ಬೆಂಗಳೂರು: ನಗರದಲ್ಲಿ ನಡೆದಿದ್ದ 7.11 ಕೋಟಿ ರೂ. ದರೋಡೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತಿಬ್ಬರನ್ನು ಪೊಲೀಸರು ಅರೆಸ್ಟ್ ಮಾಡಿದ್ದು, ಈ ಮೂಲಕ ಪ್ರಕರಣದ ಎಲ್ಲಾ ಆರೋಪಿಗಳು ಲಾಕ್ ಆಗಿದ್ದಾರೆ.
ದಿನೇಶ್ ಮತ್ತು ಜಿನೇಶ್ ಬಂಧಿತ ಆರೋಪಿಗಳು. ಭಾನುವಾರ (ನ.23) ರಾತ್ರಿ ಚೆನ್ನೈನಲ್ಲಿ ಬಂಧಿಸಲಾಗಿದೆ. ಇದಕ್ಕೂ ಮುನ್ನ ರಾಕೇಶ್, ರವಿ, ಗೋವಿಂದಪುರ ಪೊಲೀಸ್ ಠಾಣೆಯ ಕಾನ್ಸ್ಟೇಬಲ್ ಅಣ್ಣಪ್ಪ ನಾಯ್ಕ್, ಕ್ಸೇವಿಯರ್, ಗೋಪಿ, ನವೀನ ಸೇರಿ ಒಟ್ಟು ಏಳು ದರೋಡೆಕೋರರನ್ನ ಪೊಲೀಸರು ಬಂಧಿಸಿದ್ದರು. ಇದನ್ನೂ ಓದಿ: ಬೆಂಗಳೂರಿನಲ್ಲಿ 7 ಕೋಟಿ ದರೋಡೆ ಕೇಸ್ – ಆರೋಪಿಗಳು ಖರ್ಚು ಮಾಡಿದ್ದೇ ಕೇವಲ 1 ಲಕ್ಷ!
ಎಟಿಎಂ ಹಣ ದರೋಡೆ ಗ್ಯಾಂಗ್‌ನಲ್ಲಿದ್ದ ದಿನೇಶ್ ಮತ್ತು ಜಿನೇಶ್ ಘಟನೆ ಬಳಿಕ ಚಿತ್ತೂರು-ವೇಲೂರು ಮಾರ್ಗವಾಗಿ ಚೆನ್ನೈ ಸೇರಿದ್ದರು. ಅಲ್ಲದೇ ಈ ಇಬ್ಬರು ಆರೋಪಿಗಳ ಬಳಿ ಉಳಿದ 82 ಲಕ್ಷ ರೂ. ಹಣ ಇದೆ ಎನ್ನುವ ಶಂಕೆ ಕೂಡ ವ್ಯಕ್ತವಾಗಿತ್ತು. ಆದ್ದರಿಂದ ಇಬ್ಬರ ಪತ್ತೆಗೆ ಪೊಲೀಸರು ಕೂಡ ವೇಲೂರು, ಚಿತ್ತೂರು ವ್ಯಾಪ್ತಿಯಲ್ಲಿ ತೀವ್ರ ಶೋಧ ನಡೆಸಿದ್ದರು.
ಈ ವೇಳೆ ವಿಶೇಷ ತಂಡಗಳು ಭಾನುವಾರ ರಾತ್ರಿ ಚೆನ್ನೈ ಬಳಿ ಇಬ್ಬರು ಆರೋಪಿಗಳನ್ನ ಬಂಧಿಸಿದ್ದಾರೆ. ಆದರೆ ಬಂಧಿತರ ಬಳಿ ನಯಾಪೈಸೆ ಹಣ ಪತ್ತೆಯಾಗಿಲ್ಲ. ಪೊಲೀಸರ ವಿಚಾರಣೆ ವೇಳೆ ನಮ್ಮ ಬಳಿ ಹಣ ಇಲ್ಲ ಎಂದು ಸುಳ್ಳು ಹೇಳಿದ್ದಾರೆ ಎನ್ನಲಾಗಿದೆ. ಹೀಗಾಗಿ ಬಂಧಿತ ಆರೋಪಿಗಳನ್ನು ಒಟ್ಟಿಗೆ ಸೇರಿ, ಬಾಯಿಬಿಡಿಸಲು ತನಿಖಾ ತಂಡ ಮುಂದಾಗಿದೆ.
ಇನ್ನೂ ಪ್ರಕರಣದಲ್ಲಿ ಈವರೆಗೆ 6.29 ಕೋಟಿ ರೂ. ಜಪ್ತಿಯಾಗಿದೆ. ಆದರೆ ಉಳಿದ 82 ಲಕ್ಷ ರೂ. ಬಗ್ಗೆ ನಿಖರ ಸುಳಿವು ಪತ್ತೆಯಾಗಿಲ್ಲ. 82 ಲಕ್ಷ ರೂ.ಯಲ್ಲಿ 40 ಲಕ್ಷ ರೂ. ಪರಿಚಯಸ್ಥರಿಗೆ ಕೊಟ್ಟಿರೋ ಬಗ್ಗೆ ಮಾಹಿತಿ ಸಿಕ್ಕಿದ್ದು, ಒಂದಷ್ಟು ಹಣ ಖರ್ಚು ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ಸದ್ಯ ಈ ಹಣ ಪತ್ತೆಗೆ ಬ್ಯಾಂಕ್‌ನಿಂದ ಸೀರಿಯಲ್ ನಂಬರ್ ಪಡೆದು ಪೊಲೀಸರು ತನಿಖೆ ಕೈಗೊಂಡಿದ್ದಾರೆ. ಅಲ್ಲದೇ ಹಣದ ಜೊತೆಗೆ ಎಟಿಎಂ ವಾಹನದ ಸಿಸಿಟಿವಿ ಡಿವಿಆರ್ ಕೂಡ ಪತ್ತೆಯಾಗಿಲ್ಲ. ದರೋಡೆಕೋರರು ಡಿವಿಆರ್ ಅನ್ನು ಚಿತ್ತೂರು ಕಾಡಿನಲ್ಲಿ ಎಸೆದು ಹೋಗಿರುವ ಶಂಕೆ ಇದೆ. ಡಿವಿಆರ್ ಪ್ರಕರಣದ ಪ್ರಮುಖ ಸಾಕ್ಷಿಯಾಗಿದ್ದು, ಪೊಲೀಸರು ಹುಡುಕಾಟ ನಡೆಸಿದ್ದಾರೆ.ಇದನ್ನೂ ಓದಿ: 7 ಕೋಟಿ ದರೋಡೆ ಕೇಸ್ – ಕಾನ್ಸ್ಟೇಬಲ್ ಅಣ್ಣಪ್ಪ ನಾಯಕ್ ಸಸ್ಪೆಂಡ್
