ಬೆಂಗಳೂರು: ಸಚಿವ ಸಂಪುಟ ವಿಸ್ತರಣೆ ಬಳಿಕ ಖಾತೆ ಹಂಚಿಕೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರಿಗೆ ತಲೆನೋವಾಗಿ ಪರಿಣಮಿಸಿತ್ತು. ಕಸರತ್ತು ಮಾಡಿ ಹಂಚಿಕೆಯನ್ನು ಸಹ ಮಾಡಿದ್ದರು. ಆದರೆ ಬಳಿಕ ಕೆಲ ಸಚಿವರು ಅಸಮಾಧಾನ ಹೊರ ಹಾಕಿ ಸಚಿವ ಸಂಪುಟ ಸಭೆಯನ್ನೇ ಬಹಿಷ್ಕರಿಸಿದ್ದರು. ಹೀಗಾಗಿ ಇದೀಗ 7 ಜನರ ಖಾತೆ ಬದಲಾವಣೆ ಮಾಡಲಾಗಿದೆ.
ಪರಿಷ್ಕೃತ ಖಾತೆ ಹಂಚಿಕೆ ಪಟ್ಟಿಗೆ ರಾಜ್ಯಪಾಲರು ಅಂಕಿತ ಹಾಕಿದ್ದು, ರಾಜ್ಯ ಗೆಜೆಟ್ ನಲ್ಲಿ ಪ್ರಕಟಿಸಲಾಗಿದೆ. ಮಾಧುಸ್ವಾಮಿಯವರಿಗೆ ವೈದ್ಯಕೀಯ ಶಿಕ್ಷಣದ ಜೊತೆ ಹಜ್ ಮತ್ತು ವಕ್ಫ್ ನೀಡಲಾಗಿದೆ. ಅರವಿಂದ ಲಿಂಬಾವಳಿಯವರಿಗೆ ಅರಣ್ಯ ಖಾತೆ ಜೊತೆಗೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಎಂಟಿಬಿ ನಾಗರಾಜ್ ಅವರಿಗೆ ಪೌರಾಡಳಿತ, ಸಕ್ಕರೆ, ಆರ್.ಶಂಕರ್‍ಗೆ ತೋಟಗಾರಿಕೆ, ರೇಷ್ಮೆ, ಗೋಪಾಲಯ್ಯನವರಿಗೆ ಅಬಕಾರಿ ಹಾಗೂ ನಾರಾಯಣಗೌಡ ಅವರಿಗೆ ಯುವಜನ ಸೇವೆ ಮತ್ತು ಕ್ರೀಡೆ, ಯೋಜನೆ ಮತ್ತು ಸಾಂಖಿಕ ಇಲಾಖೆಯ ಜವಾಬ್ದಾರಿಯನ್ನು ವಹಿಸಲಾಗಿದೆ.
ಸಚಿವರ ಒತ್ತಡಕ್ಕೆ ಮಣಿದು ಸಿಎಂ ಯಡಿಯೂರಪ್ಪ ಮತ್ತೆ ಖಾತೆ ಬದಲಾವಣೆ ಮಾಡಿದ್ದಾರೆ. ಆದರೆ ಡಾ.ಸುಧಾಕರ್ ಗೆ ವೈದ್ಯಕೀಯ ಶಿಕ್ಷಣ ಸಿಕ್ಕೇ ಇಲ್ಲ. ಅರವಿಂದ ಲಿಂಬಾವಳಿಯವರಿಗೆ ಸಹ ಪರಿಸರ ಸಿಗಲಿಲ್ಲ. ಅಲ್ಲದೆ ಮಾಧುಸ್ವಾಮಿಯವರಿಗೆ ವೈದ್ಯಕೀಯ ಶಿಕ್ಷಣವನ್ನೇ ಉಳಿಸಲಾಗಿದೆ.
ಹಿಂದೆ ಯಾವ ಖಾತೆ ನೀಡಲಾಗಿತ್ತು?
ಬಸವರಾಜ ಬೊಮ್ಮಾಯಿಯವರಿಗೆ ಗೃಹ ಜೊತೆಗೆ ಕಾನೂನು ಸಂಸದೀಯ, ಮಾಧುಸ್ವಾಮಿಯವರಿಗೆ ವೈದ್ಯಕೀಯ ಶಿಕ್ಷಣ, ಕನ್ನಡ ಮತ್ತು ಸಂಸ್ಕೃತಿ, ಮುರುಗೇಶ ನಿರಾಣಿಗೆ ಗಣಿಗಾರಿಕೆ, ಉಮೇಶ್ ಕತ್ತಿಗೆ ಆಹಾರ ಖಾತೆ, ಡಾ.ಕೆ ಸುಧಾಕರ್‍ಗೆ ಆರೋಗ್ಯ ಇಲಾಖೆ, ಎಂಟಿಬಿ ನಾಗರಾಜ್‍ಗೆ ಅಬಕಾರಿ, ಗೋಪಾಲಯ್ಯಗೆ ತೋಟಗಾರಿಕೆ ಮತ್ತು ಸಕ್ಕರೆ, ನಾರಾಯಣ ಗೌಡಗೆ ಯುವಜನ ಸೇವೆ ಮತ್ತು ಕ್ರೀಡೆ, ಹಜ್ ಮತ್ತು ವಕ್ಫ್, ಸಿ.ಪಿ.ಯೋಗೇಶ್ವರ್‍ಗೆ ಸಣ್ಣ ನೀರಾವರಿ, ಅರವಿಂದ ಲಿಂಬಾವಳಿಗೆ ಅರಣ್ಯ, ಆನಂದ್ ಸಿಂಗ್‍ಗೆ ಪ್ರವಾಸೋದ್ಯಮ, ಪರಿಸರ, ಸಿ.ಸಿ.ಪಾಟೀಲ್‍ಗೆ ಸಣ್ಣ ಕೈಗಾರಿಕೆ ಮತ್ತು ವಾರ್ತಾ ಇಲಾಖೆ, ಕೋಟ ಶ್ರೀನಿವಾಸ ಪೂಜಾರಿಗೆ ಮುಜರಾಯಿ ಜೊತೆಗೆ ಹಿಂದುಳಿದ ವರ್ಗ, ಎಸ್.ಅಂಗಾರಗೆ ಮೀನುಗಾರಿಕೆ, ಬಂದರು, ಆರ್.ಶಂಕರ್‍ಗೆ ಪೌರಾಡಳಿತ, ರೇಷ್ಮೆ, ಪ್ರಭು ಚೌಹಾಣ್‍ಗೆ ಪಶುಸಂಗೋಪನೆ ಖಾತೆಯನ್ನು ನೀಡಲಾಗಿತ್ತು.