ನವದೆಹಲಿ: 7 ವರ್ಷದ ಬಾಲಕನಿಗೆ 17 ವರ್ಷದ ಹುಡುಗ ಲೈಂಗಿಕ ಕಿರುಕುಳ ನೀಡಿರುವ ಆಘಾತಕಾರಿ ಘಟನೆ ದಕ್ಷಿಣ ದೆಹಲಿಯ ಮದಂಗಿರ್ ನಲ್ಲಿ ನಡೆದಿದೆ.
ನವೆಂಬರ್ 27ರಂದು ಘಟನೆ ನಡೆದಿದ್ದು, ಲೈಂಗಿಕ ಕಿರುಕುಳ ನೀಡಿದ್ದಲ್ಲದೆ ಬಾಲಕನ ಮೇಲೆ ಹುಡುಗ ಹಲ್ಲೆ ಮಾಡಿದ್ದಾನೆ. ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ವಿವಾಹ ಸಮಾರಂಭದ ವೇಳೆ ಯುವಕ ಮತ್ತೊಬ್ಬ ಬಾಲಕನ ಮೇಲೆ ಹಲ್ಲೆ ನಡೆಸಿರುವ ಕುರಿತು ಅಂಬೇಡ್ಕರ್ ನಗರ ಪೊಲಿಸರಿಗೆ ಕರೆ ಬಂದಿದ್ದು, ಬಳಿಕ ಪೋಷಕರು ಬಾಲಕನನ್ನು ಮನೆಗೆ ಕರೆ ತಂದಿದ್ದಾರೆ. ಪೊಲೀಸರು ಯಾವುದೇ ರೀತಿಯ ಕ್ರಮ ಕೈಗೊಂಡಿಲ್ಲ ಎಂದು ಪೋಷಕರು ದೂರಿದ್ದಾರೆ.
ಕೇವಲ ಹಲ್ಲೆ ನಡೆಸಿರುವುದು ಮಾತ್ರವಲ್ಲ ಲೈಂಗಿಕ ಕಿರುಕುಳ ನೀಡಿದ್ದಾನೆ ಎಂದು ಮೂರು ದಿನಗಳ ಬಳಿಕ ಬಾಲಕ ಪೋಷಕರಿಗೆ ತಿಳಿಸಿದ್ದಾನೆ. ಎಚ್ಚೆತ್ತ ಪೋಷಕರು ಪೊಲೀಸ್ ಠಾಣೆಗೆ ತೆರಳಿ ದೂರು ನೀಡಿದ್ದಾರೆ. ಮಂಗಳವಾರ ಬಾಲಕನನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗಿದ್ದು, ಆರೋಪಿ ವಿರುದ್ಧ ಐಪಿಸಿ ಸೆಕ್ಷನ್ 377(ಅಸ್ವಾಭಾವಿಕ ಲೈಂಗಿಕತೆ) ಹಾಗೂ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ.