ಹೈದರಾಬಾದ್: ಅಪ್ರಾಪ್ತ ಮಕ್ಕಳಿಗೆ ವಾಹನ ಚಾಲನೆ ಮಾಡಲು ಅವಕಾಶ ನೀಡಿದ ಆರೋಪದಡಿ ಕಳೆದ ಒಂದು ತಿಂಗಳಿನಲ್ಲಿ 69 ಪೋಷಕರು ಆಂಧ್ರಪ್ರದೇಶ ರಾಜಧಾನಿ ಹೈದರಾಬಾದ್ ನಗರದಲ್ಲಿ ಜೈಲು ಶಿಕ್ಷೆಗೆ ಗುರಿಯಾಗಿದ್ದಾರೆ.
ಕಳೆದ ಕೆಲ ತಿಂಗಳಿನಿಂದ ಹೈದರಾಬಾದ್ ಟ್ರಾಫಿಕ್ ಪೊಲೀಸರು ಅಪ್ರಾಪ್ತ ಮಕ್ಕಳು ವಾಹನ ಚಾಲನೆ ಮಾಡುವುದರ ವಿರುದ್ಧ ಅಭಿಯಾನವನ್ನು ಆರಂಭಿಸಿದ್ದರು. ಈ ವೇಳೆ 14 ರಿಂದ 16 ವರ್ಷದ ಮಕ್ಕಳು ಬೈಕ್, ಸ್ಕೂಟರ್, ತ್ರಿಚಕ್ರ ವಾಹನ ಮತ್ತು ಕಾರು ಚಾಲನೆ ಮಾಡುವ ಪ್ರಕರಣಗಳು ಬೆಳಕಿಗೆ ಬಂದಿದ್ದವು. ಈ ಪ್ರಕರಣಗಳಿಗೆ ಸಂಬಂಧಿಸಿದಂತೆ 69 ಅಪ್ರಾಪ್ತರ ಪೋಷಕರನ್ನು ನ್ಯಾಯಾಲಯ ಮುಂದೆ ಹಾಜರುಪಡಿಸಲಾಗಿತ್ತು. ಪ್ರಕರಣಗಳ ವಿಚಾರಣೆ ನಡೆಸಿದ ನ್ಯಾಯಾಲಯ ಒಂದು ದಿನದಿಂದ ಮೂರು ದಿನಗಳ ವರೆಗೆ ಪೋಷಕರಿಗೆ ಜೈಲು ಶಿಕ್ಷೆ ವಿಧಿಸಿದೆ ಎಂದು ನಗರ ಪೊಲೀಸ್ ಆಯುಕ್ತ ರಂಗನಾಥ್ ಮಾಹಿತಿ ನೀಡಿದ್ದಾರೆ.
Advertisement
Advertisement
ಜನವರಿ ಮೊದಲ ವಾರದಲ್ಲಿ ನಗರದಲ್ಲಿ ನಡೆದ ರಸ್ತೆ ಅಪಘಾತದಲ್ಲಿ ಐವರು ಅಪ್ರಾಪ್ತರು ಸಾವನ್ನಪ್ಪಿದ್ದ ಬಳಿಕ ಫೆಬ್ರವರಿ ಮೊದಲ ವಾರದಲ್ಲಿ ಅಭಿಯಾನ ಆರಂಭಿಸಲಾಗಿತ್ತು. ಈ ಹಿಂದೆ ಇಂತಹ ಪ್ರಕರಣಗಳಲ್ಲಿ ದಂಡ ಮಾತ್ರ ಪಡೆಯಲಾಗುತ್ತಿತ್ತು. ಆದರೆ ಇದು ಹೆಚ್ಚು ಪರಿಣಾಮಕಾರಿ ಆಗದ ಕಾರಣ ಕಠಿಣ ಕ್ರಮಕೈಗೊಳ್ಳಲು ಮುಂದಾಗಿರುವುದಾಗಿ ಡಿಸಿಪಿ ತಿಳಿಸಿದ್ದಾರೆ.
Advertisement
ಅಪ್ರಾಪ್ತರು ವಾಹನ ಚಾಲನೆ ಮಾಡುವುದರಿಂದ ಹೆಚ್ಚು ಅಪಘಾತಗಳಿಗೆ ಕಾರಣವಾಗುತ್ತಿದೆ. ಅಲ್ಲದೇ ಇಂತಹ ಘಟನೆಗಳಲ್ಲಿ ಅಪ್ರಾಪ್ತರು ತಮ್ಮ ಜೀವ ಕಳೆದುಕೊಳ್ಳುವುದರೊಂದಿಗೆ ಇತರರ ಜೀವಕ್ಕೂ ಅಪಾಯಕಾರಿಯಾಗುತ್ತಿದ್ದಾರೆ. ಸುಪ್ರೀಂ ಕೋರ್ಟ್ ಈ ಕುರಿತ ಪ್ರಕರಣಗಳ ಬಗ್ಗೆ ನೀಡಿದ್ದ ತೀರ್ಪಿನ ಹಿನ್ನೆಲೆಯಲ್ಲಿ ಸ್ಥಳೀಯ ನ್ಯಾಯಾಲಯಗಳು ಈ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಿವೆ.
Advertisement
ಇಂತಹ ಪ್ರಕರಣಗಳನ್ನು ವಾಹನ ಕಾಯ್ದೆಯ 180 (ಅನಧಿಕೃತ ವ್ಯಕ್ತಿಗೆ ವಾಹನ ಚಾಲನೆ ಮಾಡಲು ಅನುಮತಿ) ಮತ್ತು 181 (ಚಾಲನ ಪರವಾನಗಿ ಇಲ್ಲದೆ ಚಾಲನೆ) ಸೆಕ್ಷನ್ ಅಡಿಯಲ್ಲಿ ಪರಿಗಣಿಸಲಾಗುತ್ತಿದೆ. ಅಲ್ಲದೇ ಈ ಅಭಿಯಾನವನ್ನು ವರ್ಷದ ಕೊನೆಯವರೆಗೂ ಮುಂದುವರೆಸುವುದಾಗಿ ಡಿಜಿಪಿ ತಿಳಿಸಿದ್ದಾರೆ.
10 ದಿನಗಳ ಹಿಂದೆ 10 ಜನ ಪೋಷಕರಿಗೆ ಶಿಕ್ಷೆಯಾಗಿತ್ತು. ಈಗ ಈ ಸಂಖ್ಯೆ ಏರಿಕೆಯಾಗಿದ್ದು, ಹೈದರಾಬಾದ್ ಪೊಲೀಸರ ಈ ಕಠಿಣ ನಿರ್ಧಾರಕ್ಕೆ ಪೋಷಕರಿಂದ ಮೆಚ್ಚುಗೆ ವ್ಯಕ್ತವಾಗಿದೆ. ಮಕ್ಕಳು ಬೈಕ್ ಹಾಗೂ ವಾಹನ ಚಾಲನೆ ಮಾಡಿ ಉಂಟು ಮಾಡಬಹುದಾದ ಅಪಘಾತಗಳನ್ನು ಕಡಿಮೆ ಮಾಡಬಹುದು ಎಂದು ಅಭಿಪ್ರಾಯ ಪಟ್ಟಿದ್ದಾರೆ.