Connect with us

Latest

ಶಾಲೆಯ ಟಾಯ್ಲೆಟ್‍ನಲ್ಲಿ 2ನೇ ತರಗತಿ ಬಾಲಕನ ಕತ್ತು ಸೀಳಿ ಕೊಲೆ

Published

on

ಗುರ್ಗಾವ್: 2ನೇ ತರಗತಿ ಬಾಲಕನನ್ನು ಶಾಲೆಯ ಟಾಯ್ಲೆಟ್‍ನಲ್ಲಿ ಕೊಲೆ ಮಾಡಿರುವ ಘಟನೆ ದೆಹಲಿ ಸಮೀಪದ ಗುರ್ಗಾವ್ ನಲ್ಲಿರುವ ಆರ್ಯನ್ ಇಂಟರ್‍ನ್ಯಾಷನಲ್ ಶಾಲೆಯಲ್ಲಿ ನಡೆದಿದೆ.

7 ವರ್ಷದ ಪ್ರದ್ಯುಮನ್ ಕೊಲೆಯಾದ ಬಾಲಕ. ಪ್ರದ್ಯುಮನ್‍ನ ಕತ್ತು ಸೀಳಲಾಗಿದ್ದು, ಮೃತದೇಹದ ಪಕ್ಕದಲ್ಲಿ ಚಾಕು ಪತ್ತೆಯಾಗಿದೆ. ಬಾಲಕನ ಸಾವಿನ ಬಗ್ಗೆ ವಿಷಯ ಹರಡುತ್ತಿದ್ದಂತೆ ತಮ್ಮ ಮಕ್ಕಳನ್ನು ಮನೆಗೆ ಕರೆದುಕೊಂಡು ಹೋಗಲು ಪೋಷಕರು ಶಾಲೆಯ ಬಳಿ ಧಾವಿಸಿದ್ದಾರೆ. ಶಾಲೆಯ ಪೀಠೋಪಕರಣಗಳನ್ನ ಎಸೆದಾಡಿದ್ದು, ಕಿಟಕಿ ಗಾಜುಗಳನ್ನ ಮುರಿದಿದ್ದಾರೆ. ಕೊನೆಗೆ ಪೊಲೀಸರು ಬಂದು ಪೋಷಕರನ್ನ ಕಟ್ಟಡದಿಂದ ತೆರವುಗೊಳಿಸಿದ್ದಾರೆ.

ಇಂದು ಬೆಳಿಗ್ಗೆ 8.45ರ ವೇಳೆಗೆ ಶಾಲೆಯ ಅಧಿಕಾರಿಯೊಬ್ಬರು ಟಾಯ್ಲೆಟ್‍ಗೆ ಹೋದಾಗ ಬಾಲಕನ ಶವ ಪತ್ತೆಯಾಗಿದೆ. ಬಾಲಕನ ತಂದೆ ವರುಣ್ ಠಾಕೂರ್ ಖಾಸಗಿ ಕಂಪೆನಿಯೊಂದರಲ್ಲಿ ಕ್ವಾಲಿಟಿ ಮ್ಯಾನೇಜರ್ ಆಗಿದ್ದು, ಮಗನನ್ನು ಶಾಲೆಗೆ ಬಿಟ್ಟು ಹೋದ ಸ್ವಲ್ಪ ಸಮಯದಲ್ಲೇ ಈ ಘಟನೆ ನಡೆದಿದೆ.

ನಾನು ಇಂದು ಬೆಳಿಗ್ಗೆ 7.55ರ ವೇಳೆಗೆ ಆತನನ್ನು ಡ್ರಾಪ್ ಮಾಡಿದೆ. ಅವನು ಖುಷಿಯಾಗಿದೇ ಇದ್ದ. ಬೆಳಿಗ್ಗೆ 9 ಗಂಟೆಗೆ ನನಗೆ ವಿಷಯ ತಿಳಿಯಿತು. ಆತನಿಗೆ ತೀವ್ರ ರಕ್ತಸ್ರಾವವಾಗುತ್ತಿದೆ. ಆಸ್ಪತ್ರೆಗೆ ಕರೆದುಕೊಂಡು ಹೋಗ್ತಿದ್ದೀವಿ ಎಂದು ಶಾಲೆಯವರು ಹೇಳಿದ್ರು. ನನಗೂ ಬರಲು ಹೇಳಿದ್ರು. ಅವರು ನನ್ನ ಮಗನನ್ನು ಸರಿಯಾಗಿ ನೋಡಿಕೊಳ್ಳಲಿಲ್ಲ. ಸರಿಯಾದ ಸಮಯಕ್ಕೆ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದರೆ ಬದುಕುಳಿಯುತ್ತಿದ್ದ ಎಂದು ಠಾಕುರ್ ಹೇಳಿದ್ದಾರೆ.

ಪೊಲೀಸರು ಶಾಲೆಯ ಸಿಬ್ಬಂದಿ, ಶಿಕ್ಷಕರು ಹಾಗೂ ಪ್ರದ್ಯುಮನ್‍ನ ಸ್ನೇಹಿತರನ್ನು ವಿಚಾರಣೆ ಮಾಡಿದ್ದಾರೆ. ಟಾಯ್ಲೆಟ್ ಹೊರಗಡೆ ಕಾರಿಡಾರ್‍ನಲ್ಲಿರುವ ಸಿಸಿಟಿವಿಯಿಂದ ಏನಾದ್ರೂ ಸುಳಿವು ಸಿಗಬಹುದು ಎಂದು ಪೊಲೀಸರು ಭರವಸೆ ಹೊಂದಿದ್ದಾರೆ.

ಎಲ್ಲಾ ರೀತಿಯಲ್ಲೂ ಈ ಪ್ರಕರಣದ ವಿಚಾರಣೆ ನಡೆಸುತ್ತಿದ್ದೇವೆ. ಶಾಲಾ ಆವರಣದಲ್ಲಿರುವ ಮಾರು 30 ಸಿಸಿಟಿವಿ ಕ್ಯಾಮೆರಾಗಳ ದೃಶ್ಯಾವಳಿಯನ್ನು ಪೊಲೀಸ್ ತಂಡ ಪರೀಶೀಲನೆ ಮಾಡುತ್ತಿದೆ ಎಂದು ಗುರಗಾಂವ್ ಪೊಲೀಸ್ ವಕ್ತಾರರಾದ ರವಿಂದರ್ ಕುಮಾರ್ ಹೇಳಿದ್ದಾರೆ.

ಕಳೆದ ವರ್ಷ ವಸಂತ್‍ಕುಂಜ್‍ನಲ್ಲಿ ಇದೇ ಶಾಲೆಯ ಮತ್ತೊಂದು ಶಾಖೆಯಲ್ಲಿ 1ನೇ ತರಗತಿಯ 6 ವರ್ಷದ ಬಾಲಕನ ಶವ ನೀರಿನ ಟ್ಯಾಂಕ್‍ನಲ್ಲಿ ಪತ್ತೆಯಾಗಿತ್ತು. ಈ ಬಗ್ಗೆ ಇನ್ನೂ ತನಿಖೆ ನಡೆಯುತ್ತಿದೆ.

Click to comment

Leave a Reply

Your email address will not be published. Required fields are marked *

www.publictv.in