ಮುಂಬರುವ ದಿನಗಳಲ್ಲಿ ಪ್ರೇಮಲೋಕ-2 ಚಿತ್ರ ನಿರ್ಮಿಸಿ ಬಿಡುಗಡೆ; ಕತಾರ್‌ನಲ್ಲಿ ರವಿಚಂದ್ರನ್ ಭರವಸೆ

Public TV
2 Min Read
RAVICHANDRAN

ದೋಹಾ: ಕತಾರ್ ನಲ್ಲಿರುವ ಕರ್ನಾಟಕ ಸಂಘವು 68ನೇ ಕನ್ನಡ ರಾಜ್ಯೋತ್ಸವನ್ನು ನವೆಂಬರ್ 3 ರಂದು ಅದ್ದೂರಿ ಕಾರ್ಯಕ್ರಮದ ಮೂಲಕ ಆಚರಿಸಿತು.

QATAR 3 NEW

ಕಾರ್ಯಕ್ರಮದಲ್ಲಿ ಗೌರವಾನ್ವಿತ ಮುಖ್ಯ ಅತಿಥಿಗಳಾಗಿ ಕನ್ನಡದ ಪ್ರಸಿದ್ಧ ಬರಹಗಾರರು ಹಾಗೂ ಪತ್ರಕರ್ತರಾದ ಜೋಗಿ ಖ್ಯಾತಿಯ ಗಿರೀಶ್ ರಾವ್ ಹತ್ವಾರ್ ಹಾಗೂ ಸ್ಯಾಂಡಲ್ ವುಡ್‍ನ ಕ್ರೇಜಿ ಸ್ಟಾರ್ ವಿ ರವಿಚಂದ್ರನ್ ಅವರು ಭಾಗವಹಿಸಿದ್ದರು. ಭಾರತೀಯ ಸಾಂಸ್ಕೃತಿಕ ಕೇಂದ್ರದ ಅಧ್ಯಕ್ಷ ಮಣಿಕಂಠನ್, ಉಪಾಧ್ಯಕ್ಷ ಸುಬ್ರಮಣ್ಯ ಹೆಬ್ಬಾಗೆಲು, ಐಸಿಬಿಫ್ ನ ಅಧ್ಯಕ್ಷ ಶಾನವಸ್ ಬವ, ಕರ್ನಾಟಕ ಸಂಘದ ಸಲಹಾ ಮಂಡಳಿ ಸದಸ್ಯರು, ಸೋದರ ಸಂಸ್ಥೆಗಳ ಅಧ್ಯಕ್ಷರು ರಾಜ್ಯೋತ್ಸವದ ಆಚರಣೆಯಲ್ಲಿ ಪಾಲ್ಗೊಂಡರು.

QATAR 1 NEW

ರವಿಚಂದ್ರನ್  (Ravichandran) ಅವರು ಸಭೆಯನ್ನು ಉದ್ದೇಶಿಸಿ ಮಾತನಾಡುತ್ತಾ, ಮಹೇಶ್ ಗೌಡ ಅವರ ಪ್ರೀತಿಯ ಕರೆ ಅವರನ್ನು ಕತಾರ್‍ಗೆ ಬರುವಂತೆ ಪ್ರೇರೇಪಿಸಿದ್ದು ಹಾಗೂ ಅವರ ಕತಾರ್ ನ ಪ್ರವಾಸ ನೆನಪಿನಲ್ಲಿ ಉಳಿಯುವಂತದ್ದು ಎಂದು ಸಭೆಗೆ ತಿಳಿಸಿದರು. ಅವರ ತಂದೆಯ ಜೀವನ ಶೈಲಿಯನ್ನು ನೆನೆಸಿಕೊಂಡ ಅವರು, ಮುಂಬರುವ ದಿನಗಳಲ್ಲಿ ಪ್ರೇಮಲೋಕ ಚಿತ್ರದ ಭಾಗ-2 ನಿರ್ಮಿಸಿ ಬಿಡುಗಡೆಗೊಳಿಸುವ ಭರವಸೆ ನೀಡಿದರು.

QATAR 2 NEW

ಮಹೇಶ್ ಗೌಡ ಅವರು ಕಾರ್ಯಕ್ರಮವನ್ನು ಸ್ವಾಗತಿಸಿ, ಹಿಂದಿನ ಹಾಗೂ ಈಗಿನ ಆಡಳಿತ ಮಂಡಳಿಗೆ ಧನ್ಯವಾದ ತಿಳಿಸಿದರು. ಮುಂದಿನ ವರ್ಷ ಕರ್ನಾಟಕ ಸಂಘಕ್ಕೆ ರಜತ ಮಹೋತ್ಸವದ ಸಂಭ್ರಮ. ಈ ಸಂಭ್ರಮವನ್ನು ವಿಜ್ರಂಭಣೆಯಿಂದ ನಡೆಸಿಕೊಡುವುದಾಗಿ ಸಭೆಗೆ ತಿಳಿಸಿದರು. ಕತಾರ್ ನಲ್ಲಿನ ಭಾರತೀಯ ಅಂತಾರಾಷ್ಟ್ರೀಯ ಶಾಲೆಗಳಲ್ಲಿ ಕನ್ನಡ ಕಲಿಸುತ್ತಿರುವ ಶಿಕ್ಷಕ ಶಿಕ್ಷಕಿಯರಿಗೆ ಧನ್ಯವಾದಗಳನ್ನು ತಿಳಿಸಿ ಅವರಿಗೆ ಸ್ಮರಣ ಫಲಕ ನೀಡಿ ಗೌರವಿಸಲಾಯಿತು.

