ಲಕ್ನೋ: ಕೊರೊನಾ ಸೋಂಕಿನ ಲಕ್ಷಣ ಕಾಣಿಸಿಕೊಂಡರೆ ಸಾಕು ಅವರನ್ನು ಕ್ವಾರಂಟೈನ್ ಮಾಡಿ, ನಿಗಾ ವಹಿಸಲಾಗುತ್ತದೆ. ಆದರೆ ಉತ್ತರ ಪ್ರದೇಶದಲ್ಲಿ 69 ಕೊರೊನಾ ಪೀಡಿತರು ಆಸ್ಪತ್ರೆಗೆ ದಾಖಲಾಗಲು ಫುಟ್‍ಪಾತ್‍ನಲ್ಲಿ ಕಾದು ಕುಳಿತ ಘಟನೆಯೊಂದು ಬೆಳಕಿಗೆ ಬಂದಿದೆ.
ಗುರುವಾರ ಬೆಳಿಗ್ಗೆ ಈ ಘಟನೆ ನಡೆದಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ವೈರಲ್ ಆದ ಬಳಿಕ ಪ್ರಕರಣ ಬೆಳಕಿಗೆ ಬಂದಿದೆ. ಉತ್ತರ ಪ್ರದೇಶದ ಸೈಫೈ ವೈದ್ಯಕೀಯ ವಿಜ್ಞಾನ ವಿಶ್ವವಿದ್ಯಾಲಯದ ಫ್ಲೂ ಹೊರರೋಗಿ ವಿಭಾಗದ ಗೇಟ್‍ಗಳ ಬಳಿ ಈ ದೃಶ್ಯ ಕಂಡುಬಂದಿತ್ತು.
Advertisement
Advertisement
69 ಕೊರೊನಾ ಸೋಂಕಿತ ರೋಗಿಗಳನ್ನು ಗುರುವಾರ ಪಶ್ಚಿಮ ಉತ್ತರ ಪ್ರದೇಶದ ನಗರದಿಂದ ಸೈಫೈ ಆಸ್ಪತ್ರೆಗೆ ವರ್ಗಾಯಿಸಲಾಗಿತ್ತು. ಹೀಗಾಗಿ ಆಗ್ರಾದಿಂದ 116 ಕಿ.ಮೀ ದೂರದಲ್ಲಿರುವ ಈ ಆಸ್ಪತ್ರೆಗೆ ಸರ್ಕಾರಿ ಬಸ್ಸಿನಲ್ಲಿ ರೋಗಿಗಳನ್ನು ಕರೆತರಲಾಗಿತ್ತು. ಆದರೆ ಈ ವೇಳೆ ಆಸ್ಪತ್ರೆಯ ವೈದ್ಯರು ಮತ್ತು ಸಿಬ್ಬಂದಿ ರೋಗಿಗಳನ್ನು ಆಸ್ಪತ್ರೆಯಲ್ಲಿ ಮೀಸಲಾದ ವಾರ್ಡಿಗೆ ದಾಖಲಿಸಲು ತಡ ಮಾಡಿದರು. ಹೀಗಾಗಿ ರೋಗಿಗಳು ಆಸ್ಪತ್ರೆಗೆ ದಾಖಲಾಗಲು ಫುಟ್‍ಪಾತ್‍ನಲ್ಲಿ ಕಾದು ಕುಳಿತ್ತಿದ್ದರು.
Advertisement
ಹೀಗೆ ರಸ್ತೆಯಲ್ಲಿ ಕೊರೊನಾ ಸೋಂಕಿತರು ಕಾದು ಕುಳಿತಿರುವ ದೃಶ್ಯವನ್ನು ಕಂಡ ಸ್ಥಳೀಯರು ಅದನ್ನು ವಿಡಿಯೋ ಮಾಡಿ ಎಲ್ಲೆಡೆ ಹರಿಬಿಟ್ಟಿದ್ದಾರೆ. ಈ ರೋಗಿಗಳು ಕೇವಲ ಮಾಸ್ಕ್ ಮಾತ್ರ ಧರಿಸಿದ್ದು, ಬೇರೆ ಯಾವುದೇ ಮುಂಜಾಗ್ರತಾ ಕ್ರಮ ಕೈಗೊಳ್ಳದಿರುವುದನ್ನು ವಿಡಿಯೋದಲ್ಲಿ ನೋಡಬಹುದಾಗಿದೆ.
Advertisement
ವಿಡಿಯೋ ವೈರಲ್ ಆಗುತ್ತಿದ್ದಂತೆ ಈ ವಿಚಾರ ಹೆಚ್ಚು ಸುದ್ದಿಯಾಗಿದ್ದು, ಈ ಬಗ್ಗೆ ಪ್ರತಿಕ್ರಿಯಿಸಿರುವ ವಿಶ್ವವಿದ್ಯಾನಿಲಯದ ಉಪಕುಲಪತಿ, ಇದರಲ್ಲಿ ನಮ್ಮ ಆಸ್ಪತ್ರೆ ಸಿಬ್ಬಂದಿ ತಪ್ಪಿಲ್ಲ. ಇಲ್ಲಿ ಸಂವಹನದ ಕೊರತೆಯಾಗಿದೆ. ಬುಧವಾರ ಈ ರೋಗಿಗಳನ್ನು ನಮ್ಮ ಆಸ್ಪತ್ರೆಗೆ ವರ್ಗಾಯಿಸಬೇಕಿತ್ತು. ಆದರೆ ಗುರುವಾರ ಅವರನ್ನು ಕರೆದುಕೊಂಡು ಬರಲಾಗಿದೆ. ಈ ಬಗ್ಗೆ ನಮ್ಮ ಆಸ್ಪತ್ರೆ ಸಿಬ್ಬಂದಿಗೆ ಮಾಹಿತಿ ಇರಲಿಲ್ಲ. ಆದರೆ ರೋಗಿಗಳು ಆಸ್ಪತ್ರೆಗೆ ಬಂದಿದ್ದಾರೆ ಎಂದು ತಿಳಿದ ತಕ್ಷಣ ನಾವು ಕ್ರಮ ತೆಗೆದುಕೊಂಡೆವು. ಸೋಂಕಿತರ ಸಂಖ್ಯೆ ಹೆಚ್ಚಾಗಿದ್ದ ಕಾರಣಕ್ಕೆ ಅವರ ಆರೋಗ್ಯದ ಮಾಹಿತಿ ಪಡೆದು ಆಸ್ಪತ್ರೆಗೆ ದಾಖಲಿಸಿಕೊಳ್ಳುವುದು ತಡವಾಗಿದೆ. ಒಂದು ವೇಳೆ ಇದರಲ್ಲಿ ನಮ್ಮ ಸಿಬ್ಬಂದಿ ಲೋಪವಿದ್ದರೆ ಕ್ರಮ ತೆಗೆದುಕೊಳ್ಳುತ್ತೇವೆ ಎಂದು ಹೇಳಿದ್ದಾರೆ.