ಚಾಮರಾಜನಗರ: ವಾಹನವೊಂದರಲ್ಲಿ ತರಕಾರಿ ಸಾಗಿಸುವ ನೆಪದಲ್ಲಿ ಅಕ್ಕಿ ಅಕ್ರಮ ಸಾಗಾಟ ಮಾಡುತ್ತಿದ್ದವರನ್ನು ಆಹಾರ ಇಲಾಖೆ ಅಧಿಕಾರಿಗಳು ಪತ್ತೆಹಚ್ಚಿರುವ ಘಟನೆ ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ತೆರಕಣಾಂಬಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಮಂಡ್ಯದ ಫೈರೋಜ್ ಖಾನ್ ಹಾಗೂ ಗುಂಡ್ಲುಪೇಟೆಯ ಪ್ರೇಮ್ ಕುಮಾರ್ ಆರೋಪಿಗಳು. ವಾಹನವೊಂದರಲ್ಲಿ ತರಕಾರಿ ಖಾಲಿ ಕ್ರೇಟ್‍ನ್ನು ಮೇಲ್ಭಾಗದಲ್ಲಿಟ್ಟುಕೊಂಡು, ಒಳಭಾಗದಲ್ಲಿ ಅಕ್ಕಿ ಅಕ್ರಮ ಸಾಗಾಟ ನಡೆಸುತ್ತಿದ್ದರು. ಗುಂಡ್ಲುಪೇಟೆಯ ದಾಸ್ತಾನಿಟ್ಟಿದ್ದ ಅಕ್ಕಿಯನ್ನು ಪ್ರೇಮ್ ಕುಮಾರ್ ಅವರು ಫೈರೋಜ್ ಖಾನ್ ಅವರಿಗೆ ನೀಡಿ ಮಂಡ್ಯ ಕಡೆಗೆ ಸಾಗಾಟ ನಡೆಸುತ್ತಿದ್ದರು ಎಂದು ತಿಳಿದುಬಂದಿದೆ.
ಅನ್ನಭಾಗ್ಯ ಅಕ್ಕಿ ಸಾಗಾಟದ ಖಚಿತ ಮಾಹಿತಿ ಮೇರೆಗೆ ಆಹಾರ ಇಲಾಖೆ ಅಧಿಕಾರಿಗಳು ವಾಹನವೊಂದರ ಮೇಲೆ ದಾಳಿ ನಡೆಸಿದ್ದರು. ಈ ವೇಳೆ ಹೊರಗಡೆ ತರಕಾರಿ ಕ್ರೇಟ್ ತುಂಬಿಕೊಂಡು ಒಳಗೆ ಅಕ್ಕಿ ಸಾಗಾಟ ಮಾಡುತ್ತಿದ್ದನ್ನು ಪತ್ತೆ ಹಚ್ಚಿದ್ದಾರೆ. ಇದನ್ನೂ ಓದಿ: ಅತಿ ಹಿಂದುಳಿದ ವರ್ಗಗಳಿಗೂ ರಾಜಕೀಯ ಮೀಸಲಾತಿ ನೀಡಲು ಆಯೋಗ ರಚಿಸಬೇಕು – ರಾಜ್ಯಪಾಲರಿಗೆ ಮನವಿ
ಕಾರ್ಯಾಚರಣೆ ವೇಳೆ 6,250 ಕೆಜಿ ಅಕ್ಕಿಯನ್ನು ವಶಪಡಿಸಿಕೊಂಡಿದ್ದು, 10 ಕೆ.ಜಿಯನ್ನು ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ಈ ಸಂಬಂಧ ಇಬ್ಬರ ವಿರುದ್ಧ ತೆರಕಣಾಂಬಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ನಮ್ಮ ಮನೆಯ ಮಕ್ಕಳು ಅಮಾಯಕರು – ಬಂಧಿತರ ಕುಟುಂಬದವರ ಅಳಲು