– ಕೆಲಸ ಕೊಡಿಸುವುದಾಗಿ ನಂಬಿಸಿ ಮಾರಾಟ
– ಕೊನೆಗೆ ಬುದ್ಧಿಮಾಂದ್ಯನೊಂದಿಗೆ ವಿವಾಹ
ಭೋಪಾಲ್: 18 ವರ್ಷದ ಯುವತಿಯನ್ನು 7 ತಿಂಗಳಲ್ಲಿ 7 ಬಾರಿ ಮಾರಾಟ ಮಾಡಿರುವ ಆಘಾತಕಾರಿ ಘಟನೆ ಮಧ್ಯ ಪ್ರದೇಶದಲ್ಲಿ ನಡೆದಿದೆ.
ಛತ್ತಿಸ್‍ಗಡದ 18 ವರ್ಷದ ಬಾಲಕಿಯನ್ನು ಮಧ್ಯ ಪ್ರದೇಶ ಹಾಗೂ ಉತ್ತರ ಪ್ರದೇಶಗಳಲ್ಲಿ 7 ತಿಂಗಳಲ್ಲಿ ಬರೋಬ್ಬರಿ 7 ಬಾರಿ ಮಾರಾಟ ಮಾಡಲಾಗಿದೆ. ಕಳೆದ ವರ್ಷ ಘಟನೆ ನಡೆದಿದ್ದು, ಮನನೊಂದ ಯುವತಿ 2019ರ ಸೆಪ್ಟೆಂಬರ್‍ನಲ್ಲಿ ಆತ್ಮಹತ್ಯೆ ಮಾಡಿಕೊಂಡು ಸಾವನ್ನಪ್ಪಿದ್ದಾಳೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಎಂಟು ಆರೋಪಿಗಳನ್ನು ಬಂಧಿಸಲಾಗಿದೆ. ಛತ್ತಿಸ್‍ಗಡ, ಮಧ್ಯಪ್ರದೇಶ ಹಾಗೂ ಉತ್ತರ ಪ್ರದೇಶ ಮೂರು ರಾಜ್ಯದ ಪೊಲೀಸರು ಪ್ರಕರಣದ ಕುರಿತು ತನಿಖೆ ನಡೆಸುತ್ತಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
Advertisement
Advertisement
ಒತ್ತಾಯ ಪೂರ್ವಕವಾಗಿ ಯುವತಿಯನ್ನು ವಿವಾಹವಾಗಿದ್ದ ಬುದ್ಧಿಮಾಂದ್ಯ ವ್ಯಕ್ತಿ ಬಬ್ಲೂ ಕುಶ್ವಾಹ್‍ನನ್ನು ಇನ್ನೂ ಪತ್ತೆಹಚ್ಚಬೇಕಿದೆ. ಛತ್ತಿಸ್‍ಗಡದ ಜಶ್ಪುರ ಜಿಲ್ಲೆಯಿಂದ ಯುವತಿಯನ್ನು ಅಪಹರಿಸಿದ ಆರೋಪಿಗಳು, ಆಕೆಯ ಪೋಷಕರಿಗೆ ಹಣದ ಬೇಡಿಕೆ ಇಟ್ಟಿದ್ದಾರೆ. ಬಳಿಕ ಈ ಭೀಕರ ಮಾನವ ಕಳ್ಳ ಸಾಗಣೆ ಬೆಳಕಿಗೆ ಬಂದಿದೆ.
Advertisement
ಯುವತಿ ಛತ್ತಿಸ್‍ಗಡದ ಜಶ್ಪುರ ನಿವಾಸಿಯಾಗಿದ್ದು, ತಂದೆಗೆ ಕೃಷಿಯಲ್ಲಿ ಸಹಾಯ ಮಾಡಿಕೊಂಡು ಇದ್ದಳು. ಬಳಿಕ ಸಂಬಂಧಿಕರೊಬ್ಬರು ಕೆಲಸ ಕೊಡಿಸುವುದಾಗಿ ಆಕೆಯನ್ನು ಮಧ್ಯ ಪ್ರದೇಶದ ಛತರ್‍ಪುರಕ್ಕೆ ಕರೆದೊಯ್ದು, ಅಪಹರಿಸಿದ್ದರು. ಅಪಹರಣಕಾರರು ಯುವತಿಯ ಪೋಷಕರಿಗೆ ಕರೆ ಮಾಡಿ ಹಣಕ್ಕಾಗಿ ಬೇಡಿಕೆ ಇಟ್ಟಿದ್ದಾರೆ. ಹಣ ನೀಡದಿದ್ದಲ್ಲಿ ಮಗಳ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದರು. ಬಳಿಕ ಪೋಷಕರು ಪೊಲೀಸ್ ಠಾಣೆ ಸಂಪರ್ಕಿಸಿದ್ದಾರೆ.
Advertisement
ಪ್ರಕರಣಕ್ಕೆ ಸಂಬಂಧಿಸಿದಂತೆ ಯುವತಿಯ ಸಂಬಂಧಿಕರಾದ ಪಂಚಮ್ ಸಿಂಗ್ ರೈ ಹಾಗೂ ಈತನ ಪತ್ನಿಯನ್ನು ಬಂಧಿಸಲಾಗಿದ್ದು, ವಿಚಾರಣೆ ನಡೆಸಲಾಗಿದೆ. ಕೆಲಸ ಕೊಡಿಸುವುದಾಗಿ ಯುವತಿಯನ್ನು ಜಶ್ಪುರದಿಂದ ಛತ್ತರ್‍ಪುರಕ್ಕೆ ಕರೆ ತಂದಿದ್ದೆವು ಎಂದು ಒಪ್ಪಿಕೊಂಡಿರುವುದಾಗಿ ಹಿರಿಯ ಪೊಲೀಸ್ ಅಧಿಕಾರಿ ಸಚಿನ್ ಶರ್ಮಾ ತಿಳಿಸಿದ್ದಾರೆ.
ಈ ದಂಪತಿ ಯುವತಿಯನ್ನು 20 ಸಾವಿರ ರೂ.ಗೆ ಛತ್ತರ್‍ಪುರದ ಕಲ್ಲು ರೈಕ್ವಾರ್ ಗೆ 7 ತಿಂಗಳ ಹಿಂದೆ ಮಾರಾಟ ಮಾಡಿದ್ದು, ಕೊನೇಯ ವ್ಯಕ್ತಿಯಾಗಿ ಉತ್ತರ ಪ್ರದೇಶದ ಲಲಿತ್‍ಪುರದ ಸಂತೋಷ್ ಕುಶ್ವಾಹ್ 70 ಸಾವಿರ ರೂ.ಗೆ ಯುವತಿಯನ್ನು ಕೊಂಡುಕೊಂಡಿದ್ದ. ಬಳಿಕ ಯುವತಿಯನ್ನು ಸಂತೋಷ್ ಕುಶ್ವಾಹ್ ಮಗ ಬುದ್ಧಿಮಾಂದ್ಯ ಬಬ್ಲೂ ಕುಶ್ವಾಹ್ ಜೊತೆ ವಿವಾಹ ಮಾಡಲಾಗಿದೆ. ಇದರಿಂದ ಬೇಸತ್ತ ಯುವತಿ ಕಳೆದ ವರ್ಷ ಸೆಪ್ಟೆಂಬರ್‍ನಲ್ಲಿ ಲಲಿತ್‍ಪುರದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.
ಪ್ರಕರಣದ ಕುರಿತು ಛತ್ತರ್‍ಪುರ ಪೊಲೀಸರು ತನಿಖೆ ಆರಂಭಿಸಿದ್ದು, ಛತ್ತಿಸ್‍ಗಡ, ಮಧ್ಯ ಪ್ರದೇಶಗಳಲ್ಲಿನ ಬುಡಕಟ್ಟು ಪ್ರದೇಶಗಳಿಂದ ಹೆಚ್ಚಿನ ಹುಡುಗಿಯರನ್ನು ಇತರ ರಾಜ್ಯಗಳಿಗೆ ಆರೋಪಿಗಳು ಕಳ್ಳ ಸಾಗಣೆ ಮಾಡಿರುವ ಕುರಿತು ಪರಿಶೀಲಿಸುತ್ತಿದ್ದಾರೆ.