ಬೆಳಗಾವಿ: ಜಿಲ್ಲೆಯ ಗ್ರಾಮಸ್ಥರೊಬ್ಬರ ಮನೆಯ ನಿರ್ದಿಷ್ಟ ಪ್ರದೇಶದಲ್ಲಿ ಭೂಮಿ ಕಾದು ಕೆಂಡದಂತಾಗಿ ಜನರಲ್ಲಿ ಆತಂಕ ಸೃಷ್ಟಿಸಿದೆ.
ತಾಲೂಕಿನ ಹಂಗರಗಾ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಭೀಮಸೇನ ಲಕ್ಷ್ಮಣ್ ಕಾಂಬ್ಳೆ ಅವರಿಗೆ ಸೇರಿದ ಮನೆಯಲ್ಲಿ ಶುಕ್ರವಾರ ಸಂಜೆಯಿಂದ ಮನೆಯ ನಿರ್ದಿಷ್ಟ ಜಾಗದ ಭೂಮಿಯಲ್ಲಿ ಕಾವು ಬರುತ್ತಿದೆ. ಈ ಜಾಗದಲ್ಲಿ ನೀರು ಹಾಕಿದ್ರೂ ಬಿಸಿಯಾಗುತ್ತಿದೆ. ಸ್ಥಳದಲ್ಲಿ ಭೂಮಿ ಅಗೆದರು ಬಿಸಿ ಉಂಟಾಗುತ್ತಿದೆ. ಬಿಸಿಯಾದ ಜಾಗದಲ್ಲಿ ಉಷ್ಣಾಂಶ ಬರೋಬ್ಬರಿ 68 ಡಿಗ್ರಿ ದಾಖಲಾಗಿದೆ. ಆದ್ರೆ ಗ್ರಾಮದ ಹೊರಗೆ ಮೊಡ ಕವಿದ ವಾತಾವರಣವಿದೆ.
ಸ್ಥಳಕ್ಕೆ ಎಸಿ ರಾಜಶ್ರೀ ಜೈನಾಪುರ, ಗ್ರಾಮಾಂತರ ಠಾಣೆ ಪೊಲೀಸರು ಹಾಗೂ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಅಧಿಕಾರಿಗಳು ಭೇಟಿ ನೀಡಿ ಪರಶೀಲನೆ ನಡೆಸುತ್ತಿದ್ದಾರೆ. ಈ ವಿಸ್ಮಯ ನೋಡಲು ಲಕ್ಷ್ಮಣ್ ಕಾಂಬ್ಳೆ ಅವರ ಮನೆ ಮಂದೆ ಸಾಕಷ್ಟು ಜನ ಜಮಾಯಿಸಿದ್ದಾರೆ.
ಎರಡು ವಾರಗಳ ಹಿಂದೆ ಮೈಸೂರಿನ ಬೆಲವತ್ತ ಗ್ರಾಮದಲ್ಲಿ ಭೂಮಿಯಿಂದ ಹೊರಬರುತ್ತಿದ್ದ ಬೆಂಕಿಯ ಕೆನ್ನಾಲಿಗೆಗೆ ಸಿಲುಕಿ 14 ವರ್ಷದ ಬಾಲಕ ಹರ್ಷಲ್ ಮೃತಪಟ್ಟಿದ್ದ. ಇಲ್ಲಿನ ಕುಂಬಾರ ಕೊಪ್ಪಲು ನಿವಾಸಿ ಸೋಮಣ್ಣ ಎಂಬವರಿಗೆ ಸೇರಿದ 4 ಎಕರೆ ಜಮೀನಿನನಲ್ಲಿ ಈ ವಿಚಿತ್ರ ಘಟನೆ ನಡೆದಿತ್ತು. ಹರ್ಷಲ್ ಸಾವಿಗೂ ಮುನ್ನ ನಡೆದ ಘಟನೆಯ ಬಗ್ಗೆ ವಿವರಿಸಿದ್ದ.
`ಅಣೆಕಟ್ಟಿನ ಬಳಿಯಿರೋ ತೋಟದಲ್ಲಿ ಕ್ರಿಕೆಟ್ ಆಟವಾಡಲೆಂದು 5, 6 ಮಂದಿ ಗೆಳೆಯರು ಸೇರಿ ಹೋಗಿದ್ವಿ. ಆಟವಾಡುತ್ತಿದ್ದ ವೇಳೆ ಯಶವಂತ್ ಅಣ್ಣ ಬಾಲ್ ಜೋರಾಗಿ ಹೊಡೆದರು. ಬಾಲ್ ತರಲು ಹೋದೆವು. ಈ ವೇಳೆ ಮನೋಜ್ ಬಾಲ್ ತೆಗೆದುಕೊಂಡು ಬರಲು ಹೋಗಿ ಮಣ್ಣಿನಲ್ಲಿ ಸಿಲುಕಿಕೊಂಡು ಕಿರುಚಿದ. ತಕ್ಷಣ ಅವನನ್ನು ಎತ್ತಿಕೊಳ್ಳಲು ನಾನು ಹೋದೆ. ಆದ್ರೆ ಅವನು ನನ್ನ ಕೈಗೆ ಸಿಕ್ಕಿಲ್ಲ. ಇತ್ತ ನಾನು ನಿಂತಲ್ಲಿ ಮಣ್ಣು ಕುಸಿಯುತ್ತಿದ್ದು ಕಾಲು ಬೆಂಕಿಯಲ್ಲಿ ಬೇಯುತ್ತಿತ್ತು. ಈ ವೇಳೆ ಆ ಕಡೆಯಿಂದ ಎದ್ದು ಬಂದು ಮನೋಜ್ ನನ್ನನ್ನು ಹೇಗೋ ಮೇಲಕ್ಕೆತ್ತಿದ. ಎದ್ದ ಬಳಿಕ ರೋಡಿನ ವೆರೆಗೆ ನಡೆದುಕೊಂಡು ಬಂದು ಅಲ್ಲಿ ಇಬ್ಬರು ಅಣ್ಣಂದಿರನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗುವಂತೆ ಬೇಡಿಕೊಂಡೆವು. ಹಾಗಾಗಿ ಅವರು ನಮ್ಮನ್ನ ಆಸ್ಪತ್ರೆಗೆ ಸೇರಿಸಿದ್ರು ಅಂತಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಗ ಹರ್ಷಲ್ ಘಟನೆಯ ಬಗ್ಗೆ ವಿವರಿಸಿದ್ದ.