QATAR 4 NEW

ಕಾರ್ಯಕ್ರಮದಲ್ಲಿ ಕನ್ನಡ ರಾಜ್ಯೋತ್ಸವ (Kannada rajyotsava in Qatar) ಪ್ರಶಸ್ತಿ ಪುರಸ್ಕೃತ ಕರ್ನಾಟಕ ಸಂಘದ ಮಾಜಿ ಅಧ್ಯಕ್ಷ ದೀಪಕ್ ಶೆಟ್ಟಿ ಅವರನ್ನು ಗೌರವಿಸಲಾಯಿತು. ಸಂಘದ ಆಡಳಿತ ಮಂಡಳಿ ಸದಸ್ಯೆ ಸಂಜನಾ ಜೀವನ್ ಅವರು ಸಂಯೋಜಿಸಿದ ರವಿಚಂದ್ರನ್ ಅವರ ಹದಿನಾರು ಪ್ರಖ್ಯಾತ ಹಾಡುಗಳ ನೃತ್ಯ ಮಾಲೆಯು ಸಭಾಂಗಣದಲ್ಲಿ ನೆರೆದಿದ್ದ ಪ್ರೇಕ್ಷರ ಹಾಗೂ ಮುಖ್ಯ ಅತಿಥಿಗಳು ರವಿಚಂದ್ರನ್ ಅವರಿಂದ ಮೆಚ್ಚುಗೆ ಪಡೆಯಿತು. ಉದಯೋನ್ಮುಖ ಗಾಯಕರು ಭೂಮಿಕಾ ಮಧುಸೂದನ್ ಹಾಗೂ ಶ್ರೀನಿಧಿ ಶಾಸ್ತ್ರಿ ಅವರು ಸಂಗೀತ ಸಂಜೆ ನೆಡೆಸಿಕೊಟ್ಟರು. ಕಾರ್ಯಕ್ರಮ ನಿರ್ವಹಣೆಯನ್ನು ಪ್ರಸಿದ್ಧ ನಿರೂಪಕರಾದ ಸವಿ ಪ್ರಕಾಶ್ ಅವರು ನಡೆಸಿದರು. ಕಾರ್ಯಕ್ರಮದ ವಂದನಾರ್ಪಣೆಯನ್ನು ಸಂಘದ ಸಾಂಸ್ಕೃತಿಕ ಕಾರ್ಯದರ್ಶಿ ಸುಶೀಲ ಸುನಿಲ್ ಅವರು ನೆರವೇರಿಸಿದರು.

ದೋಹಾದ (Doha) ಡಿಪಿಎಸ್ ಶಾಲೆಯ 1,500ಕ್ಕೂ ಹೆಚ್ಚು ಕನ್ನಡ ಅಭಿಮಾನಿಗಳಿಂದ ತುಂಬಿದ ಸಭಾಂಗಣದಲ್ಲಿ ಮೊದಲು ಆಡಳಿತ ಮಂಡಳಿಯಿಂದ ಕನ್ನಡದ ದೀಪ ಹಚ್ಚಲಾಯಿತು. ಬಳಿಕ ಕೆಎಸ್ ನಿಸಾರ್ ಅಹ್ಮದ್ ರಚಿತ ಜೋಗದ ಸಿರಿ ಬೆಳಕಿನಲ್ಲಿ ಗಾನ ಮತ್ತು ಸಂಘದ ಅಧ್ಯಕ್ಷ ಮಹೇಶ್ ಗೌಡ ಅವರ ಸ್ವಾಗತ ಭಾಷಣದಿಂದ ಪ್ರಾರಂಭವಾದ ಕಾರ್ಯಕ್ರಮವು ಕರ್ನಾಟಕ ಸಂಘ ಹಾಗೂ ಅದರ ಸೋದರ ಸಂಸ್ಥೆಗಳಾದ ಬಂಟ್ಸ್ ಕತಾರ್, ಮಂಗಳೂರ ಕಲ್ಚರಲ್ ಅಸೋಸಿಯೇಷನ್ ಮಂಗಳೂರು ಕ್ರಿಕೆಟ್ ಕ್ಲಬ್ ಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳ ಮೂಲಕ ಅಂತ್ಯಗೊಂಡಿತು.

Share This Article