರಕಕ್ಕೇರಿ ಈ ನನ್ನ ಮಕ್ಕಳ ಗಾಂಚಲಿ ಜಾಸ್ತಿ ಆಯ್ತು ಇವರನ್ನ ಸುಮ್ಮನೆ ಬಿಡಬಾರದು ಅಂತಾ ದೊಣ್ಣೆಯಿಂದ ಸಿದ್ದಾರ್ಥ್ ತಲೆಗೆ ಹೊಡೆದು ಪರಾರಿಯಾಗಿದ್ರು. 2018ರ ಜೂನ್‌ನಲ್ಲಿ ಸಿದ್ದಾರ್ಥ್ ಚಿಕಿತ್ಸೆ ಫಲಿಸದೆ ಸಾವನ್ನಪ್ಪಿದ್ದ.

ಬೆಂಗಳೂರಿನ ಮೈಕೋಲೇಔಟ್ ಪೊಲೀಸರ ಮುತುರ್ಜಿಯ ಇನ್ವೆಸ್ಟಿಗೇಷನ್ ಇಂದ ಇಬ್ಬರು ಕೊಲೆ ಆರೋಪಿಗಳಾದ ಗಿರೀಶ್ (21), ಮಹೇಶ್ (19) ನನ್ನ ಬಂಧಿಸಿ, ಚಾರ್ಜ್ ಶೀಟ್ ಹಾಕಿದ್ರು. ಸೂಕ್ತ ಸಾಕ್ಷಿಗಳನ್ನ ಪ್ರಾಸಿಕ್ಯೂಷನ್ ಕಲೆ ಹಾಕಿದ ಹಿನ್ನೆಲೆ 59ನೇ ಸಿಸಿಎಚ್ ನ್ಯಾಯಾಧೀಶ ಬಾಲಚಂದ್ರ ಎನ್.ಭಟ್‌ರ ಮುಂದೆ ವಿಚಾರಣೆ ನಡೆದು ಇಬ್ಬರು ಆರೋಪಿಗಳಿಗೆ 10 ಸಾವಿರ ದಂಡ ಹಾಗೂ ಜೀವಾವಧಿ ಶಿಕ್ಷೆ ಪ್ರಕಟಿಸಿದ್ದಾರೆ.
ವಿಧಿಯಾಟ ಅಂದ್ರೆ ಸಿದ್ದಾರ್ಥ್ ಕೌಶಲ್ ಹುಟ್ಟು ಹಬ್ಬದ ದಿನವಾದ ಅಕ್ಟೋಬರ್ 24 ರಂದೇ ಜೀವಾವಧಿ ತೀರ್ಪು ಹೊರ ಬಂದಿದ್ದು, ಸಿದ್ದಾರ್ಥ್ ಕುಟುಂಬ ಆರೋಪಿಗಳಿಗೆ ಶಿಕ್ಷೆಯಾದ ಹಿನ್ನೆಲೆ ಭಗವಂತನಿದ್ದಾನೆ ಅಂತಾ ಸಂತಸ ವ್ಯಕ್ತಪಡಿಸಿದೆ. ಕೊಲೆಯಾದ ಸಿದ್ದಾರ್ಥ್ ತಂದೆ ತನ್ನ ಪಾಟ್ನಾದ ಮನೆಗೆ ದೀಪಾಲಂಕಾರ ಮಾಡಿ ವಿಜೃಂಭಣೆಯಿಂದ ದೀಪಾವಳಿ ಹಬ್ಬ ಆಚರಿಸಿದ್ದಾರೆ.
ಅಲ್ಲದೇ ಪಾಟ್ನಾದಿಂದ ಬೆಂಗಳೂರಿಗೆ ಬಂದು ಅಂದು ಕೇಸ್‌ನ ತನಿಖೆ ನಡೆಸಿದ ಮೈಕೊ ಲೇಔಟ್ ಇನ್ಸ್ ಪೆಕ್ಟರ್ ನಟರಾಜ್ ಹಾಗೂ ಸಿಬ್ಬಂದಿಗೆ ಸಿಹಿ ನೀಡಿ ಕೃತಜ್ಞತೆ ಸಲ್ಲಿಸಿದ್ದಾರೆ. ಕೊಲೆಗಾರರಿಗೆ ತಕ್ಕ ಶಾಸ್ತಿಯಾಗಿದೆ ಅಂತ ಇದೀಗ ಕೊಲೆಯಾದ ಸಿದ್ಧಾರ್ಥರ ತಂದೆ ಕೌಶಲೇಂದ್ರ ನಿಟ್ಟುಸಿರು ಬಿಟ್ಟಿದ್ದು, ಕೌಶಲೇಂದ್ರ ಪಾಂಡೆ ಹಾಗೂ ಕುಟುಂಬದವರ ಕಣ್ಣೀರಿಗೆ ಇದೀಗ ಬೆಲೆ ಸಿಕ್ಕಂತಾಗಿದೆ. ಮಗನ ಸಾವಿನ ನೋವಿಗೆ ಇದೀಗ ಉತ್ತರ ಸಿಕ್ಕಿದೆ ಎಂಬ ಸಣ್ಣ ಖುಷಿ ಪಾಂಡೆಯವರ ಕಣ್ಣಾಲೆಯನ್ನ ಒದ್ದೆಯಾಗಿಸಿದೆ.




