ಭೋಪಾಲ್: ರಾಹುಲ್ ಗಾಂಧಿ ಅವರು ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿ 7 ವಾರ ಕಳೆದಿದೆ. ಆದರೂ ರಾಜೀನಾಮೆ ಅಂಗೀಕರಿಸಿದ ಅಧ್ಯಕ್ಷರ ಆಯ್ಕೆ ಮಾಡುತ್ತಿಲ್ಲ ಎಂದು ಮಾಜಿ ಸಂಸದ ಜ್ಯೋತಿರಾದಿತ್ಯ ಸಿಂಧ್ಯಾ ಪಕ್ಷದ ನಾಯಕರ ವಿರುದ್ಧವೇ ಕಿಡಿಕಾರಿದ್ದಾರೆ.
ಮಧ್ಯಪ್ರದೇಶದ ಭೋಪಾಲ್‍ನಲ್ಲಿ ನಡೆದ ಪಕ್ಷದ ಸಭೆಯಲ್ಲಿ ಮಾತನಾಡಿದ ಅವರು, ಎಐಸಿಸಿ ಅಧ್ಯಕ್ಷರು ಇಲ್ಲದ ಪರಿಣಾಮ ದೇಶಾದ್ಯಂತ ಪಕ್ಷ ಸಂಘಟನೆ ದುರ್ಬಲಗೊಳ್ಳುತ್ತಿದೆ. ಕೆಲವು ರಾಜ್ಯಗಳಲ್ಲಿ ಶಾಸಕರು ಕಾಂಗ್ರೆಸ್ ಪಕ್ಷದ ಚಿಹ್ನೆ ಮೇಲೆಯೇ ಗೆಲುವು ಸಾಧಿಸಿದ್ದಾರೆ. ಆದರೆ ಈಗ ಅವರು ಬೇರೆ ಪಕ್ಷಗಳಿಗೆ ಸಾಮೂಹಿಕವಾಗಿ ಪಕ್ಷಾಂತರಗೊಳ್ಳುತ್ತಿದ್ದಾರೆ. ಉದಾಹರಣೆಗೆ ತೆಲಂಗಾಣದಲ್ಲಿ 12 ಶಾಸಕರು ಆಡಳಿತ ಪಕ್ಷ ತೆಲಂಗಾಣ ರಾಷ್ಟ್ರ ಸಮಿತಿ (ಟಿಆರ್ ಎಸ್)ಗೆ ಹಾಗೂ ಗೋವಾದಲ್ಲಿ 10 ಕಾಂಗ್ರೆಸ್ ಶಾಸಕರು ಬಿಜೆಪಿಗೆ ಸೇರ್ಪಡೆಗೊಂಡಿದ್ದಾರೆ ಎಂದು ನಾಯಕರಿಗೆ ಮನವರಿಕೆ ಮಾಡಿಕೊಟ್ಟರು.
Advertisement
Advertisement
ಪಕ್ಷವನ್ನು ಬುಡಮಟ್ಟದಿಂದ ಬಲಪಡಿಸಿಕೊಂಡು, ಪುನಶ್ಚೇತನಗೊಳಿಸಬೇಕಿದೆ. ಹೀಗಾಗಿ ಕಾಂಗ್ರೆಸ್‍ಗೆ ಸಮರ್ಥ ಹಾಗೂ ಪ್ರಭಾವಿ ಅಧ್ಯಕ್ಷರನ್ನು ಆಯ್ಕೆ ಮಾಡಬೇಕು. ಈ ಮೂಲಕ ದೇಶಾದ್ಯಂತ ಪಕ್ಷವನ್ನು ಬಲಪಡಿಸಲು ಪ್ರಯತ್ನಿಸಬೇಕು ಎಂದು ತಿಳಿಸಿದರು.
Advertisement
ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ತಮ್ಮ ಹೆಸರನ್ನು ಪ್ರಸ್ತಾಪಿಸಿದ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಸಿಂಧ್ಯಾ ಅವರು, ನಾನು ಮೋದಿಜೀ ಅಲ್ಲ. ದೇಶದ ಜನತೆಯನ್ನು ವೃದ್ಧರು, ಯುವಕರು ಎಂದು ವಿಂಗಡಿಸಬೇಡಿ. ಅರ್ಹತೆಯು ವ್ಯಕ್ತಿಯ ಸಾಮರ್ಥ್ಯದ ಮೇಲೆ ನಿರ್ಧಾರವಾಗುತ್ತದೆಯೇ ಹೊರತು ವಯಸ್ಸಿನ ಮೇಲೆ ಅಲ್ಲ. ಕಾಲ ಕಳೆದಂತೆ ಕೆಲವು ಬದಲಾವಣೆಗಳು ಆಗಬೇಕಿದೆ. ನಾನು ಅಧ್ಯಕ್ಷ ಸ್ಥಾನಕ್ಕೆ ನೇಮಕವಾಗುವ ಕಾಲ ಮುಂದೆ ಬರುತ್ತದೆ ಎಂದು ಹೇಳಿದರು.
