ರಾಮನಗರ: ಜಿಲ್ಲೆಯ ಕನಕಪುರ ತಾಲೂಕಿನ ಕೋಡಿಹಳ್ಳಿ ಹೋಬಳಿಯ ನಿರ್ಜನ ಪ್ರದೇಶವೊಂದರ ಬಳಿ ಏಳು ತಲೆಯ(ಹೆಡೆ) ಸರ್ಪದ ಪೊರೆ ಪತ್ತೆಯಾಗಿದ್ದು, ಇದು ದೈವಸ್ವರೂಪವೆಂದು ನಂಬಿರುವ ಜನರು ಹಾವಿನ ಪೊರೆಗೆ ಪೂಜೆ ಸಲ್ಲಿಸಿದ್ದಾರೆ.
ಕೋಡಿಹಳ್ಳಿ ಹೋಬಳಿಯ ಮರಿಗೌಡನ ದೊಡ್ಡಿ ಬಳಿ ಏಳು ಹೆಡೆಯ ಸರ್ಪದ ಪೊರೆ ಪತ್ತೆಯಾಗಿದೆ. ನಿರ್ಜನ ಪ್ರದೇಶದಲ್ಲಿ ಕಾಣಿಸಿಕೊಂಡ ಏಳು ತಲೆಯ ಹಾವಿನ ಪೊರೆಯನ್ನು ಕಂಡ ಸಾರ್ವಜನಿಕರು ದೈವಸ್ವರೂಪವೆಂದು ನಂಬಿ ಹೂ ಹಣ್ಣು, ಅರಿಶಿಣ ಕುಂಕುಮ ಹಾಕಿ ಪೂಜೆ ಸಲ್ಲಿಸಿದ್ದಾರೆ. ಸಾಮಾನ್ಯವಾಗಿ ಒಂದು ತಲೆ ಹಾವು ಕಾಣಸಿಗುತ್ತದೆ. ಆದ್ರೆ ಏಳು ತಲೆಯಿರುವ ಸರ್ಪದ ಪೊರೆ ಪತ್ತೆಯಾಗಿರುವುದು ಜನರಲ್ಲಿ ಅಚ್ಚರಿ ಮೂಡಿಸಿದೆ.
ಈ ಅಪರೂಪದ ಹಾವಿನ ಪೊರೆಯನ್ನು ನೋಡಲು ಅಕ್ಕಪಕ್ಕದ ಗ್ರಾಮಸ್ಥರು ಸ್ಥಳಕ್ಕೆ ಬರುತ್ತಿದ್ದಾರೆ. ಅಲ್ಲದೆ ಈ ಹಾವಿನ ಪೊರೆಯನ್ನು ದೈವಸ್ವರೂಪವೆಂದೇ ನಂಬಿರುವ ಗ್ರಾಮಸ್ಥರು ಪೊರೆ ಪತ್ತೆಯಾಗಿರುವ ಸ್ಥಳದಲ್ಲೇ ನಾಗದೇವಾಲಯ ಕಟ್ಟುವ ಬಯಕೆಯನ್ನೂ ಕೂಡ ವ್ಯಕ್ತಪಡಿಸುತ್ತಿದ್ದಾರೆ.
ಜೊತೆಗೆ ಪೊರೆ ಪತ್ತೆಯಾಗಿರುವ ಅಕ್ಕಪಕ್ಕದಲ್ಲಿಯೇ ಏಳು ಹೆಡೆಯ ಹಾವು ಇರಬಹುದು ಎಂದು ಊಹಿಸಲಾಗಿದ್ದು, ಇನ್ನೇನಾದರೂ ಪೂರೆ ಅಥವಾ ಹಾವೇ ಸಿಗಬಹುದು ಎಂದು ಗ್ರಾಮಸ್ಥರು ಶೋಧಕಾರ್ಯ ನಡೆಸುತ್ತಿದ್ದಾರೆ. ಅಲ್ಲದೆ ಈ ಅಪರೂಪದ ಏಳು ಹೆಡೆ ಸರ್ಪದ ಫೋಟೋ ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿದೆ.