ಕೆ.ಆರ್‌. ಪುರಂ ತಹಶೀಲ್ದಾರ್‌ ಅಜಿತ್‌ ರೈಗೆ 7 ದಿನ ಪೊಲೀಸ್‌ ಕಸ್ಟಡಿ

Public TV
1 Min Read
k.r. puram tahsildar ajit rai

ಬೆಂಗಳೂರು: ಆದಾಯಕ್ಕಿಂತ ಹೆಚ್ಚು ಆಸ್ತಿ ಗಳಿಕೆ ಪ್ರಕರಣದಲ್ಲಿ ಲೋಕಾಯುಕ್ತ ಪೊಲೀಸರಿಂದ ಬಂಧನಕ್ಕೊಳಗಾಗಿರುವ ಕೆ.ಆರ್‌. ಪುರಂ ತಹಶೀಲ್ದಾರ್‌ (K.R. Puram Tahsildar) ಅಜಿತ್‌ ರೈನನ್ನು (Ajit Rai) 7 ದಿನ ಪೊಲೀಸ್‌ ಕಸ್ಟಡಿಗೆ (Police Custody) ವಹಿಸಲಾಗಿದೆ.

ಲೋಕಾಯುಕ್ತ ವಿಶೇಷ ನ್ಯಾಯಾಲಯದ ನ್ಯಾ. ವಿ.ಶ್ರೀಕಾಂತ್‌ ಅವರು ಈ ಆದೇಶ ಹೊರಡಿಸಿದ್ದಾರೆ. ಅಲ್ಲದೇ ಜುಲೈ 6 ಕ್ಕೆ ನ್ಯಾಯಾಲಯದ ಮುಂದೆ ಹಾಜರುಪಡಿಸಲು ಸೂಚನೆ ನೀಡಿದ್ದಾರೆ. ಇದನ್ನೂ ಓದಿ: ಅಕ್ರಮ ಆಸ್ತಿ ಕೇಸ್‌; ಕೆ.ಆರ್‌. ಪುರಂ ತಹಶೀಲ್ದಾರ್‌ ಸಹೋದರ ಸೇರಿ ನಾಲ್ವರಿಗೆ ಲೋಕಾಯುಕ್ತ ನೋಟಿಸ್‌

ajit rai

ಲೋಕಾಯುಕ್ತ ಪೊಲೀಸರು 10 ದಿನಗಳ ಕಸ್ಟಡಿಗೆ ಕೇಳಿದ್ದರು. ಆದರೆ ನ್ಯಾಯಾಲಯ 7 ದಿನ ಪೊಲೀಸ್‌ ಕಸ್ಟಡಿಗೆ ಅವಕಾಶ ನೀಡಿದೆ. ಅಜಿತ್‌ ರೈ ಪುತ್ತೂರಿನಲ್ಲೂ ಆಸ್ತಿ ಮಾಡಿದ್ದು, ಸ್ವತಃ ಊರಿಗೆ ಕರೆದುಕೊಂಡು ಹೋಗಿ ತನಿಖೆ ನಡೆಸಲು ಪೊಲೀಸರಿಗೆ ನ್ಯಾಯಾಲಯ ಅವಕಾಶ ನೀಡಿದೆ.

ಭ್ರಷ್ಟಾಚಾರ ಆರೋಪದಡಿ ಖಚಿತ ಮಾಹಿತಿ ಮೇರೆಗೆ ತಹಶೀಲ್ದಾರ್‌ ಅಜಿತ್‌ ರೈ ಮನೆ ಮೇಲೆ ಬುಧವಾರ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿದ್ದರು. ಸಹಕಾರನಗರದ ನಿವಾಸ ಸೇರಿ 12 ಕಡೆ ದಾಳಿ ಮಾಡಿ ಪರಿಶೀಲನೆ ಮಾಡಿದ್ದರು. ಇದನ್ನೂ ಓದಿ: ಬಂಧಿತ ತಹಶೀಲ್ದಾರ್‌ ಅಜಿತ್‌ ರೈ ವಾಚ್‌ ಕಲೆಕ್ಷನ್‌ ನೋಡಿ ದಂಗಾದ ಲೋಕಾ ಅಧಿಕಾರಿಗಳು

ಪರಿಶೀಲನೆ ವೇಳೆ 40 ಲಕ್ಷ ರೂ. ನಗದು, ಕೋಟ್ಯಂತರ ಮೌಲ್ಯದ ಭೂ ದಾಖಲಾತಿ ಪತ್ರಗಳು, ದುಬಾರಿ ಬೆಲೆಯ ಕಾರು ಖರೀದಿಸಿದ ರಶೀದಿಗಳು, ದೇಶ-ವಿದೇಶಿ ಬ್ರ್ಯಾಂಡ್‌ನ ಮದ್ಯ ಪತ್ತೆಯಾಗಿತ್ತು. ಸತತ 30 ಗಂಟೆಗಳ ಪರಿಶೀಲನೆ ವೇಳೆ ಅಕ್ರಮ ಆಸ್ತಿ ಗಳಿಕೆ ಮಾಡಿರುವುದು ಕಂಡುಬಂದಿತ್ತು. ಈ ಹಿನ್ನೆಲೆಯಲ್ಲಿ ತಹಶೀಲ್ದಾರ್ ಅಜಿತ್ ರೈನನ್ನು ಲೋಕಾಯುಕ್ತ ಪೊಲೀಸರು ಬಂಧಿಸಿದ್ದರು.

Web Stories

Share This Article