– ಹಲವು ಪ್ರದೇಶಗಳಲ್ಲಿ ನಿತ್ಯ ರಾತ್ರಿ ರೇಪ್
ಜೈಪುರ: ಬರೋಬ್ಬರಿ 8 ದಿನಗಳ ಕಾಲ ಸುಮಾರು 9 ಜನ 15 ವರ್ಷದ ಬಾಲಕಿ ಮೇಲೆ ನಿರಂತರವಾಗಿ ಅತ್ಯಾಚಾರ ಎಸಗಿರುವ ಆಘಾತಕಾರಿ ಘಟನೆ ನಡೆದಿದೆ.
ರಾಜಸ್ಥಾನದ ಝಾಲವಾರ್ ನಲ್ಲಿ ಘಟನೆ ನಡೆದಿದ್ದು, 8 ದಿನಗಳ ಕಾಲ ಸುಮಾರು 9 ಜನ 15 ವರ್ಷದ ಬಾಲಕಿಯನ್ನು ವಿವಿಧ ಸ್ಥಳಗಳಿಗೆ ಕರೆದೊಯ್ದು ಪ್ರತಿ ದಿನ ರಾತ್ರಿ ಅತ್ಯಾಚಾರ ಎಸಗಿದ್ದು, ಈ ಪೈಕಿ ಇಬ್ಬರು ಅಪ್ರಾಪ್ತರಾಗಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಬಾಲಕಿ ಹರಸಾಹಸ ಮಾಡಿ ಶುಕ್ರವಾರ ಕಾಮುಕರ ಕಣ್ಣಿನಿಂದ ತಪ್ಪಿಸಿಕೊಂಡು ಪಾರಾಗಿದ್ದು, ಮನೆ ತಲುಪಿದ್ದಾಳೆ. ಇಷ್ಟರಲ್ಲೇ ಕುಟುಂಬಸ್ಥರು ಬಾಲಕಿ ಕಾಣೆಯಾಗಿರುವ ಕುರಿತು ದೂರನ್ನು ಸಹ ನಿಡಿದ್ದಾರೆ. ಈಗಾಗಲೇ ಇಬ್ಬರು ಅಪ್ರಾಪ್ತರು ಸೇರಿ ನಾಲ್ವರನ್ನು ಬಂಧಿಸಲಾಗಿದೆ ಎಂದು ಪೊಲೀಸರು ವಿವರಿಸಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಸುಕೇತ್ ಡಿಎಸ್‍ಪಿ ಮಂಜೀತ್ ಸಿಂಗ್ ಮಾಹಿತಿ ನೀಡಿದ್ದು, ಬಾಲಕಿಯ ಸ್ನೇಹಿತ ಬುಲ್‍ಬುಲ್ ಹಾಗೂ ಮತ್ತೊಬ್ಬ ಯುವಕ ಛೋಥ್ಮಾಲ್ ಫುಬ್ರವರಿ 25 ರಂದು ಆಕೆಗೆ ಶಾಲೆ ಬ್ಯಾಗ್ ಕೊಡಿಸುವುದಾಗಿ ಝಾಲವಾರ್ ನಗರಕ್ಕೆ ಕರೆದೊಯ್ದಿದ್ದಾರೆ ಎಂದು ತಿಳಿಸಿದ್ದಾರೆ.
ಬಾಲಕಿ ಶಾಲೆಯನ್ನು ಬಿಟ್ಟಿದ್ದು, ಇವರಿಬ್ಬರ ಜೊತೆಗೆ ಇನ್ನೂ ಇಬ್ಬರು, ಮೂವರು ಪಾರ್ಕ್‍ನಲ್ಲಿ ಜೊತೆಯಾಗಿದ್ದರು. ಅಲ್ಲಿಂದ ನಿರ್ಜನ ಪ್ರದೇಶಕ್ಕೆ ಎಳೆದೊಯ್ದು ಅತ್ಯಾಚಾರ ಎಸಗಿದ್ದಾರೆ. ಕನಿಷ್ಠ 9 ಜನ ಝಾಲವಾರ್ ನ ವಿವಿಧ ಸ್ಥಳಗಳಲ್ಲಿ ನಿತ್ಯ ರಾತ್ರಿ ಹಲವು ಬಾರಿ ಅತ್ಯಾಚಾರ ಎಸಗಿದ್ದಾರೆ ಎಂದು ಬಾಲಕಿ ಆರೋಪಿಸಿದ್ದಾಳೆ.
ತಕ್ಷಣವೇ ಬಾಲಕಿಯ ವೈದ್ಯಕೀಯ ಪರೀಕ್ಷೆ ನಡೆಸಲಾಗಿದ್ದು, ಈಗಾಗಲೇ ನಾಲ್ವರು ಆರೋಪಿಗಳನ್ನು ಬಂಧಿಸಲಾಗಿದೆ. ಇದರಲ್ಲಿ ಇಬ್ಬರು ಅಪ್ರಾಪ್ತರಾಗಿದ್ದಾರೆ. ಉಳಿದವರನ್ನು ಬಂಧಿಸಲು ಕ್ರಮ ಕೈಗೊಳ್ಳಲಾಗಿದೆ ಎಂದು ಡಿಎಸ್‍ಪಿ ತಿಳಿಸಿದ್ದಾರೆ.