Advertisement
ಯುಪಿಎ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು 2017ರಲ್ಲಿ ಪುತ್ರ ರಾಹುಲ್ ಗಾಂಧಿಗೆ ಕಾಂಗ್ರೆಸ್ ಅಧ್ಯಕ್ಷ ಸ್ಥಾನವನ್ನು ವಹಿಸಿಕೊಟ್ಟಿದ್ದರು. ಆದರೆ 2019ರ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್‍ಗೆ ಭಾರೀ ಹಿನ್ನಡೆ ಉಂಟಾಯಿತು. ಅಷ್ಟೇ ಅಲ್ಲದೆ ಕಾಂಗ್ರೆಸ್‍ನ ಪ್ರಮುಖ ನಾಯಕರೇ ಸೋಲು ಕಂಡರು. ಸ್ವತಃ ರಾಹುಲ್ ಗಾಂಧಿ ಕಾಂಗ್ರೆಸ್ ಭದ್ರಕೋಟೆ, ಸ್ವಕ್ಷೇತ್ರ ಅಮೇಠಿಯಲ್ಲಿ ಸ್ಮೃತಿ ಇರಾನಿ ಅವರ ವಿರುದ್ಧ ಪರಾಭವಗೊಂಡರು. ಈ ಹಿನ್ನೆಲೆಯಲ್ಲಿ ರಾಹುಲ್ ಗಾಂಧಿ ಅವರು ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ 2019ರ ಮೇ 25ರಂದು ರಾಜೀನಾಮೆ ನೀಡಿದ್ದಾರೆ.
ರಾಹುಲ್ ಗಾಂಧಿ ಅವರು ಯಾವುದೇ ಕಾರಣಕ್ಕೂ ರಾಜೀನಾಮೆ ನೀಡಬಾರದು. ಈ ನಿರ್ಧಾರದಿಂದ ಹಿಂದೆ ಸರಿಯುವಂತೆ ಯುವಕ ನಾಯಕರು, ಮುಖಂಡರು ಒತ್ತಾಯಿಸಿದರೂ ರಾಹುಲ್ ಗಾಂಧಿ ಅವರು ರಾಜೀನಾಮೆ ನಿರ್ಧಾರದಿಂದ ಹಿಂದೆ ಸರಿಯುತ್ತಿಲ್ಲ. ಹೀಗಾಗಿ ರಾಜೀನಾಮೆಯನ್ನು ಅಂಗೀಕರಿಸದೇ ಪಕ್ಷದ ನಾಯಕರು ಹಾಗೆ ಇಟ್ಟಿದ್ದಾರೆ.
ಈ ಮಧ್ಯೆ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ 48 ವರ್ಷದ ಜ್ಯೋತಿರಾದಿತ್ಯ ಸಿಂಧ್ಯಾ ಅವರ ಹೆಸರನ್ನು ಅನೇಕ ಹಿರಿಯ ನಾಯಕರು ಪ್ರಸ್ತಾಪಿಸಿದ್ದರು. ಅಷ್ಟೇ ಅಲ್ಲದೆ ಮಧ್ಯಪ್ರದೇಶದಲ್ಲಿ ಭಿತ್ತಿಪತ್ರಗಳನ್ನು ಪ್ರದರ್ಶಿಸಿ ಜ್ಯೋತಿರಾದಿತ್ಯ ಸಿಂಧ್ಯಾ ಅವರನ್ನು ಅಧ್ಯಕ್ಷರನ್ನಾಗಿ ಮಾಡಬೇಕು ಎಂದು ಕಾಂಗ್ರೆಸ್ ಕಾರ್ಯಕರ್ತರು ಒತ್ತಾಯಿಸಿದ್ದಾರೆ. ಇದನ್ನು ತಳ್ಳಿ ಹಾಕಿದ್ದ ಜ್ಯೋತಿರಾದಿತ್ಯ ಸಿಂಧ್ಯಾ ಅವರು, ನಾನು ಕಾಂಗ್ರೆಸ್ ಅಧ್ಯಕ್ಷ ಸ್ಥಾನದ ಆಕಾಂಕ್ಷಿಯಲ್ಲ ಎಂದು ಹೇಳಿದ್ದರು.