ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ 7 ಮಂದಿ ನಾಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಮೂವರು ಪತ್ತೆಯಾಗಿದ್ದಾರೆ.
ಹೌದು. ಬಾಗಲಗುಂಟೆ ಪೊಲೀಸ್ ಠಾಣಾ ವ್ಯಾಪ್ತಿಯ ಮೂವರು ಮಕ್ಕಳು ಇಂದು ಪತ್ತೆಯಾಗಿದ್ದಾರೆ. ಪರಿಕ್ಷಿತ್, ಕಿರಣ್ ಹಾಗೂ ನಂದನ್ ಪತ್ತೆಯಾದ ಮಕ್ಕಳು.
Advertisement
Advertisement
ಈ ಮೂವರು ಮಕ್ಕಳು ಕಬ್ಬಡ್ಡಿಯಲ್ಲಿ ಸಾಧನೆ ಮಾಡೋದಾಗಿ ಪತ್ರ ಬರೆದಿಟ್ಟು ಮನೆ ತೊರೆದಿದ್ದರು. ಇದೀಗ ಚಿಂದಿ ಆಯುವ ವ್ಯಕ್ತಿಯೊಬ್ಬರು ನೀಡಿದ ದೂರಿನನ್ವಯ ಸಿಸಿಟಿವಿ ಹುಡುಕಾಡಿ ಪೊಲೀಸರು ಮಕ್ಕಳನ್ನ ಪತ್ತೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ. ಇಂದು ಬೆಳಗ್ಗೆ 7.30 ರ ಸಮಯದಲ್ಲಿ ಈ ಮೂವರು ಆನಂದ್ ರಾವ್ ಸರ್ಕಲ್ ಬಳಿ ಕಾಣಿಸಿಕೊಂಡಿದ್ದರು. ಕೂಡಲೇ ಬಾಗಲಗುಂಟೆ ಪೊಲೀದರಿಗೆ ಮಾಹಿತಿ ರವಾನೆ ಮಾಡಲಾಗಿತ್ತು. ಸದ್ಯ ಮಕ್ಕಳು ಉಪ್ಪಾರಪೇಟೆ ಪೊಲೀಸರ ರಕ್ಷಣೆಯಲ್ಲಿದ್ದು, ಬಾಗಲಗುಂಟೆ ಪೊಲೀಸರು ಬಂದ ತಕ್ಷಣ ಮಕ್ಕಳನ್ನ ಒಪ್ಪಿಸಲಿದ್ದಾರೆ.
Advertisement
Advertisement
ಶನಿವಾರ ಮನೆ ಬಿಟ್ಟ ನಂತರ ಮಕ್ಕಳು ಕೆಂಗೇರಿಗೆ ಬಂದಿದ್ದಾರೆ. ಕೆಂಗೇರಿಯಿಂದ ಮೈಸೂರಿಗೆ ಹೋಗಿದ್ದಾರೆ. ಮೈಸೂರಿನಲ್ಲಿ ಒಂದು ದಿನ ಕಳೆದಿರುವ ಮಕ್ಕಳು, ಮೈಸೂರು ದಸರಾದಲ್ಲಿ ನಡೆಯುತ್ತಿದ್ದ ದೇಶೀಯ ಕ್ರೀಡೆಗಳನ್ನು ನೋಡಿದ್ದಾರೆ. ನಿನ್ನೆ ರಾತ್ರಿ ಮೈಸೂರಿಂದ ಮಕ್ಕಳು ಬೆಂಗಳೂರಿಗೆ ಬಂದಿದ್ದಾರೆ. ಮೆಜೆಸ್ಟಿಕ್ ನಿಂದ ಕಂಠೀರವ ಸ್ಟೇಡಿಯಂ ವರೆಗೆ ಜಾಗಿಂಗ್ ಹೋಗಿದ್ದ ಮಕ್ಕಳು, ಕಂಠೀರವ ಸ್ಟೇಡಿಯಂ ಬಳಿ ಪ್ರಾಕ್ಟೀಸ್ ಗೇಮ್ ಗಳನ್ನ ನೋಡ್ಕೊಂಡು ಆನಂದರಾವ್ ಸರ್ಕಲ್ ಕಡೆ ವಾಪಸ್ಸಾಗಿದ್ದರು. ಈ ವೇಳೆ ಮಕ್ಕಳು ಚಿಂದಿ ಆಯುವ ವ್ಯಕ್ತಿ ಮುಖಾಂತರ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾರೆ. ಇದನ್ನೂ ಓದಿ: ಬೆಂಗ್ಳೂರಲ್ಲಿ 7 ಮಕ್ಕಳ ನಾಪತ್ತೆ ಪ್ರಕರಣ – 4 ತಂಡ ಮಾಡಿ ಪತ್ತೆ ಕಾರ್ಯ
ಶುಕ್ರವಾರ ಶಾಲೆಯಲ್ಲಿಯೇ ಮನೆ ಬಿಡೋ ನಿರ್ಧಾರ ಮಾಡಿದ್ದ ಮಕ್ಕಳು, ಅದರಂತೆ ಶನಿವಾರ ಬೆಳಗ್ಗೆ 5.30 ಕ್ಕೆ ಮನೆಯಿಂದ ಹೊರಟಿದ್ದಾರೆ. ಜಾಗಿಂಗ್ ಹೋಗಿ ಬರೋದಾಗಿ ಬಂದಿದ್ದ ಮೂವರು ಮಕ್ಕಳು, ಮನೆಯಿಂದ ಬರುತ್ತಾ ಮೂವರು ತಲಾ ಒಂದೊಂದು ಸಾವಿರ ತಂದಿದ್ದಾರೆ. ಮೊದಲು ಮಂಗಳೂರಿಗೆ ಹೋಗೋಣ ಎಂದು ಪ್ಲಾನ್ ಮಾಡಿಕೊಂಡಿದ್ದಾರೆ. ನಂತರ ಪ್ಲಾನ್ ಬದಲಾಯಿಸಿ ಮೈಸೂರು ಬಸ್ ಹತ್ತಿದ್ದಾರೆ. ಮೈಸೂರು ಬಸ್ ಸ್ಟಾಪ್‍ನಲ್ಲಿ ಶನಿವಾರ ಇಡೀ ದಿನ ಉಳಿದುಕೊಂಡಿದ್ದಾರೆ. ಮೈಸೂರಿಗೆ ತೆರಳಿ ದಸರಾ ಹಬ್ಬ ನೋಡಿಕೊಂಡು ಬಂದಿದ್ದಾರೆ. ಭಾನುವಾರ ಕೂಡ ಮೈಸೂರಿನಲ್ಲಿ ಕಾಲ ಕಳೆದಿದ್ದಾರೆ. ಮತ್ತೆ ಭಾನುವಾರ ರಾತ್ರಿ ಮೈಸೂರಿನಿಂದ ಟ್ರೈನ್ ಹತ್ತಿದ್ದಾರೆ. ಬೆಳಗ್ಗೆ ಆನಂದ್ ರಾವ್ ಸರ್ಕಲ್ ಬಳಿ ಬಂದಿದ್ದು, ಪೇಪರ್ ಆಯುವ ವ್ಯಕ್ತಿ ಬಳಿ ಕೆಲಸ ಕೇಳಿದ್ದಾರೆ. ಮಕ್ಕಳ ನಾಪತ್ತೆ ಪ್ರಕರಣ ವಿಚಾರ ತಿಳಿದಿದ್ದ ಪೇಪರ್ ಆಯುವ ವ್ಯಕ್ತಿ ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿ ಮಕ್ಕಳ ರಕ್ಷಣೆ ಮಾಡಿದ್ದಾರೆ.