Connect with us

Uncategorized

ಹಳಿ ತಪ್ಪಿದ ರೈಲು – 7 ಸಾವು, 30ಕ್ಕೂ ಹೆಚ್ಚು ಮಂದಿಗೆ ಗಾಯ

Published

on

ಲಕ್ನೋ: ಉತ್ತರಪ್ರದೇಶದ ರಾಯ್ ಬರೇಲಿ ಬಳಿ ರೈಲ್ವೇ ನಿಲ್ದಾಣದ ಬಳಿ ಫರಕ್ಕಾ ಎಕ್ಸ್ ಪ್ರೆಸ್ ರೈಲು ಹಳಿ ತಪ್ಪಿದ ಪರಿಣಾಮ 7 ಮಂದಿ ಮೃತಪಟ್ಟಿದ್ದು, ಸುಮಾರು 30ಕ್ಕೂ ಹೆಚ್ಚು ಮಂದಿ ಗಾಯಗೊಂಡಿರುವ ಘಟನೆ ನಡೆದಿದೆ.

ಇಂದು ಬೆಳಗ್ಗೆ 8 ಬೋಗಿ ಇದ್ದ ಫರಕ್ಕಾ ಎಕ್ಸ್ ಪ್ರೆಸ್ ರೈಲು ರಾಯ್ ಬರೇಲಿ ಹರ್ಚದ್ಪುರ್ ರೈಲ್ವೇ ನಿಲ್ದಾಣದ ಬಳಿ ಬಂದಿತ್ತು. ಆದರೆ ಈ ವೇಳೆ ರೈಲು ಹಳಿ ತಪ್ಪಿ ಅನಾಹುತ ಸಂಭವಿಸಿದೆ. ಈ ರೈಲು ಪಶ್ಚಿಮ ಬಂಗಾಳದ ಮಾಲ್ಡಾ ಪಟ್ಟಣದಿಂದ ದೆಹಲಿಗೆ ತೆರಳುತ್ತಿತ್ತು ಎಂದು ರೈಲ್ವೆ ವ್ಯವಸ್ಥಾಪಕ ಸತೀಶ್ ಕುಮಾರ್ ಹೇಳಿದರು.

ಘಟನೆಯಲ್ಲಿ 7 ಮಂದಿ ಪ್ರಯಾಣಿಕರು ಮೃತಪಟ್ಟಿದ್ದು, 30ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ. ಅವರನ್ನು ಕೂಡಲೇ ಸ್ಥಳೀಯ ಆಸ್ಪತ್ರೆಗಳಿಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಇತ್ತ ಘಟನೆ ಬಗ್ಗೆ ಮಾಹಿತಿ ತಿಳಿಯುತ್ತಿದ್ದಂತೆಯೇ ಲಕ್ನೋ ಹಾಗೂ ವಾರಣಾಸಿ ಅಧಿಕಾರಿಗಳು ಸ್ಥಳಕ್ಕಾಗಮಿಸಿ ರಕ್ಷಣಾ ಕಾರ್ಯಾಚರಣೆ ನಡೆಸುತ್ತಿದ್ದಾರೆ.

ರೈಲ್ವೇ ಸಚಿವ ಪಿಯೂಷ್ ಗೋಯಲ್ ಅವರು, ಈ ಘಟನೆಯ ಬಗ್ಗೆ ತನಿಖೆ ಮಾಡುವಂತೆ ಆದೇಶಿಸಿದ್ದಾರೆ. ಈ ರೈಲು ಅಪಘಾತದಿಂದ ಆ ಮಾರ್ಗದ ಎಲ್ಲ ರೈಲುಗಳನ್ನು ನಿರ್ಬಂಧಿಸಲಾಗಿದ್ದು, ಸಾವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇದೆ ಎಂದು ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ.

ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯಾನಾಥ್ ಅವರು ಈ ಘಟನೆ ಕುರಿತು ಮಾಹಿತಿ ಪಡೆದುಕೊಂಡಿದ್ದಾರೆ. ಅಷ್ಟೇ ಅಲ್ಲದೇ ಆರೋಗ್ಯ ಇಲಾಖೆ, ಎನ್‍ಡಿಆರ್‍ಎಫ್ ಪಡೆ ಹಾಗೂ ಪೊಲೀಸ್ ಇಲಾಖೆಯವರಿಗೆ ರಕ್ಷಣಾ ಕಾರ್ಯಾಚರಣೆಗೆ ಅಗತ್ಯವಾದ ನೆರವು ನೀಡುವಂತೆ ಸೂಚಿಸಿದ್ದಾರೆ.

ಯೋಗಿ ಆದಿತ್ಯಾನಾಥ್ ಅವರು ಈ ಘಟನೆಯಲ್ಲಿ ಮೃತಪಟ್ಟವರಿಗೆ ಸಂತಾಪ ಸೂಚಿಸಿ, ಅವರ ಕುಟುಂಬದವರಿಗೆ 2 ಲಕ್ಷ ರೂ. ಪರಿಹಾರ ಧನ ಮತ್ತು ಗಂಭೀರವಾಗಿ ಗಾಯಗೊಂಡವರ ಚಿಕಿತ್ಸೆಗಾಗಿ 50,000 ರೂ. ಗಳನ್ನು ಫೋಷಣೆ ಮಾಡಿದ್ದಾರೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Click to comment

Leave a Reply

Your email address will not be published. Required fields are marked *