ಕಾರವಾರ: ಅಪಾರ್ಟ್ಮೆಂಟ್ ಬಳಿ ಕಾಣಿಸಿಕೊಂಡಿದ್ದ ಬೃಹತ್ ಗಾತ್ರದ ನಾಗರ ಹಾವನ್ನು ಹಿಡಿದು ರಕ್ಷಿಸಿದ ಘಟನೆ ಉತ್ತರ ಕನ್ನಡ ಜಿಲ್ಲೆಯ ಕಾರವಾರ ನಗರದಲ್ಲಿ ನಡೆದಿದೆ.
ನಗರದ ಭಾಗ್ಯೋದಯ ಅಪಾರ್ಟ್ಮೆಂಟ್ ಬಳಿ ಸುಮಾರು 7 ಅಡಿ ಉದ್ದದ ನಾಗರಹಾವು ಕಾಣಿಸಿಕೊಂಡಿತ್ತು. ಈ ವೇಳೆ ಹಾವನ್ನು ನೋಡುತ್ತಿದ್ದಂತೆ ಕೆಲವು ಮಹಿಳೆಯರು ಕೈ ಮುಗಿದು ನಮಸ್ಕಾರ ಮಾಡಿದ್ದಾರೆ.
ನಾಗರಹಾವನ್ನು ನೋಡಿದ ಸ್ಥಳೀಯರು ತಕ್ಷಣ ಈ ವಿಷಯವನ್ನು ಉರಗ ಪ್ರೇಮಿ ಮಹೇಶ್ ನಾಯ್ಕ್ ಗೆ ತಿಳಿಸಿದ್ದರು. ಈ ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಆಗಮಿಸಿದ ಮಹೇಶ್ ನಾಯ್ಕ ನಾಗರ ಹಾವನ್ನು ಹಿಡಿದು ರಕ್ಷಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಸೆರೆ ಸಿಕ್ಕ ನಾಗರ ಹಾವನ್ನು ಸ್ಥಳೀಯ ಅರಣ್ಯ ಪ್ರದೇಶಕ್ಕೆ ಬಿಡಲಾಗಿದೆ. ಹಾವು ಕಾಣಿಸಿಕೊಂಡಿದ್ದರಿಂದ ಅಪಾರ್ಟ್ಮೆಂಟ್ ನಿವಾಸಿಗಳಲ್ಲಿ ಆತಂಕ ಎದುರಾಗಿತ್ತು. ಸದ್ಯ ಹಾವನ್ನು ಹಿಡಿದ ನಂತರ ಸ್ಥಳೀಯರು ನೆಮ್ಮದಿಯ ನಿಟ್ಟುಸಿರು ಬಿಟ್ಟರು. ಮಹೇಶ್ ಹಾವನ್ನು ಹಿಡಿಯುತ್ತಿದ್ದ ವೇಳೆ ಸ್ಥಳೀಯರು ತಮ್ಮ ಮೊಬೈಲಿನಲ್ಲಿ ಫೋಟೋ ಹಾಗೂ ವಿಡಿಯೋ ಮಾಡಿದ್ದಾರೆ.