ಬೆಂಗಳೂರು: ಸಂಚಾರಿ ವಿಜಯ್ ಅಂದರೇನೇ ವಿಶಿಷ್ಟ ಶೈಲಿಯ ನಟ. ನಟನೆಗೆ ಸವಾಲಾದ ಪಾತ್ರಗಳನ್ನಷ್ಟೇ ಆರಿಸಿಕೊಳ್ಳುತ್ತಾ ಬಂದಿರುವ ವಿಜಯ್, 6ನೇ ಮೈಲಿ ಚಿತ್ರವನ್ನೂ ಕೂಡಾ ಅದೇ ಮಾನದಂಡದಲ್ಲಿಯೇ ಆಯ್ಕೆ ಮಾಡಿಕೊಂಡಿದ್ದಾರಂತೆ. ಸೀನಿ ನಿರ್ದೇಶನದ ಈ ಚಿತ್ರವನ್ನು ಡಾ.ಜಿ.ಎಸ್ ಶೈಲೇಶ್ ಕುಮಾರ್ ನಿರ್ಮಾಣ ಮಾಡಿದ್ದಾರೆ. ಹರಿಹರ ಮೂಲದವರಾದ ಶೈಲೇಶ್ ಕುಮಾರ್ ವೃತ್ತಿಯಲ್ಲಿ ನ್ಯೂರೋ ಸರ್ಜನ್. ಕನ್ನಡ ಚಿತ್ರರಂಗಕ್ಕೆ ಒಂದೊಳ್ಳೆ ಸದಭಿರುಚಿಯ ಸಿನಿಮಾ ನೀಡಬೇಕೆಂಬ ಆಸೆ ಹೊಂದಿದ್ದ ಅವರು 6ನೇ ಮೈಲಿ ಮೂಲಕ ನಿರ್ಮಾಪಕರಾಗಿದ್ದಾರೆ. ಇದೇ ವಾರ ಅಂದರೆ ಜುಲೈ 6ರಂದು 6ನೇ ಮೈಲಿ ಚಿತ್ರ ರಾಜ್ಯಾದ್ಯಂತ ತೆರೆ ಕಾಣುತ್ತಿದೆ.
ಅದ್ಭುತ ಮೈಸಿರಿಯ ಮಲೆನಾಡು ಸೀಮೆ ಎಂಬುದು ಟೆಕ್ಕಿಗಳೂ ಸೇರಿದಂತೆ ಎಲ್ಲರ ಆಕರ್ಷಣೆಯ ತಾಣ. ಟೆಕ್ಕಿಗಳಂತೂ ಇಲ್ಲಿನ ದಟ್ಟ ಕಾಡುಗಳಿಗೆ ವೀಕೆಂಡಿನಲ್ಲಿ ಟ್ರೆಕ್ಕಿಂಗ್ ಬರೋದು ಸಾಮಾನ್ಯ. ಆದರೆ ಇಂಥಾದ್ದೇ ಒಂದು ಪ್ರದೇಶದಲ್ಲಿ ಟ್ರೆಕ್ಕಿಂಗ್‍ಗೆ ಬರುತ್ತಿದ್ದ ಟೆಕ್ಕಿಗಳು ಸಾಲು ಸಾಲಾಗಿ ಕಣ್ಮರೆಯಾಗುತ್ತಿದ್ದರು. ಇದರ ಬೆಂಬಿದ್ದು ಹೋದಾಗ ಅನೇಕ ರೋಚಕ ಅಂಶಗಳೂ ಬಯಲಾಗಿದ್ದವು. ಈ ಕಥೆಯನ್ನೇ ಆರನೇ ಮೈಲಿ ಚಿತ್ರದ ಮೂಲಕ ರೋಚಕವಾಗಿ ಹೇಳಲಾಗಿದೆಯಂತೆ. ಸಾಯಿಕಿರಣ್ ಸಂಗೀತ ನಿರ್ದೇಶನದ ಈ ಚಿತ್ರದ ಹಾಡುಗಳು ಪಿ ಆರ್ ಕೆ ಆಡಿಯೋ ಮೂಲಕ ಬಿಡುಗಡೆಯಾಗಿದೆ.
Advertisement
Advertisement
ಸೀನಿ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶಿಸಿರುವ ಈ ಚಿತ್ರಕ್ಕೆ ಪರಮೇಶ್ ಪಿ.ಎಂ(ಪರ್ಮಿ) ಅವರ ಛಾಯಾಗ್ರಹಣವಿದೆ. ಮಹೇಶ್ ರೆಡ್ಡಿ ಸಂಕಲನ, ಡಿಫರೆಂಟ್ ಡ್ಯಾನಿ, ವಿಕ್ರಂ ಮೋರ್ ಸಾಹಸ ನಿರ್ದೇಶನ ಹಾಗೂ ರವಿ ಸಂತೆಹೈಕ್ಲು ಅವರ ಕಲಾ ನಿರ್ದೇಶನವಿರುವ ಈ ಚಿತ್ರದ ತಾರಾಬಳಗದಲ್ಲಿ ಸಂಚಾರಿ ವಿಜಯ್, ಆರ್.ಜೆ.ನೇತ್ರ, ರಘು ಪಾಂಡೇಶ್ವರ್, ಕೃಷ್ಣ ಹೆಬ್ಬಾಳೆ, ಡಾ.ಜಾಹ್ನವಿ, ಆರ್.ಜೆ.ಸುದ್ದೇಶ್, ಹೇಮಂತ್ ಸುಶೀಲ್, ಮೈತ್ರಿ ಜಗ್ಗಿ ಮುಂತಾದವರಿದ್ದಾರೆ.